ಬಂಡೀಪುರ ವನ್ಯಜೀವಿ ಅಪರಾಧ ಪ್ರಕರಣ: ಅರಣ್ಯ ಅಧಿಕಾರಿಗಳ ಕರ್ತವ್ಯಲೋಪ ತನಿಖೆಗೆ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆದೇಶ
- by Suddi Team
- October 15, 2026
- 10 Views
ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿಯೊಂದು ಉರುಳಿಗೆ ಸಿಲುಕಿ ಮೃತಪಟ್ಟಿರುವುದು ಹಾಗೂ ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಕಾಡಾನೆಯ ದಂತ ನಾಪತ್ತೆಯಾಗಿರುವ ಘಟನೆಗಳನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರ ಮತ್ತು ಆತಂಕಕಾರಿ ಸಂಗತಿಯಾಗಿ ಪರಿಗಣಿಸಿದೆ. ಈ ಕೃತ್ಯಗಳ ಕುರಿತು ಸಮಗ್ರ ವೈಜ್ಞಾನಿಕ ತನಿಖೆ ನಡೆಸಿ, ಅರಣ್ಯ ಅಧಿಕಾರಿಗಳ ಕರ್ತವ್ಯಲೋಪವನ್ನು ಪರಿಶೀಲಿಸಿ ಕೇವಲ ಒಂದು ವಾರದೊಳಗೆ ವಿವರವಾದ ವರದಿ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (PCCF) ಆದೇಶ ನೀಡಿದ್ದಾರೆ.
ಹುಲಿ ಸಂರಕ್ಷಿತ ಪ್ರದೇಶದ ಅತ್ಯಂತ ಆಳವಾದ ಅರಣ್ಯ ಭಾಗದಲ್ಲಿಯೇ ಇಂತಹ ಘಟನೆಗಳು ನಡೆದಿರುವುದು ಅರಣ್ಯ ಇಲಾಖೆಯ ಗಸ್ತು ವ್ಯವಸ್ಥೆ, ಮೇಲ್ವಿಚಾರಣೆ ಮತ್ತು ವನ್ಯಜೀವಿಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದು ಸಚಿವರು ತಮ್ಮ ಅಧಿಕೃತ ಟಿಪ್ಪಣಿ ಸಂಖ್ಯೆ ‘ಅಜೀಪಸ/1008/2026’ರಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯದೊಳಗೆ ಕಳ್ಳಬೇಟೆಗಾರರು ಪ್ರವೇಶಿಸಲು ಹೇಗೆ ಸಾಧ್ಯವಾಯಿತು? ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ? ಗಸ್ತು ನಿಗಾ ವ್ಯವಸ್ಥೆಯಲ್ಲಿ ಲೋಪಗಳಿವೆಯೇ? ಎಂಬ ಪ್ರಶ್ನೆಗಳಿಗೆ ಇಲಾಖೆ ತಕ್ಷಣವೇ ಸ್ಪಷ್ಟ ಉತ್ತರ ನೀಡಬೇಕಾಗಿದೆ.
ಆದೇಶದಲ್ಲಿರುವ ಪ್ರಮುಖ ನಿರ್ದೇಶನಗಳು:
ವೈಜ್ಞಾನಿಕ ತನಿಖೆ ಮತ್ತು ಸಾಕ್ಷ್ಯ ಸಂರಕ್ಷಣೆ: ಅರಣ್ಯದಲ್ಲಿ ಉರುಳು ಅಳವಡಿಸಿದವರು ಯಾರು, ಕಾಡಾನೆಯ ದಂತಗಳು ಹೇಗೆ ನಾಪತ್ತೆಯಾಗಿವೆ ಹಾಗೂ ಇದರಲ್ಲಿ ಕಳ್ಳಬೇಟೆಗಾರರ ಕೈವಾಡವಿದೆಯೇ ಎಂಬುದನ್ನು ಪತ್ತೆಹಚ್ಚಬೇಕು. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿರುವುದರಿಂದ, ಲಭ್ಯವಿರುವ ಮರಣೋತ್ತರ ಪರೀಕ್ಷೆ ಹಾಗೂ ಪ್ರಯೋಗಾಲಯ ವರದಿಗಳನ್ನು ಆಧರಿಸಿ ಭೌತಿಕ ಸಾಕ್ಷ್ಯಗಳು ಮತ್ತು ಗಸ್ತು ಪುಸ್ತಕಗಳನ್ನು ಪರಿಶೀಲಿಸಬೇಕು. ತನಿಖೆಯ ಸಂದರ್ಭದಲ್ಲಿ ಯಾವುದೇ ಸಾಕ್ಷ್ಯ ನಾಶವಾಗದಂತೆ ಹಾಗೂ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಸಿಬ್ಬಂದಿಗಳ ಹೊಣೆಗಾರಿಕೆ ಮತ್ತು ಶಿಸ್ತು ಕ್ರಮ: ಘಟನೆ ನಡೆದ ಪ್ರದೇಶದಲ್ಲಿ ಕೊನೆಯ ಬಾರಿ ಗಸ್ತು ನಡೆಸಿದ ದಿನಾಂಕ ಮತ್ತು ಸಮಯ, ಗಸ್ತು ಪುಸ್ತಕಗಳು ಹಾಗೂ ಬೀಟ್ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಸಂಬಂಧಪಟ್ಟ ಅರಣ್ಯ ವಲಯಾಧಿಕಾರಿಗಳು (RFO), ಉಪ ವಲಯ ಅರಣ್ಯಾಧಿಕಾರಿಗಳು (DRFO), ಬೀಟ್ ಸಿಬ್ಬಂದಿ ಹಾಗೂ ಮೇಲ್ವಿಚಾರಣಾ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಅಥವಾ ಕರ್ತವ್ಯಲೋಪ ಕಂಡುಬಂದಲ್ಲಿ ಅನ್ವಯಿಸುವ ನಿಯಮಗಳ ಪ್ರಕಾರ ತಕ್ಷಣವೇ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು.
ಡಿಸಿಎಫ್ ಮತ್ತು ಎಸಿಎಫ್ಗಳಿಗೆ ಕಡ್ಡಾಯ ಕ್ಷೇತ್ರ ಪರಿಶೀಲನೆ: ಇಂದಿನಿಂದಲೇ ರಾಜ್ಯದ ಎಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (DCF) ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು (ACF) ಕಚೇರಿಗಳಲ್ಲಿ ಕುಳಿತು ವರದಿಗಳನ್ನು ಪಡೆಯುವುದಕ್ಕೆ ಸೀಮಿತವಾಗದೆ, ಕಡ್ಡಾಯವಾಗಿ ಕ್ಷೇತ್ರ ಪರಿಶೀಲನೆ ನಡೆಸಬೇಕು. ವಿಶೇಷವಾಗಿ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಸೂಕ್ಷ್ಮ ಅರಣ್ಯ ವಲಯಗಳಿಗೆ ಖುದ್ದಾಗಿ ಭೇಟಿ ನೀಡಿ ಗಸ್ತು ವ್ಯವಸ್ಥೆ, ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಣದ ಕುರಿತು ನೇರವಾಗಿ ಪರಿಶೀಲನೆ ನಡೆಸಬೇಕು ಮತ್ತು ಇದರ ಸೂಕ್ತ ದಾಖಲೆಗಳನ್ನು ನಿರ್ವಹಿಸಬೇಕು.
ಭದ್ರತಾ ವ್ಯವಸ್ಥೆ ಬಲಪಡಿಸುವುದು: ಬಂಡೀಪುರ ಸೇರಿದಂತೆ ರಾಜ್ಯದ ಇತರ ಪ್ರಮುಖ ಅರಣ್ಯ ಪ್ರದೇಶಗಳಲ್ಲಿಯೂ ಗಸ್ತು ಮತ್ತು ಭದ್ರತಾ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಬೇಕು. ಕಳ್ಳಬೇಟೆ, ಉರುಳುಗಳ ಅಳವಡಿಕೆ ಹಾಗೂ ವನ್ಯಜೀವಿಗಳ ಅಂಗಾಂಗಗಳ ಅಕ್ರಮ ಸಾಗಣೆ ತಡೆಯಲು ಅಗತ್ಯವಿರುವ ಕಡೆಗಳಲ್ಲಿ ತಾಂತ್ರಿಕ ನಿಗಾ ವ್ಯವಸ್ಥೆ ಮತ್ತು ಸ್ಥಳೀಯ ಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸಬೇಕು.
ಈಗಾಗಲೇ ರಚನೆಯಾಗಿರುವ ವಿಶೇಷ ತನಿಖಾ ತಂಡದ ತನಿಖೆಯ ಪ್ರಗತಿ, ಘಟನೆಗಳ ಸಂಭವನೀಯ ಕಾರಣಗಳು ಮತ್ತು ಪತ್ತೆಯಾದ ಲೋಪಗಳ ಕುರಿತು ಒಂದು ವಾರದೊಳಗೆ ಸಮಗ್ರ ಹಾಗೂ ವಿವರವಾದ ವರದಿಯನ್ನು ಸಲ್ಲಿಸುವಂತೆ ಸಚಿವರು ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. ವನ್ಯಜೀವಿಗಳ ರಕ್ಷಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಈ ಆದೇಶದ ಮೂಲಕ ಇಲಾಖೆಗೆ ಸ್ಪಷ್ಟಪಡಿಸಲಾಗಿದೆ.
Related Articles
Thank you for your comment. It is awaiting moderation.


Comments (0)