ಹೆಣ್ಣುಮಕ್ಕಳ ಪರ ರಮ್ಯಾ ಹೊಸ ಫೈಟ್: ದೇಶದಲ್ಲೇ ಮೊದಲ ಬಾರಿ ಮೆಡಿಕಲ್ ಪಠ್ಯಕ್ಕೆ ‘ಮೆನೋಪಾಸ್’ ತಂದ ಮಾಜಿ ಸಂಸದೆ!

ಬೆಂಗಳೂರು: ಚಿತ್ರರಂಗ ಹಾಗೂ ಸಕ್ರಿಯ ರಾಜಕಾರಣದ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದ ಮಾಜಿ ಸಂಸದೆ, ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (ದಿವ್ಯ ಸ್ಪಂದನ) ಈಗ ಕೋಟ್ಯಂತರ ಮಹಿಳೆಯರ ಆರೋಗ್ಯದ ಹಕ್ಕುಗಳ ಪರವಾಗಿ ದೇಶವೇ ತಿರುಗಿ ನೋಡುವಂತಹ ಕ್ರಾಂತಿಕಾರಿ ಹೋರಾಟವೊಂದನ್ನು ನಡೆಸಿ ಜಯಶೀಲರಾಗಿದ್ದಾರೆ. 45 ವರ್ಷ ದಾಟಿದ ಪ್ರತಿಯೊಬ್ಬ ಮಹಿಳೆಯೂ ಅನುಭವಿಸುವ, ಸಮಾಜದಲ್ಲಿ ಯಾರೂ ಮುಕ್ತವಾಗಿ ಮಾತನಾಡದ ‘ಮೆನೋಪಾಸ್’ (ಋತುಬಂಧ) ಸಮಸ್ಯೆಯನ್ನು ಭಾರತದಲ್ಲೇ ಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮಕ್ಕೆ ತರುವಲ್ಲಿ ರಮ್ಯಾ ಯಶಸ್ವಿಯಾಗಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರನ್ನು ಖುದ್ದಾಗಿ ಭೇಟಿ ಮಾಡಿದ ರಮ್ಯಾ ನೇತೃತ್ವದ ಉನ್ನತ ಮಟ್ಟದ ನಿಯೋಗವು ಸಲ್ಲಿಸಿದ ಎಲ್ಲಾ ಶಿಫಾರಸುಗಳಿಗೆ ಸಚಿವರು ತಕ್ಷಣವೇ ಹಸಿರು ನಿಶಾನೆ ನೀಡಿದ್ದಾರೆ. ಇದರ ಇಂಟರೆಸ್ಟಿಂಗ್ ಒಳನೋಟಗಳ ವಿಶೇಷ ವರದಿ ಇಲ್ಲಿದೆ.

ರಮ್ಯಾ ಇಟ್ಟ ಹೆಜ್ಜೆ: ಮೆಡಿಕಲ್ ಪಠ್ಯದಲ್ಲಿ ಇತಿಹಾಸ ಸೃಷ್ಟಿ!

ಭಾರತದ ಇಡೀ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ಮೆನೋಪಾಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಕೋರ್ಸ್ ಅಥವಾ ತರಬೇತಿ ಇರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ರಮ್ಯಾ, ಎಂಬಿಬಿಎಸ್ (MBBS), ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಪ್ರಫೆಷನಲ್ಸ್ ಪಠ್ಯಕ್ರಮದಲ್ಲಿ ಪೆರಿಮೆನೋಪಾಸ್ ಮತ್ತು ಮೆನೋಪಾಸ್ ಕುರಿತು ಪ್ರತ್ಯೇಕ ಅಧ್ಯಾಯವನ್ನು ಸೇರಿಸಲು ಸಚಿವರ ಒಪ್ಪಿಗೆ ಕೊಡಿಸಿದ್ದಾರೆ. ಅಷ್ಟೇ ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ‘ಮೆನೋಪಾಸ್ ಫೆಲೋಶಿಪ್ ಕಾರ್ಯಕ್ರಮ’ವನ್ನು ಆರಂಭಿಸಲು ಸರ್ಕಾರ ಮುಂದಾಗಿದೆ.

‘ಗೃಹ ಆರೋಗ್ಯ’ದ ಬೆನ್ನಲ್ಲೇ ರಮ್ಯಾ ಮಾಸ್ಟರ್ ಸ್ಟ್ರೋಕ್

ಕಳೆದ ವಾರವಷ್ಟೇ ರಾಜ್ಯ ಆರೋಗ್ಯ ಇಲಾಖೆಯು ‘ಗೃಹ ಆರೋಗ್ಯ’ ಯೋಜನೆಯಡಿ ಮಹಿಳೆಯರಲ್ಲಿ ಮೆನೋಪಾಸ್ ಸಮಸ್ಯೆಗಳನ್ನು ಮನೆಮನೆಗೆ ಹೋಗಿ ತಪಾಸಣೆ ನಡೆಸಲು ಒಪ್ಪಿಗೆ ನೀಡಿತ್ತು. ಆದರೆ, ಕೇವಲ ಕಾಯಿಲೆ ಪತ್ತೆಹಚ್ಚಿದರೆ ಸಾಲದು, ಚಿಕಿತ್ಸೆ ನೀಡಲು ತಜ್ಞ ವೈದ್ಯರಿರಬೇಕಲ್ಲವೇ? “ಗುರುತಿಸುವುದು ಕೇವಲ ಅರ್ಧ ಕೆಲಸವಾದರೆ, ತರಬೇತಿ ಪಡೆದ ವೈದ್ಯರನ್ನು ಒದಗಿಸುವುದು ಉಳಿದರ್ಧ ಕೆಲಸ” ಎಂದು ರಮ್ಯಾ ತಮ್ಮ ಪೋಸ್ಟ್‌ನಲ್ಲಿ ತಾರ್ಕಿಕವಾಗಿ ಬರೆದುಕೊಂಡಿದ್ದಾರೆ. ಇದಕ್ಕಾಗಿಯೇ ಗ್ರಾಮೀಣ ಭಾಗದ ಸರ್ಕಾರಿ ವೈದ್ಯಕೀಯ ಅಧಿಕಾರಿಗಳಿಗೆ (Medical Officers) ವಿಶೇಷ ತರಬೇತಿ ಮಾಡ್ಯೂಲ್ ನೀಡುವಂತೆ ಅವರು ಸರ್ಕಾರವನ್ನು ಒಪ್ಪಿಸಿದ್ದಾರೆ.

ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು

ರಮ್ಯಾ ಅವರ ಈ ದೂರದೃಷ್ಟಿಯ ಹೆಜ್ಜೆಯಿಂದಾಗಿ ಭಾರತದಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲೇ ಇಲ್ಲದ ‘ಮೆನೋಪಾಸ್ ಸ್ಪೆಷಲಿಸ್ಟ್’ (ಋತುಬಂಧ ತಜ್ಞರು) ಎಂಬ ಹೊಸ ವೈದ್ಯಕೀಯ ವಿಭಾಗವೇ ಸೃಷ್ಟಿಯಾಗಲಿದೆ. ಈ ಕೋರ್ಸ್ ಮುಗಿಸುವ ವೈದ್ಯರನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೇಮಕ ಮಾಡಿಕೊಳ್ಳಲು ಭಾರಿ ಬೇಡಿಕೆ ಸೃಷ್ಟಿಯಾಗಲಿದೆ. ಇದು ಆರೋಗ್ಯ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ತೆರೆಯಲಿದೆ.

ಸಭೆಯಲ್ಲಿದ್ದ ಪ್ರಮುಖರು ಯಾರು?

ಸಚಿವ ಶರಣಪ್ರಕಾಶ್ ಪಾಟೀಲ್ ಅವರೊಂದಿಗೆ ನಡೆದ ಈ ಮಹತ್ವದ ಸಭೆಯಲ್ಲಿ ರಮ್ಯಾ ಅವರೊಂದಿಗೆ ಕರ್ನಾಟಕ ಅಲೈಡ್ ಆಂಡ್ ಹೆಲ್ತ್ ಕೇರ್ ಪ್ರೊಫೆಷನಲ್ಸ್ ಅಧ್ಯಕ್ಷರು ಹಾಗೂ ಆರ್‌ಜಿಯುಹೆಚ್‌ಎಸ್ ಸಿಂಡಿಕೇಟ್ ಸದಸ್ಯರಾದ ಯು.ಟಿ. ಇಫ್ತಿ, ಖ್ಯಾತ ವೈದ್ಯರಾದ ಡಾ. ವಿಕ್ರಮ್ ಮತ್ತು ಮೆನೋಪಾಸ್ ಕೇರ್ ತಜ್ಞರಾದ ಡಾ. ಜ್ಯೋತ್ಸ್ನಾ ಮಿರ್ಲೆ ಉಪಸ್ಥಿತರಿದ್ದರು. ಪಠ್ಯಕ್ರಮದ ವಿನ್ಯಾಸಕ್ಕಾಗಿ ಸದ್ಯದಲ್ಲೇ ಅಧಿಕೃತ ಸಮಿತಿಯನ್ನು ರಚಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಸಿನಿಮಾ, ಗ್ಲಾಮರ್, ರಾಜಕೀಯದ ಆಚೆಗೂ ಮಹಿಳೆಯರ ನಿಜವಾದ ಮೂಕ ವೇದನೆಗೆ ಧ್ವನಿಯಾಗಿ ನಿಂತ ರಮ್ಯಾ ಅವರ ಈ ಸದ್ದಿಲ್ಲದ ಸಾಧನೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

 

Related Articles

Comments (0)

Leave a Comment