ದಸರಾ ಧರ್ಮ ಸಮ್ಮೇಳನ: “ಶಿವಶರಣರ ವಚನಗಳು ಜೀವನದ ಅನುಭವದ ಅರಿವು ಮೂಡಿಸುತ್ತವೆ” – ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- October 19, 2026
- 13 Views
ಜಮಖಂಡಿ: “ಶಿವಾಗಮಗಳು ಶಿವತತ್ತ್ವ ಮತ್ತು ಧಾರ್ಮಿಕ ಆಚರಣೆಗಳನ್ನು ವಿವರಿಸಿದರೆ, ಶರಣರ ವಚನಗಳು ಆ ಶಿವತತ್ತ್ವವನ್ನು ಮಾನವನ ಜೀವನದ ಅನುಭವದೊಂದಿಗೆ ಬೆಸೆಯುತ್ತವೆ” ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.
ಅಕ್ಟೋಬರ್ 19 ರಂದು ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 9ನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವಚನ ಸಾಹಿತ್ಯದ ಮಹತ್ವ:
“ಶಿವಾಗಮಗಳು ಧ್ಯಾನ್ಮಿಕ ಸಾಧನೆಯ ಮಾರ್ಗಗಳನ್ನು ಬೋಧಿಸಿದರೆ, ವಚನಗಳು ಕಾಯಕ, ದಾಸೋಹ ಮತ್ತು ಸದಾಚಾರಕ್ಕೆ ಪ್ರೇರಣೆ ನೀಡುತ್ತವೆ. ವಚನಗಳು ಪಾಂಡಿತ್ಯದ ಪ್ರದರ್ಶನಕ್ಕಿಂತ ಜೀವನದ ಅನುಭವಕ್ಕೆ ಹೆಚ್ಚು ಮಹತ್ವ ನೀಡುತ್ತವೆ ಹಾಗೂ ಸರಳ ಕನ್ನಡ ಭಾಷೆಯ ಮೂಲಕ ಗಹನವಾದ ತತ್ತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶಿಖಾಮಣಿಯು 28 ಶಿವಾಗಮಗಳ ಸಾರ ಸರ್ವಸ್ವವನ್ನು ಒಳಗೊಂಡಿದೆ. ಇದರಲ್ಲಿ ಭೇದಭಾವ ಕಲ್ಪಿಸುವ ಧರ್ಮ ಸಂಸ್ಕೃತಿಯನ್ನು ಕಲುಷಿತಗೊಳಿಸುವ ಕಾರ್ಯವನ್ನು ಯಾರೂ ಮಾಡಬಾರದು. ಆರೋಗ್ಯಪೂರ್ಣ ಸದ್ಢೃಡ ಸಮಾಜ ನಿರ್ಮಾಣಕ್ಕೆ ಪೂರ್ವಾಚಾರ್ಯರ ಚಿಂತನೆಗಳು ದಾರಿದೀಪವಾಗಿವೆ” ಎಂದು ಜಗದ್ಗುರುಗಳು ನುಡಿದರು.
“ವೀರಶೈವ ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗ” – ಶಾಸಕ ಯತ್ನಾಳ್
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, “ವೀರಶೈವ ಲಿಂಗಾಯತ ಧರ್ಮವು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದೆ. ಹಿಂದುತ್ವದಿಂದ ಇದನ್ನು ಬೇರ್ಪಡಿಸುವ ಹುನ್ನಾರ ಕೆಲವರಿಂದ ಆಗಾಗ ನಡೆಯುತ್ತಲೇ ಇದೆ. ಆದರೆ ಇದಕ್ಕೆ ಪ್ರಜ್ಞಾವಂತ ಸಮಾಜ ಎಂದಿಗೂ ಅವಕಾಶ ಕೊಟ್ಟಿಲ್ಲ. ವೀರಶೈವ ಧರ್ಮದ ಅತ್ಯುತ್ಕೃಷ್ಟ ಮೌಲ್ಯಗಳು ಎಲ್ಲ ಜಾತಿ ಜನಾಂಗಕ್ಕೆ ಆಶಾಕಿರಣವಾಗಿವೆ” ಎಂದರು.
ಇದೇ ವೇಳೆ ಮಾತನಾಡಿದ ಸಣ್ಣ ಕೈಗಾರಿಕೆ ಸಚಿವ ಡಾ. ವಿಜಯಾನಂದ ಕಾಶಪ್ಪನವರ್ ಅವರು, “ವೀರಶೈವ ಧರ್ಮಕ್ಕೆ ಸುದೀರ್ಘವಾದ ಪರಂಪರೆ ಇದೆ. ವೀರಶೈವ ಪಂಚಪೀಠಗಳು ರಾಷ್ಟ್ರೀಯ ಗುರು ಪೀಠಗಳಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿವೆ. ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಭಕ್ತರ ಬಾಳಿನ ಭಾಗ್ಯೋದಯವಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
‘ಶಿವಾಚಾರ್ಯ ರತ್ನ’ ಪ್ರಶಸ್ತಿ ಪ್ರದಾನ:
ಇದೇ ಸುವರ್ಣ ಸಂದರ್ಭದಲ್ಲಿ, ಅಫಜಲಪುರ ತಾಲೂಕಿನ ಚೌಡಾಪುರಿ ಹಿರೇಮಠದ ಕಾಯಕಯೋಗಿ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳಿಗೆ ಜಗದ್ಗುರುಗಳು ಪ್ರತಿಷ್ಠಿತ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ನೀಡಿ ಆಶೀರ್ವದಿಸಿದರು. ಕಣ್ಣೂರು-ಸಿಂಧನೂರಿನ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಪ್ರಶಸ್ತಿ ವಾಚನ ಮಾಡಿದರು. ಗುಳೇದಗುಡ್ಡದ ಡಾ. ಪರಮೇಶ್ವರಿ ಮೃತ್ಯುಂಜಯ ಹಿರೇಮಠ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ನಾಡೋಜ ಜಗದೀಶ ಶಿವಯ್ಯ ಗುಡಗುಂಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡುತ್ತಾ, ತಂತ್ರಜ್ಞಾನದ ಯುಗದಲ್ಲಿ ಮಾನವೀಯ ಮೌಲ್ಯಗಳ ಉಳಿವಿನ ಅಗತ್ಯವನ್ನು ಪ್ರತಿಪಾದಿಸಿದರು. ಜಮಖಂಡಿ ಮುಸ್ತಿಕಂತಿಯ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಸಮಾರಂಭದ ಕೊನೆಯಲ್ಲಿ ಆಕರ್ಷಕ ‘ನಜರ್ ಸಮರ್ಪಣೆ’ಯೊಂದಿಗೆ ದೀಪಾರತಿ ಕಾರ್ಯಕ್ರಮ ಜರುಗಿತು.
Related Articles
Thank you for your comment. It is awaiting moderation.


Comments (0)