ನಿಮ್ಮ ಮೊಬೈಲ್‌ನಲ್ಲೇ ಸಿಗಲಿದೆ KSRTC ಇ-ಟಿಕೆಟ್..!

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕದ ಸಾರಿಗೆ ಸಂಸ್ಥೆಗಳಾದ KSRTC, NWKRTC ಹಾಗೂ KKRTC ಬಸ್‌ಗಳ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲಾಗಿದ್ದು, ಇನ್ಮೇಲೆ ಸಾರ್ವಜನಿಕರು ವಾಟ್ಸಾಪ್ (WhatsApp) ಮೂಲಕವೇ ನೇರವಾಗಿ ಟಿಕೆಟ್ ಕಾಯ್ದಿರಿಸುವ ನೂತನ ತಾಂತ್ರಿಕ ಸೌಲಭ್ಯವನ್ನು ಜಾರಿಗೆ ತರಲಾಗಿದೆ.

ಸಾರ್ವಜನಿಕರು +91 6364940880 ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಅತ್ಯಂತ ವೇಗವಾಗಿ, ಸುರಕ್ಷಿತವಾಗಿ ಹಾಗೂ ಸುಲಭವಾಗಿ 24X7 ಟಿಕೆಟ್ ಬುಕ್ ಮಾಡಬಹುದಾಗಿದೆ.

ವಾಟ್ಸಾಪ್ ಮೂಲಕ ಟಿಕೆಟ್ ಬುಕಿಂಗ್ ಮಾಡುವ ಸರಳ ವಿಧಾನ

ಸಂದೇಶ ಕಳುಹಿಸಿ: ಮೊದಲಿಗೆ ನಿಮ್ಮ ಮೊಬೈಲ್‌ನಿಂದ +91 6364940880 ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸುವ ಮೂಲಕ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿ. ನಂತರ ಚಾಟ್‌ಬಾಟ್ ವ್ಯವಸ್ಥೆಯು ನಿಮಗೆ ಮಾರ್ಗದರ್ಶನ ನೀಡುತ್ತದೆ.

ಬಸ್ ಹುಡುಕಾಟ: ನೀವು ಪ್ರಯಾಣ ಆರಂಭಿಸುವ ಸ್ಥಳ, ತಲುಪಬೇಕಾದ ಗಮ್ಯಸ್ಥಾನ ಹಾಗೂ ಪ್ರಯಾಣದ ದಿನಾಂಕವನ್ನು ಆಯ್ಕೆ ಮಾಡಿ ಲಭ್ಯವಿರುವ ಬಸ್ ಸೇವೆಗಳನ್ನು ಹುಡುಕಬೇಕು.

ಸೇವೆ ಆಯ್ಕೆ: ನಿಮ್ಮ ಪ್ರಯಾಣದ ಆದ್ಯತೆ ಹಾಗೂ ಸಮಯಕ್ಕೆ ಅನುಗುಣವಾಗಿ ಸೂಕ್ತವಾದ ಬಸ್ ಸೇವೆಯನ್ನು ಆಯ್ಕೆ ಮಾಡಿಕೊಳ್ಳಿ.

ವಿವರ ನಮೂದು: ಪ್ರಯಾಣಿಕರ ಹೆಸರು, ವಯಸ್ಸು ಸೇರಿದಂತೆ ಅಗತ್ಯ ವಿವರಗಳನ್ನು ನಿಖರವಾಗಿ ನಮೂದಿಸಿ.

ಪಾವತಿ ಮತ್ತು ಇ-ಟಿಕೆಟ್: ಟಿಕೆಟ್ ವಿವರಗಳನ್ನು ಪರಿಶೀಲಿಸಿ ಪಾವತಿಯನ್ನು ಪೂರ್ಣಗೊಳಿಸಿ. ಬುಕ್ಕಿಂಗ್ ಯಶಸ್ವಿಯಾದ ನಂತರ ವಾಟ್ಸಾಪ್ ಅಥವಾ ಇ-ಮೇಲ್ ಮೂಲಕ ನಿಮ್ಮ ಡಿಜಿಟಲ್ ಇ-ಟಿಕೆಟ್ ಅನ್ನು ಪಡೆದುಕೊಳ್ಳಿ.

ವಿವಿಧ ಪಾವತಿ ವಿಧಾನಗಳು:

ಟಿಕೆಟ್ ದರ ಪಾವತಿಗಾಗಿ ಯುಪಿಐ (UPI), ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಡಿಜಿಟಲ್ ವ್ಯಾಲೆಟ್‌ಗಳು ಸೇರಿದಂತೆ ವಿವಿಧ ಸುರಕ್ಷಿತ ಆನ್‌ಲೈನ್ ಪಾವತಿ ವಿಧಾನಗಳನ್ನು ಬಳಸಬಹುದಾಗಿದೆ.

ವಾಟ್ಸಾಪ್ ಮೂಲಕವೇ ಟಿಕೆಟ್ ರದ್ದುಪಡಿಸುವಿಕೆ (Cancellation)

ಒಂದು ವೇಳೆ ಪ್ರಯಾಣ ರದ್ದುಗೊಳಿಸಬೇಕಾದಲ್ಲಿ ವಾಟ್ಸಾಪ್ ಚಾಟ್‌ನಲ್ಲೇ ಸುಲಭವಾಗಿ ಟಿಕೆಟ್ ಕ್ಯಾನ್ಸಲ್ ಮಾಡಬಹುದು:

ವಾಟ್ಸಾಪ್ ಚಾಟ್‌ನಲ್ಲಿ ‘Ticket Cancellation’ ಆಯ್ಕೆಯನ್ನು ಆರಿಸಿಕೊಳ್ಳಿ.

ನಿಮ್ಮ ಟಿಕೆಟ್‌ನ PNR ಸಂಖ್ಯೆಯನ್ನು ನಮೂದಿಸಿ.

ಬುಕ್ಕಿಂಗ್ ಸಮಯದಲ್ಲಿ ಬಳಸಿದ ಮೊಬೈಲ್ ಸಂಖ್ಯೆ ಹಾಗೂ ವಹಿವಾಟಿನ ಪಾಸ್‌ವರ್ಡ್ (Transaction Password) ಹಾಕಿ ದೃಢೀಕರಿಸಿ.

ವಿವರಗಳನ್ನು ವೀಕ್ಷಿಸಿ ರದ್ದುಪಡಿಸುವ ಪ್ರಕ್ರಿಯೆ ಮುಗಿಸಿದ ತಕ್ಷಣ, ವಾಟ್ಸಾಪ್ ಅಥವಾ ಇ-ಮೇಲ್ ಮೂಲಕ ರದ್ದತಿಯ ದೃಢೀಕರಣ ಸಂದೇಶ ಬರಲಿದ್ದು, ಹಣವನ್ನು ಮೂಲ ಪಾವತಿ ವಿಧಾನಕ್ಕೇ ಮರುಪಾವತಿಸಲಾಗುತ್ತದೆ.

ಭವಿಷ್ಯದ ಏಕೀಕೃತ ಮೊಬಿಲಿಟಿ ವ್ಯವಸ್ಥೆಗೆ ಬುನಾದಿ:

ಈ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಒಂದೇ ‘ಕರ್ನಾಟಕ ಮೊಬಿಲಿಟಿ ಆ್ಯಪ್’ ಅಡಿಯಲ್ಲಿ ಬಸ್ ಸೇವೆಗಳು, ಮೆಟ್ರೋ ಸೇವೆಗಳು, ಟ್ಯಾಕ್ಸಿ ಹಾಗೂ ಆಟೋ ಸೇವೆಗಳು ಸೇರಿದಂತೆ ಇತರೆ ಡಿಜಿಟಲ್ ಸೇವೆಗಳನ್ನು ಏಕೀಕರಿಸಲು ಭದ್ರ ಬುನಾದಿಯಾಗಲಿದೆ. ಇದು ಇಡೀ ರಾಜ್ಯದಲ್ಲಿ ತಂತ್ರಜ್ಞಾನ ಆಧಾರಿತ ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

ಸಂಪರ್ಕ ಮಾಹಿತಿ:

ಸಹಾಯವಾಣಿ (24×7): 080-26252625

ಮೊಬೈಲ್ ಸಂಖ್ಯೆಗಳು: +91 77609 90034 / +91 77609 90035 (ಬೆಳಿಗ್ಗೆ 7.00 ರಿಂದ ರಾತ್ರಿ 10.00 ಗಂಟೆಯವರೆಗೆ)

 

 

Related Articles

Comments (0)

Leave a Comment