ಹಿರಿಯ ನಟ ಅನಂತ್ ನಾಗ್‌ಗೆ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಪ್ರದಾನ

ಏಕತಾ ನಗರ (ಗುಜರಾತ್): ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ-2024 ಅನ್ನು ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರದಾನ ಮಾಡಲಾಯಿತು. ಗುಜರಾತ್‌ನ ಏಕತಾ ನಗರದಲ್ಲಿ ಆಯೋಜಿಸಲಾಗಿದ್ದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನಂತ್ ನಾಗ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ರಂಗಭೂಮಿ ಹಾಗೂ ಬೆಳ್ಳಿಪರದೆಯಲ್ಲಿ ಅನಂತ್ ನಾಗ್ ಅವರ ಜೀವಮಾನದ ಸಮರ್ಪಿತ ಸೇವೆ ಮತ್ತು ದಶಕಗಳಿಂದ ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಸ್ಮರಣೀಯ ಅಭಿನಯವನ್ನು ಈ ಸಂದರ್ಭದಲ್ಲಿ ಕೊಂಡಾಡಲಾಯಿತು. ಸಮಾರಂಭದಲ್ಲಿ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಸಚಿವರಾದ ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ರಂಗಭೂಮಿಯೇ ನನ್ನ ಬುನಾದಿ: ಅನಂತ್ ನಾಗ್

ಅತ್ಯಂತ ವಿನಮ್ರವಾಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅನಂತ್ ನಾಗ್ ಅವರು, ತಮ್ಮ ವೃತ್ತಿಜೀವನವನ್ನು ರೂಪಿಸಿದ ವ್ಯಕ್ತಿಗಳಿಗೆ ಮತ್ತು ಅನುಭವಗಳಿಗೆ ಕೃತಜ್ಞತೆ ಸಲ್ಲಿಸಿದರು. “ನಾನು ಬೆಳೆದದ್ದು ಆಶ್ರಮದಲ್ಲಿ. ನಂತರ ಮುಂಬೈಗೆ ತೆರಳಿದಾಗ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ರಂಗಭೂಮಿಯೇ ನನ್ನ ಅಭಿನಯಕ್ಕೆ ಬಲವಾದ ಬುನಾದಿ. ಸಿನಿಮಾಗೆ ಬರುವ ಮೊದಲು ಸುಮಾರು 50 ನಾಟಕಗಳಲ್ಲಿ ಅಭಿನಯಿಸಿದ್ದೆ. ತದನಂತರ ಖ್ಯಾತ ನಿರ್ದೇಶಕ ಶ್ಯಾಮ್ ಬೆನೆಗಲ್ ಅವರ ಚಿತ್ರಗಳು ಸೇರಿದಂತೆ ಹಲವು ಉತ್ತಮ ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿಬಂತು” ಎಂದು ತಮ್ಮ ಬಾಲ್ಯ ಹಾಗೂ ಚಿತ್ರರಂಗದ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.

“ನಾನು ಪ್ರಜ್ಞಾಪೂರ್ವಕವಾಗಿಯೇ ಕನ್ನಡ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡು, ಬೆಂಗಳೂರನ್ನು ನನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡೆ. ಕಳೆದ ವರ್ಷವಷ್ಟೇ ಮಾನ್ಯ ರಾಷ್ಟ್ರಪತಿಯವರಿಂದ ಪದ್ಮಭೂಷಣ ಗೌರವ ಸ್ವೀಕರಿಸಿದ್ದೆ. ಈ ವರ್ಷ ಅವರ ಕೈಯಿಂದಲೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಪಾಲಿಗೆ ಅಪಾರ ಧನ್ಯತೆಯ ಕ್ಷಣ” ಎಂದು ಅವರು ಹರ್ಷ ವ್ಯಕ್ತಪಡಿಸಿದರು.

 

 

Related Articles

Comments (0)

Leave a Comment