ಬಾಲಿ–ಬೆಂಗಳೂರು ಸಾಂಸ್ಕೃತಿಕ ಬಂಧ: ಸಿಲಿಕಾನ್ ಸಿಟಿಯಲ್ಲಿ ಜಾಗತಿಕ ಕಲಾ ಮೇಳ; ಕೆಚಕ್-ಯಕ್ಷಗಾನ ಸಂಗಮಕ್ಕೆ ಕೇಂದ್ರ ಸಚಿವರ ಶ್ಲಾಘನೆ!
- by Suddi Team
- October 19, 2026
- 20 Views
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ತಂತ್ರಜ್ಞಾನದ ಹಬ್ ಮಾತ್ರವಲ್ಲ, ಜಾಗತಿಕ ಕಲೆ ಮತ್ತು ವೈವಿಧ್ಯಮಯ ಸಂಸ್ಕೃತಿಗಳನ್ನು ಸಮ್ಮಿಲನಗೊಳಿಸುವ ಜೀವಂತ ತಾಣ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪರಮ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಬಾಲಿ ಇನ್ ಬೆಂಗಳೂರು’ (Bali in Bengaluru) ಸಾಂಸ್ಕೃತಿಕ ಮಹೋತ್ಸವವು ನಗರದಲ್ಲಿ ಅತ್ಯಂತ ಅದ್ಧೂರಿಯಾಗಿ ಸಂಪನ್ನಗೊಂಡಿದೆ.
ಈ ಮಹೋತ್ಸವಕ್ಕೆ ವಿಡಿಯೊ ಸಂದೇಶದ ಮೂಲಕ ವಿಶೇಷ ಶುಭ ಹಾರೈಕೆ ಸಲ್ಲಿಸಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, “ಕಲೆ ಮತ್ತು ಸಂಸ್ಕೃತಿಗೆ ಭೌಗೋಳಿಕ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ಜನರನ್ನು ಒಗ್ಗೂಡಿಸುವ ಅದ್ಭುತ ಶಕ್ತಿಯಿದೆ. ಭಾರತ ಮತ್ತು ಇಂಡೋನೇಷ್ಯಾದ ನಡುವಿನ ಪ್ರಾಚೀನ ನಾಗರಿಕತೆಯ ಪರಂಪರೆಯನ್ನು ಈ ಉತ್ಸವವು ಮತ್ತಷ್ಟು ಹತ್ತಿರ ತಂದಿದೆ” ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.
16 ದಿನಗಳ ಕಲಾ ಕಲರವ:
ಅಕ್ಟೋಬರ್ 3ರಿಂದ 18ರವರೆಗೆ ಒಟ್ಟು 16 ದಿನಗಳ ಕಾಲ ಬೆಂಗಳೂರಿನ 14 ಪ್ರಮುಖ ಸ್ಥಳಗಳಲ್ಲಿ 16ಕ್ಕೂ ಹೆಚ್ಚು ವೈವಿಧ್ಯಮಯ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಕೇವಲ ಕಲಾ ಪ್ರದರ್ಶನಗಳಷ್ಟೇ ಅಲ್ಲದೆ, ಕಾರ್ಯಾಗಾರಗಳು, ಉಪನ್ಯಾಸಗಳು ಹಾಗೂ ಉಭಯ ದೇಶಗಳ ಕಲಾವಿದರ ನಡುವಿನ ನೇರ ಸಂವಾದಗಳು ಕಲಾಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿದವು. ಭಾರತ ಮತ್ತು ಇಂಡೋನೇಷ್ಯಾ ನಡುವಿನ ಪ್ರಾಚೀನ ರಾಮಾಯಣ ಆಧಾರಿತ ಪುರಾಣ ಕಥನಗಳು ಹಾಗೂ ಕಲಾ ಸಂಬಂಧಗಳನ್ನು ಮರುಶೋಧಿಸುವ ಸೃಜನಶೀಲ ವಿನಿಮಯಕ್ಕೆ ಈ ವೇದಿಕೆ ಸಾಕ್ಷಿಯಾಯಿತು.
ಕೆಚಕ್ನಿಂದ ಯಕ್ಷಗಾನದವರೆಗೆ ಅಪೂರ್ವ ಸಂಗಮ:
ಉತ್ಸವದ ಪ್ರಮುಖ ಆಕರ್ಷಣೆಯಾಗಿ ಬಾಲಿಯ ವಿಶ್ವವಿಖ್ಯಾತ ‘ಕೆಚಕ್’ (Kecak) ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪದ್ಮಶ್ರೀ ಪುರಸ್ಕೃತ ಡಾ. ಐ. ವಯಾನ್ ಡಿಬಿಯಾ ಹಾಗೂ ಅವರ ನುರಿತ ಕಲಾವಿದರ ತಂಡವು ಬಾಲಿಯ ಪ್ರದರ್ಶನ ಕಲೆಗಳ ದಶಕಗಳ ಜ್ಞಾನವನ್ನು ಕರುನಾಡಿನ ಕಲಾಪ್ರೇಮಿಗಳೊಂದಿಗೆ ಹಂಚಿಕೊಂಡಿತು. ಬಾಲಿಯ ಸಾಂಪ್ರದಾಯಿಕ ‘ಗಮೆಲಾನ್’ ಸಂಗೀತ, ಮುಖವಾಡ ತಯಾರಿಕೆ ಕಮ್ಮಟ ಹಾಗೂ ಇಂಡೋನೇಷ್ಯಾದ ಸಾಂಪ್ರದಾಯಿಕ ‘ವಾಯಾಂಗ್’ ತೊಗಲುಗೊಂಬೆಯಾಟದ ಪ್ರಾತ್ಯಕ್ಷಿಕೆಗಳು ಉತ್ಸವದ ರಂಗನ್ನು ಹೆಚ್ಚಿಸಿದವು. ವಿಶೇಷವಾಗಿ ಬಾಲಿಯ ‘ಕೆಚಕ್’ ಶೈಲಿ ಮತ್ತು ಕರ್ನಾಟಕದ ಹೆಮ್ಮೆಯ ಯಕ್ಷಗಾನದ ಜಂಟಿ ಜುಗಲ್ಬಂದಿ ಅಪೂರ್ವ ಕಲಾತ್ಮಕ ಸಂವಾದಕ್ಕೆ ಹೊಸ ಭಾಷ್ಯ ಬರೆಯಿತು.
ಸಂವಾದದ ವೇದಿಕೆ: ಬಾಲಿಯ ಕಲಾವಿದರು, ಭಾರತೀಯ ರಂಗಕರ್ಮಿಗಳು, ವಿದ್ಯಾರ್ಥಿಗಳು ಮತ್ತು ಕಲಾ ಸಂಶೋಧಕರು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿ ಸಾಂಸ್ಕೃತಿಕ ಅನುಭವಗಳನ್ನು ಹಂಚಿಕೊಂಡರು.
ಮೈಲಿಗಲ್ಲು: ಕಲೆ, ಆಹಾರ ಮತ್ತು ಸಂಸ್ಕೃತಿಯ ಸಮನ್ವಯದೊಂದಿಗೆ ಈ ಮಹೋತ್ಸವವು ಬೆಂಗಳೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿ ದಾಖಲಾಗಿದೆ.
Related Articles
Thank you for your comment. It is awaiting moderation.


Comments (0)