ವಾರಿಜಾಶ್ರೀ ವೇಣುಗೋಪಾಲ್ ಜೊತೆ ‘ಜ್ಯಾಮಿಂಗ್’ ಕಲಿಕೆ: ಪರಮ್ ಕಲ್ಚರ್ ನಿಂದ ಬೆಂಗಳೂರಿನಲ್ಲಿ ಅಪೂರ್ವ ವರ್ಕ್‌ಶಾಪ್!

ಬೆಂಗಳೂರು: ಕಲೆ ಮತ್ತು ಸಂಗೀತದ ನವೀನ ಪ್ರಯೋಗಗಳಿಗೆ ಹೆಸರಾಗಿರುವ ‘ಪರಮ್’ ಸಂಸ್ಥೆಯು ಬೆಂಗಳೂರಿನ ಹೆಮ್ಮೆಯ ಅಂತಾರಾಷ್ಟ್ರೀಯ ಖ್ಯಾತಿಯ, ಗ್ರ್ಯಾಮಿ ನಾಮಿನಿ (Grammy nominee) ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಾಶ್ರೀ ವೇಣುಗೋಪಾಲ್ ಅವರ ನೇತೃತ್ವದಲ್ಲಿ “ಲೆಟ್ಸ್  ಜ್ಯಾಮ್” (Let’s Jam) ಎಂಬ ವಿಶಿಷ್ಟ ಮತ್ತು ಪ್ರಾಯೋಗಿಕ ಸಂಗೀತ ಕಾರ್ಯಾಗಾರವನ್ನು ಆಯೋಜಿಸಿದೆ. ಈ ಅಪೂರ್ವ ವರ್ಕ್‌ಶಾಪ್ ಇದೇ ಜೂನ್ 7ರ ಭಾನುವಾರದಂದು ಬೆಂಗಳೂರಿನ ಪ್ರತಿಷ್ಠಿತ ‘ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್’ ಸ್ಟುಡಿಯೋ ಆವರಣದಲ್ಲಿ ನಡೆಯಲಿದೆ.

ವಿಶಿಷ್ಟ ಜ್ಯಾಮಿಂಗ್ (ಆಶುಪ್ರಸ್ತುತಿ) ಕಾರ್ಯಾಗಾರದ ಅವಲೋಕನ ಈ ಕಾರ್ಯಾಗಾರವು ಗಾಯಕರು (Vocalists) ಮತ್ತು ವಾದ್ಯಗಾರರು (Instrumentalists) ಇಬ್ಬರಿಗೂ ಜ್ಯಾಮಿಂಗ್ ಕಲೆಯ ಸೂಕ್ಷ್ಮಗಳನ್ನು ಪ್ರಾಯೋಗಿಕವಾಗಿ ಹೇಳಿಕೊಡಲಿದೆ. ಒಂದು ಜುಗಲ್‌ಬಂದಿ ಅಥವಾ ಸಂಗೀತ ಕಚೇರಿಯಲ್ಲಿ ಸಹ-ಕಲಾವಿದರೊಂದಿಗೆ ಹೇಗೆ ಹೊಂದಿಕೊಳ್ಳಬೇಕು? ಅತ್ಯಂತ ಸೂಕ್ಷ್ಮವಾಗಿ ಮತ್ತು ಆಕರ್ಷಕವಾಗಿ ರಾಗ ಸಂಯೋಜನೆಗಳನ್ನು ಹೇಗೆ ಪ್ರಸ್ತುತಪಡಿಸಬೇಕು? ಎಂಬುದರ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಕೇವಲ ಸಂಗೀತ ಪ್ರದರ್ಶನ ಮಾತ್ರವಲ್ಲದೆ, ಸಹ-ಕಲಾವಿದರ ಧ್ವನಿ ಅಥವಾ ವಾದ್ಯಕ್ಕೆ ಗೌರವಯುತವಾಗಿ ಸಮಯಾವಕಾಶ ನೀಡುವುದು (Making space), ಸೂಕ್ಷ್ಮ ಆಲಿಸುವಿಕೆ ಹಾಗೂ ಇಡೀ ತಂಡ ಒಂದೇ ಜೀವವಾಗಿ ಹೇಗೆ ಬೆಸೆಯಬೇಕು ಎಂಬ ತಂತ್ರಗಳನ್ನು ಪ್ರಾಯೋಗಿಕವಾಗಿ ಕಲಿಸಿಕೊಡಲಾಗುತ್ತದೆ.

ಕರ್ನಾಟಕ ಶಾಸ್ತ್ರೀಯ ಸಂಗೀತ (Carnatic), ಪಾಶ್ಚಾತ್ಯ ಜ್ಯಾಸ್ (jazz) ಹಾಗೂ ಸಮಕಾಲೀನ ಸಂಗೀತ ಲೋಕದ ದಿಗ್ಗಜರೊಂದಿಗೆ ವಾರಿಜಾಶ್ರೀ ಅವರು ಹೊಂದಿರುವ ಸುದೀರ್ಘ ಪ್ರದರ್ಶನಗಳ ಅನುಭವವೇ ಈ ಕಾರ್ಯಾಗಾರದ ಪ್ರಮುಖಾಂಶವಾಗಿದೆ.

ಈ ವರ್ಕ್‌ಶಾಪ್‌ನ ಪ್ರಮುಖ ಕಲಿಕಾ ಉದ್ದೇಶಗಳು:

• ಜ್ಯಾಮಿಂಗ್ ಸಮಯದಲ್ಲಿ ರಾಗ ಮತ್ತು ಸ್ವರಗಳನ್ನು ಕಲಾತ್ಮಕವಾಗಿ ಬಳಸುವ ವಿಧಾನಗಳ ಕಲಿಕೆ.

• ಸಹ-ಕಲಾವಿದರ ಜ್ಞಾನವನ್ನು ಗೌರವಿಸುತ್ತಾ, ಸೂಕ್ಷ್ಮವಾಗಿ ಆಲಿಸುವ ಕಲೆ ಹಾಗೂ ಜುಗಲ್‌ಬಂದಿಯಲ್ಲಿ ಕಲಾತ್ಮಕವಾಗಿ ಭಾಗಿಯಾಗುವ ತಂತ್ರಗಳು.

• ಇಡೀ ಸಂಗೀತ ತಂಡವು ಒಂದೇ ಸಮೂಹವಾಗಿ ಒಟ್ಟಿಗೆ ಸಾಗಲು ಮತ್ತು ಪ್ರತಿಯೊಬ್ಬ ಕಲಾವಿದನ ಧ್ವನಿಯೂ ಸ್ಪಷ್ಟವಾಗಿ ಕೇಳುವಂತೆ ಹೆಣೆಯುವ ಕಲೆ.

• ವಿವಿಧ ಜಾನಪದ, ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಸಂಗೀತ ಶೈಲಿಗಳಲ್ಲಿ ಸುಧಾರಿತ ಆಶುಗಾಯನ (Improvisation) ಮತ್ತು ಸಂವಾದ ತಂತ್ರಗಳ ಅಳವಡಿಕೆ.

ಬಾಲ್ಯದ ಪ್ರತಿಭೆ, ಗ್ಲೋಬಲ್ ಐಕಾನ್:

ವಾರಿಜಶ್ರೀ ವೇಣುಗೋಪಾಲ್ ಅವರು ಅತ್ಯುತ್ತಮ ಗಾಯಕರು ಹಾಗೂ ಕೊಳಲು ವಾದಕರು. ಇವರು ತಮ್ಮ 18 ತಿಂಗಳ ಅಂದರೆ ಒಂದೂವರೆ ವರ್ಷದಷ್ಟು ವಯಸ್ಸಿನಲ್ಲಿಯೇ ಕರ್ನಾಟಕ ಸಂಗೀತದ 100 ರಾಗಗಳನ್ನು ಗುರುತಿಸಬಲ್ಲ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. 4ನೇ ವಯಸ್ಸಿನಲ್ಲಿ ಕರ್ನಾಟಕ ಸಂಗೀತ ಕಚೇರಿಗಳನ್ನು ನೀಡಲು ಪ್ರಾರಂಭಿಸಿ ಮನೆ ಮಾತಾಗಿದ್ದಾರೆ.

ಜಾಗತಿಕ ಸಂಗೀತ ಪ್ರದರ್ಶನಗಳ ವೇಳೆ ಭಾರತೀಯ ಗಾಯನದ ಪಟ್ಟುಗಳ ಸಹಿತ ಮೂಲ ಅಂಶಗಳೊಂದಿಗೆ ಅಂತರಾತ್ಮದಿಂದ ಹಾಡುವ ಕಲಾವಿದರಲ್ಲಿ ವಾರಿಜಶ್ರೀ ಒಬ್ಬರಾಗಿದ್ದಾರೆ. ಜೇಕಬ್ ಕೊಲಿಯರ್ ಅವರ ‘ಎ ರಾಕ್ ಸಮ್‌ವೇರ್’ (A Rock SomeWhere) ಗಾಯನದಲ್ಲಿ  ಪ್ರಸಿದ್ಧ  ಸಿತಾರ್‌ ವಾದಕರಾದ ಅನುಷ್ಕಾ ಶಂಕರ್ ಅವರೊಂದಿಗೆ ‘ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ 67 ನೇ ಗ್ರ್ಯಾಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ. ವಿಶ್ವವಿಖ್ಯಾತ ಸಂಗೀತಗಾರರಾದ ಬಾಬಿ ಮೆಕ್‌ಫೆರಿನ್ (Bobby McFerrin), ಮೈಕೆಲ್ ಲೀಗ್ (Michael League), ಜಾಕೋಬ್ ಕೊಲಿಯರ್ (Jacob Collier), ಅನುಷ್ಕಾ ಶಂಕರ್ ಮತ್ತು ಪ್ರವೀಣ್ ಡಿ.ರಾವ್ ಅವರಂತಹ ಅಂತಾರಾಷ್ಟ್ರೀಯ ದಿಗ್ಗಜರೊಂದಿಗೆ ಜಾಗತಿಕ ವೇದಿಕೆಗಳಲ್ಲಿ ಸಹಯೋಗ ಹೊಂದಿದ ಹೆಮ್ಮೆ ಇವರದ್ದಾಗಿದೆ.

ಕಾರ್ಯಕ್ರಮದ ಸಮಯ

• ಸೆಷನ್ 1: ಬೆಳಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ

• ಸೆಷನ್ 2 (ವಿಸ್ತರಿತ ಅವಧಿ): ಮಧ್ಯಾಹ್ನ 2:00 ರಿಂದ ಸಂಜೆ 4:00 ರವರೆಗೆ

ಸಂಗೀತ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಬಯಸುವ ಉದಯೋನ್ಮುಖ ಗಾಯಕರು, ವಾದ್ಯಗಾರರು ಮತ್ತು ಕಲಾ ಆಸಕ್ತರಿಗೆ ಇದೊಂದು ಸುವರ್ಣಾವಕಾಶ. ಹೆಚ್ಚಿನ ವಿವರಗಳಿಗಾಗಿ 9035034725 ಸಂಪರ್ಕಿಸಿ.

Related Articles

Comments (0)

Leave a Comment