ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು: ಶ್ರೀ ರಂಭಾಪುರಿ ಜಗದ್ಗುರುಗಳು ನುಡಿ

ಜಮಖಂಡಿ: ಸಮಸ್ತ ಜಗತ್ತಿನ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ ಕಾರಣವಾಗಿದೆ. ಸುಖದ ಮೂಲ ಧರ್ಮಾಚರಣೆಯಲ್ಲಿದೆ ಹೊರತು ಭೋಗದಲ್ಲಲ್ಲ. ಸತ್ಯ ಮತ್ತು ಶಾಂತಿಯ ಬದುಕಿಗೆ ಆದರ್ಶ ಮೌಲ್ಯಗಳ ಪರಿಪಾಲನೆ ಮುಖ್ಯವಾಗಿದ್ದು, ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನವೇ ಭಾರತದ ಉಸಿರಾಗಿದೆ ಎಂದು ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನದ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶಿಸಿದರು.

ನಗರದಲ್ಲಿ ಆಯೋಜಿಸಲಾಗಿದ್ದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಆರನೇ ದಿನದ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಧರ್ಮ ಮತ್ತು ಮಾನವೀಯತೆಯ ಸಂದೇಶ:

ಜಗದ್ಗುರುಗಳು ತಮ್ಮ ಪ್ರವಚನದಲ್ಲಿ, “ಮಾನವ ಪರಿಪೂರ್ಣತೆಯೆಡೆಗೆ ಸಾಗುವುದೇ ನಿಜವಾದ ಧರ್ಮ. ಸತ್ಯ ಮತ್ತು ಪ್ರಾಮಾಣಿಕತೆಗಿಂತ ಹೆಚ್ಚು ಉಪಯುಕ್ತವಾದ ಧರ್ಮ ಇನ್ನೊಂದಿಲ್ಲ. ಸತ್ಯವೇ ಒಂದು ಧರ್ಮ. ಇದು ಧರ್ಮವನ್ನು ರಕ್ಷಿಸುವ ರಕ್ಷಾ ಕವಚವಾಗಿದೆ. ಸತ್ಯದ ರಕ್ಷಾ ಕವಚ ಕಳಚಿಬಿದ್ದರೆ ಧರ್ಮ ಸಂಸ್ಕೃತಿ ಮತ್ತು ಮಾನವ ಸಂಬಂಧಗಳು ನಶಿಸಿಹೋಗುತ್ತವೆ. ಮಾನವೀಯ ಸಂಬಂಧಗಳನ್ನು ಬೆಸೆಯುವುದೇ ಧರ್ಮದ ಮೂಲ ಗುರಿಯಾಗಿದೆ. ಮನುಷ್ಯನಲ್ಲಿರುವ ಅಸುರಿ ಗುಣಗಳನ್ನು ನಾಶಪಡಿಸಿ, ದೈವೀ ಗುಣಗಳನ್ನು ಬೆಳೆಸಿಕೊಳ್ಳಲು ಧರ್ಮದ ಅಗತ್ಯವಿದೆ. ಬದುಕಿನ ಹಿರಿಮೆ ಮತ್ತು ರಹಸ್ಯ ಅಡಗಿರುವುದೇ ನಿಜವಾದ ಧರ್ಮದಲ್ಲಿ. ಮನುಷ್ಯ ಜೀವನವನ್ನು ಶುದ್ಧ ಹಾಗೂ ಸುಂದರಗೊಳಿಸುವುದೇ ಧರ್ಮದ ಗುರಿಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾ ಸತ್ಯ ಆಶ್ರಯಿಸಿ ಭವ್ಯತೆಯಿಂದ ದಯಾ, ಕ್ಷಮಾ, ದಾನ, ಪೂಜಾ, ಜಪ ಮತ್ತು ಧ್ಯಾನ ಎಂಬ ದಶವಿಧ ಧರ್ಮ ಸೂತ್ರಗಳನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ. ಧರ್ಮಕ್ಕೆ ಸಾವು ಇಲ್ಲ, ಅದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮನುಷ್ಯನಿಗೆ ಹೆತ್ತ ತಾಯಿ, ಹೊತ್ತ ನೆಲ ಎಷ್ಟು ಮುಖ್ಯವೋ, ಅಷ್ಟೇ ಧರ್ಮ ಮುಖ್ಯ ಎಂಬುದನ್ನು ಯಾರೂ ಮರೆಯಬಾರದು” ಎಂದು ಮಾರ್ಮಿಕವಾಗಿ ನುಡಿದರು.

ಇದೇ ವೇಳೆ, ಶ್ರೀ ಮದ್ವೀರಶೈವ ಸೂರ್ಯಸಿಂಹಾಸನ ಸಂಸ್ಥೆಯಿಂದ ಪ್ರಕಟಗೊಂಡ 2027ನೇ ಸಾಲಿನ ದಿನದರ್ಶಿಕೆ (ಕ್ಯಾಲೆಂಡರ್) ಅನ್ನು ಜಗದ್ಗುರುಗಳು ಲೋಕಾರ್ಪಣೆ ಮಾಡಿದರು

ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಚಿಂತನೆ ಅಗತ್ಯ:

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆಹಾರ ವಿಹಾರ ಧರ್ಮ ಸಂಸ್ಕೃತಿ ದೇವರು ಆಧ್ಯಾತ್ಮಿಕ ನಿಷ್ಠೆಯೊಂದಿಗೆ ತತ್ವಜ್ಞಾನದ ವೈಜ್ಞಾನಿಕ ಚಿಂತನೆಗಳ ಅರಿವು ಅಗತ್ಯ. ತನ್ಮೂಲಕ ಋಷಿಮುನಿಗಳ ಜೀವಾಳದ ಸತ್ಚಿಂತನೆಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರೂ ಬದುಕನ್ನು ಸುಗಮಗೊಳಿಸಬೇಕು. ಶಾಂತಿ ನೆಮ್ಮದಿಯ ಬದುಕಿಗೆ ಧರ್ಮ ಮತ್ತು ಧರ್ಮಾಚರಣೆ ಪೂರಕ. ಸಂಸ್ಕೃತಿ ಸಮೃದ್ಧಿಗಾಗಿ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಕಲ ಜೀವರಾಶಿಯಲ್ಲಿ ಸೌಹಾರ್ದತೆ ತತ್ವ ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಜಮಖಂಡಿ ನಗರದಲ್ಲಿ ಜರುಗುತ್ತಿರುವ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನವು ಸಮಷ್ಟಿ ಪ್ರಜ್ಞೆಯನ್ನು ಹೊಂದಿದ್ದು, ಸಮಾಜದಲ್ಲಿ ಶಾಂತಿ, ಸಾಮರಸ್ಯ ಸೌಹಾರ್ದತೆ ಬೆಳೆಸುವ ಅಪೂರ್ವ ಸಮಾರಂಭವಾಗಿದೆ ಎಂದರು.

ಸಮಾರಂಭದಲ್ಲಿ ಉಪನ್ಯಾಸ ನೀಡಿದ ಹರಪನಹಳ್ಳಿ ತಾಲೂಕಿನ ನೀಲಗುಂದದ ಅಡವಿಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಧಾರ್ಮಿಕ ಆದರ್ಶ ಮೌಲ್ಯಗಳು ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ಸಮಾಜವನ್ನು ಸುಂದರ ಮತ್ತು ಶಾಂತಿಯುತವಾಗಿಸುತ್ತವೆ. ಧರ್ಮದ ನಿಜವಾದ ಉಪದೇಶ ಮನುಷ್ಯನನ್ನು ಮಾನವನನ್ನಾಗಿ ಪರಿವರ್ತಿಸುವುದು ಮತ್ತು ಸಕಲ ಜೀವಿಗಳ ಉದ್ಧಾರಕ್ಕಾಗಿ ಶ್ರಮಿಸುವುದಾಗಿದೆ. ಧಾರ್ಮಿಕ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ ಸಾಮರಸ್ಯ ಸಹಬಾಳ್ವೆ ಮತ್ತು ಪರಸ್ಪರ ಗೌರವ ಬೆಳೆಸಬೇಕಾಗಿದೆ. ಧರ್ಮವು ಕೇವಲ ಪೂಜೆ ಆಚರಣೆ ಮತ್ತು ಸಂಪ್ರದಾಯಗಳಿಗೆ ಸೀಮಿತವಾಗದೇ ಮಾನವೀಯತೆ, ಪ್ರೀತಿ, ಕರುಣೆ ಹಾಗೂ ಸಮಾನತೆ ಮತ್ತು ಸೇವಾ ಮನೋಭಾವ ಬೆಳೆಸುವ ಜೀವನ ಮಾರ್ಗವಾಗಿದೆ ಎಂದರು.

ನೇತೃತ್ವ ವಹಿಸಿದ್ದ ಗುಳೇದಗುಡ್ಡದ ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಗವಂತನ ಸಾನ್ನಿಧ್ಯವು ನಿಜವಾದ ಧನದ ಅಮೂಲ್ಯ ಸಂಪತ್ತು. ದೇವರು ಎಲ್ಲರಲ್ಲಿಯೂ ಇರುವನು, ಆದರೆ ಎಲ್ಲರೂ ದೇವರಲ್ಲಿಲ್ಲ. ಕ್ರಿಯಾಶೀಲ ಬದುಕು ಜೀವನದ ಶ್ರೇಯಸ್ಸಿಗೆ ಕಾರಣ. ಎಲ್ಲರಲ್ಲೂ ಧರ್ಮ ಸಂಸ್ಕೃತಿಯ ಕಾಯಕ ಧರ್ಮಕ್ಕೆ ಬಹುಮುಖ್ಯ ಮಹತ್ವ ಕೊಟ್ಟಿದ್ದಾರೆ. ಈ ಜಗದ್ಗುರು ರೇಣುಕಾಚಾರ್ಯರ ಕಾಯಕವೇ ಕೈಲಾಸವೆಂಬುದನ್ನು ಶರಣರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಸತ್ಯ ನುಡಿಯುವ ಪ್ರಾಮಾಣಿಕತೆಯಿಂದ ಬಾಳುವ ಆದರ್ಶ ಗುಣಗಳು ಬೆಳೆದುಕೊಂಡು ಬರಬೇಕಾಗಿದೆ. ಬಡವರು ದುರ್ಬಲರು ಅಸಹಾಯಕರು ಹಾಗೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯ ಧರ್ಮವಾಗಿದೆ. ನ್ಯಾಯದ ಪರವಾಗಿ ನಿಲ್ಲುವುದು, ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದು ಮತ್ತು ಅನ್ಯಾಯವನ್ನು ಎದುರಿಸುವುದು ಧಾರ್ಮಿಕ ಆದರ್ಶಗಳಾಗಿವೆ. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಯಾತ್ರೆಯು ಸಕಲ ರಂಗುಗಳ ಸನ್ಮಾರ್ಗಗಳಿಗೆ ಕರೆದೊಯ್ಯುತ್ತದೆ ಎಂದು ಸಂಶೋಧನೆ ವ್ಯಕ್ತಪಡಿಸಿದರು. ಜಮಖಂಡಿ ಮುತ್ತಿನಕೇರಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಮಷ್ಟಿ ವಹಿಸಿದ್ದರು.

ಗಣ್ಯರು ಹಾಗೂ ಮಠಾಧೀಶರ ಉಪಸ್ಥಿತಿ:

ಸಮಾವೇಶದಲ್ಲಿ ಮರೇಗುದ್ದಿ ಪ್ರಭು ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಕಾಸನಕೋಡ ಸ್ವಾಮಿಗಳು, ಗುರುದೇವ ಆಶ್ರಮ ಹುಲ್ಲಹಳ್ಳಿ, ಗುಹೇಶ್ವರ ದೇವಸ್ಥಾನದ ಸ್ವಾಮಿಗಳು, ಶಿವಾನಂದಮಠ ಮೈಗೂರ, ಶ್ರೀದೇವಿ ಅಮ್ಮನವರು ಓಂಕಾರ ಆಶ್ರಮ ಹುಲ್ಲಹಳ್ಳಿ, ಬಸವಲಿಂಗ ದೇವರು ಕಲ್ಲಹಳ್ಳಿ ಬಿರಡಿ, ಜಮಖಂಡಿಯ ಶ್ರೀಮತಿ ಶಾರದಾ ಮೂಲದೇವ, ಮಹೇಶ ಸಿ. ಕಂಕಣವಾಡಿ, ಬಸಲಿಂಗಯ್ಯ ಕಲ್ಲಹಳ್ಳಿ ಹಿರೇಮಠ, ಸದಾಶಿವ ಪಾಟೀಲ ತುಬಚಿ, ಮಹಾದೇವ ಬಿ. ನ್ಯಾಯಮೂರ್ತಿ ಕುಂಚನೂರ, ರಾಜುಗೌಡ ಪಾಟೀಲ ಕಲ್ಲಹಳ್ಳಿ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಇದೇ ವೇಳೆ ಮಾಜಿ ಶಾಸಕರಾದ ಶ್ರೀಕಾಂತ್ ಕುಲಕರ್ಣಿ ಉಪಸ್ಥಿತರಿದ್ದರು.

ಸಮಾರಂಭದ ಆರಂಭದಲ್ಲಿ ಮಲ್ಲಿಕಾರ್ಜುನ ಇಂಗಳಗಿ ಅವರು ಎಲ್ಲರನ್ನೂ ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಹಾಗೂ ಗಾನಸುಧಾ ಶ್ರೀ ಐರೇಶ ಕಿತ್ತೂರ ಗದಗ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶಿವಮೊಗ್ಗದ ಶಾಂತಾ ಆನಂದ್ ಇವರಿಂದ ಇಡೀ ಕಾರ್ಯಕ್ರಮದ ನಿರೂಪಣೆ ಯಶಸ್ವಿಯಾಗಿ ನಡೆಯಿತು.

 

 

Related Articles

Comments (0)

Leave a Comment