ಪ್ರಿಯಾಂಕ್ ಖರ್ಗೆ ಗೃಹಮಂತ್ರಿ ಹುದ್ದೆಗೆ ನಾಲಾಯಕ್; ದಲಿತರ ಹೆಸರಿನಲ್ಲಿ ಲೂಟಿ: ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ
- by Suddi Team
- October 15, 2026
- 6 Views
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಸಂಚು, ಮೀಸಲಾತಿ ರಾಜಕಾರಣ ಹಾಗೂ ಕೆಪಿಎಸ್ಸಿ ಅಕ್ರಮದ ವಿಚಾರವಾಗಿ ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮತ್ತೊಮ್ಮೆ ಅತ್ಯಂತ ತೀಕ್ಷ್ಣ ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧ ಸರಣಿ ಆರೋಪಗಳನ್ನು ಮಾಡಿರುವ ಅವರು, ಗೃಹ ಸಚಿವರನ್ನು “ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ನ ಭಾಗ” ಎಂದು ಕರೆದಿದ್ದಾರೆ.
ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ್ದೀರಿ:
ಮುಖ್ಯಮಂತ್ರಿಗಳ ಪದಚ್ಯುತಿಗೆ ಕಾರಣವಾದ ಸ್ಟಿಂಗ್ ಸಂಚಿನಲ್ಲಿ ಗೃಹ ಸಚಿವರೇ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ, “ನಿಮ್ಮದೇ ಪಕ್ಷದ ಹಿರಿಯ ನಾಯಕನನ್ನು ಟ್ರ್ಯಾಪ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು, ಅಮಾಯಕರ ಬೆನ್ನತ್ತಿರುವ ನೀವು ಗೃಹಮಂತ್ರಿ ಹುದ್ದೆಗೆ ತೀರಾ ನಾಲಾಯಕ್. ಆ ನಟೋರಿಯಸ್ ಸ್ಟಿಂಗ್ಪಿನ್ನನ್ನು ಬಂಧಿಸಲು ನಿಮಗೆ ಯೋಗ್ಯತೆ ಇಲ್ಲ. ಆತ ಬಂದು ನಿಮ್ಮದೇ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ಇಲಾಖೆಯ ನಿವೃತ್ತ ಐಪಿಎಸ್ ಅಧಿಕಾರಿಗೆ ಕೊಲೆ ಬೆದರಿಕೆ ಹಾಕುತ್ತಾನೆ ಮತ್ತು ಪೊಲೀಸ್ ಅಧಿಕಾರಿಗಳನ್ನೇ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡುತ್ತಾನೆ. ಅವನನ್ನು ಸೆದೆಬಡಿಯುವುದು ಬಿಟ್ಟು ಬರೀ ಪುಂಗಿ ಬಿಡುತ್ತಿದ್ದೀರಿ” ಎಂದು ಆಕ್ರೋಶ ಹೊರಹಾಕಿದ್ದಾರೆ.
‘ಬಲಿತ ದಲಿತ’ರೇ, ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ:
ಮೀಸಲಾತಿ ದುರುಪಯೋಗದ ಕುರಿತು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿಕೆ, “ಸಿದ್ದಾರ್ಥ ಹಾಗೂ ಡಾ. ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ ಬಲಿತ ದಲಿತನೇ, ನಿಮಗೆ ಮತ್ತು ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ ಅನುಭವಿಸುತ್ತೀರಿ? ಧೈರ್ಯವಿದ್ದರೆ ನಿಮ್ಮ ಮೀಸಲು ಕ್ಷೇತ್ರವನ್ನು ಬೇರೆ ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು, ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬನ್ನಿ. ಅಸಲಿ ದಲಿತರಿಗೆ ಅಧಿಕಾರ ನೀಡಿ” ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಅಂಗಲಾಚುವವನಲ್ಲ ಈ ಕುಮಾರಸ್ವಾಮಿ:
ಜೆಡಿಎಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಕ್ರಮಗಳ ವಿರುದ್ಧ ಎಚ್ಚರಿಕೆ ನೀಡಿದ ಅವರು, “ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಚೆನ್ನಾಗಿ ಗೊತ್ತು. ರನ್ನಿಂಗ್ ರೇಸ್ ಮಾಡುವುದು ಅಥವಾ ಕಾನೂನಿಗೆ ಹೆದರಿ ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ ಮತ್ತು ಸ್ಟಿಂಗ್ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ನೀವು ಎಷ್ಟು ಕಡೆ ಓಟ ನಡೆಸಿದ್ದೀರಿ ಎಂಬುದು ನನಗೆ ಗೊತ್ತಿದೆ. ಯಾರ ಮುಂದೆಯೂ ಅಂಗಲಾಚುವವನಲ್ಲ ಈ ಕುಮಾರಸ್ವಾಮಿ. ನಾನು ಪೊಲೀಸ್ ಕಮಿಷನರ್ ಬಳಿ ಏನು ಹೇಳಿದ್ದೇನೆ ಎಂಬುದನ್ನು ಮೊದಲು ತಿಳಿದುಕೊಳ್ಳಿ” ಎಂದು ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.
Related Articles
Thank you for your comment. It is awaiting moderation.


Comments (0)