ಮೆಡಿಕವರ್ ಆಸ್ಪತ್ರೆಯಲ್ಲಿ 61 ವಯಸ್ಸಿನ ವ್ಯಕ್ತಿಗೆ ಯಶಸ್ವಿ ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಶಸ್ತ್ರಚಿಕಿತ್ಸೆ 

ಬೆಂಗಳೂರು: ಹಲವು ತಿಂಗಳುಗಳಿಂದ ಎಡಗೈ ನೋವು ಹಾಗೂ ಜಂಜಳಿಕೆಯ ಸಮಸ್ಯೆಯಿಂದ ಬಳಲುತ್ತಿದ್ದ 61 ವರ್ಷದ ಗೋಪಾಲ್ ರೆಡ್ಡಿ ಅವರಿಗೆ ಮೆಡಿಕವರ್ ಆಸ್ಪತ್ರೆಯ ನ್ಯೂರೋಸರ್ಜರಿ ತಜ್ಞರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊಸ ಬದುಕು ನೀಡಿದ್ದಾರೆ.

ರೋಗಿ ಎಡಗೈ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಗತ್ಯ ವೈದ್ಯಕೀಯ ಪರೀಕ್ಷೆಗಳು ಹಾಗೂ ಸ್ಕ್ಯಾನಿಂಗ್ ಬಳಿಕ, ಅವರ ಕುತ್ತಿಗೆ ಮತ್ತು ಮೇಲ್ಭಾಗದ ಮೆದುಳುರಜ್ಜುವಿನ (C6-D1) ಭಾಗದಲ್ಲಿ ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಇರುವುದನ್ನು ವೈದ್ಯರು ಪತ್ತೆಹಚ್ಚಿದರು. ಈ ಹಿನ್ನೆಲೆಯಲ್ಲಿ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಸಲಹೆ ನೀಡಿ ವಾಸ್ತವ ವಿಚಾರ ವಿವರಿಸಿದರು.

ನಂತರ ಮೆಡಿಕವರ್ ಆಸ್ಪತ್ರೆಯ ಹಿರಿಯ ನ್ಯೂರೋಸರ್ಜನ್ ಮತ್ತು ಸ್ಪೈನ್ ಸರ್ಜನ್ ಡಾ. ಆನಂದ್ ವಿಕೆ ಅವರ ನೇತೃತ್ವದಲ್ಲಿ ಡಾ ಯಶವಂತ್ ಜೊತೆಗೂಡಿ “C6-D1 ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಎಕ್ಸಿಷನ್” ಎಂಬ ಸೂಕ್ಷ್ಮ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಯಿತು.

ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಅಗತ್ಯ ಚಿಕಿತ್ಸೆ, ಆಂಟಿಬಯೋಟಿಕ್ಸ್ ಮತ್ತು ಬೆಂಬಲಕಾರಿ ಔಷಧೋಪಚಾರ ನೀಡಲಾಗಿದ್ದು, ಅವರ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂದಿದೆ. ಪ್ರಸ್ತುತ ರೋಗಿ ಸ್ಥಿರ ಆರೋಗ್ಯ ಸ್ಥಿತಿಯಲ್ಲಿದ್ದು, ವೈದ್ಯರು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಡಾ. ಆನಂದ್ ವಿಕೆ, “ಸ್ಪೈನಲ್ ಕಾರ್ಡ್ ಟ್ಯೂಮರ್‌ಗಳು ಆರಂಭಿಕ ಹಂತದಲ್ಲೇ ಪತ್ತೆಯಾದರೆ ಯಶಸ್ವಿಯಾಗಿ ಚಿಕಿತ್ಸೆ ನೀಡಲು ಸಾಧ್ಯ. ಕೈಗಳಲ್ಲಿ ನೋವು, ಜಂಜಳಿಕೆ, ದುರ್ಬಲತೆ ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ತಜ್ಞರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ” ಎಂದು ತಿಳಿಸಿದ್ದಾರೆ. ಈ ಶಸ್ತ್ರಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ರಿಜನಲ್ ಮುಖ್ಯಸ್ಥರಾದ ಕೆ ಸಿದ್ದಾರೆಡ್ಡಿ ಮತ್ತು ಆಸ್ಪತ್ರೆಯ ಆಡಳಿತ ಅಧಿಕಾರಿ ಜಿ ಕೃಷ್ಣಮೂರ್ತಿಯವರು ಸಂತಸ ವ್ಯಕ್ತಪಡಿಸಿದರು.

Related Articles

Comments (0)

Leave a Comment