ವಿಧಾನಪರಿಷತ್ತಿನ 4 ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ಘೋಷಣೆ: ಅಕ್ಟೋಬರ್ 23ಕ್ಕೆ ಮತದಾನ
- by Suddi Team
- September 22, 2026
- 14 Views
ಬೆಂಗಳೂರು: ಕರ್ನಾಟಕ ವಿಧಾನಪರಿಷತ್ತಿನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳು ಸೇರಿದಂತೆ ಒಟ್ಟು ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗವು (ECI) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹಾಲಿ ಸದಸ್ಯರ ಅಧಿಕಾರಾವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ಮತದಾನ ಜರುಗಲಿದೆ.
ಹಾಲಿ ಸದಸ್ಯರಾದ ಶಶೀಲ್ ಜಿ. ನಮೋಶಿ (ಈಶಾನ್ಯ ಶಿಕ್ಷಕರ ಕ್ಷೇತ್ರ), ಪುಟ್ಟಣ್ಣ (ಬೆಂಗಳೂರು ಶಿಕ್ಷಕರ ಕ್ಷೇತ್ರ), ಚಿದಾನಂದ ಎಂ. ಗೌಡ (ಆಗ್ನೇಯ ಪದವೀಧರ ಕ್ಷೇತ್ರ) ಹಾಗೂ ಎಸ್‌ವಿ ಸಂಕನೂರ (ಪಶ್ಚಿಮ ಪದವೀಧರ ಕ್ಷೇತ್ರ) ಅವರ ಅಧಿಕಾರಾವಧಿಯು 2026ರ ನವೆಂಬರ್ 11ರಂದು ಕೊನೆಗೊಳ್ಳಲಿದ್ದು, ಈ ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣೆ ಘೋಷಣೆಯಾಗಿದೆ.
ಚುನಾವಣಾ ವೇಳಾಪಟ್ಟಿ ಇಂತಿದೆ:
ಅಧಿಸೂಚನೆ ಪ್ರಕಟಣೆ: ಸೆಪ್ಟೆಂಬರ್ 29, 2026 (ಮಂಗಳವಾರ)
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್ 6, 2026
ನಾಮಪತ್ರಗಳ ಪರಿಶೀಲನೆ: ಅಕ್ಟೋಬರ್ 7, 2026
ನಾಮಪತ್ರ ಹಿಂಪಡೆಯಲು ಕಡೆಯ ದಿನ: ಅಕ್ಟೋಬರ್ 9, 2026
ಮತದಾನದ ದಿನಾಂಕ: ಅಕ್ಟೋಬರ್ 23, 2026 (ಶುಕ್ರವಾರ, ಬೆಳಿಗ್ಗೆ 8:00 ರಿಂದ ಸಂಜೆ 4:00 ರವರೆಗೆ)
ಮತ ಎಣಿಕೆ ಹಾಗೂ ಫಲಿತಾಂಶ: ಅಕ್ಟೋಬರ್ 27, 2026 (ಮಂಗಳವಾರ)
ಚುನಾವಣಾ ಪ್ರಕ್ರಿಯೆ ಮುಕ್ತಾಯ: ಅಕ್ಟೋಬರ್ 31, 2026
ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ:
ಚುನಾವಣೆ ನಡೆಯಲಿರುವ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಆಗ್ನೇಯ ಪದವೀಧರ ಕ್ಷೇತ್ರ: ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ ಮತ್ತು ತುಮಕೂರು ಜಿಲ್ಲೆಗಳು.
ಪಶ್ಚಿಮ ಪದವೀಧರ ಕ್ಷೇತ್ರ: ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು.
ಈಶಾನ್ಯ ಶಿಕ್ಷಕರ ಕ್ಷೇತ್ರ: ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳು.
ಬೆಂಗಳೂರು ಶಿಕ್ಷಕರ ಕ್ಷೇತ್ರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳು ಹಾಗೂ ಸಂಪೂರ್ಣ ಬಿಬಿಎಂಪಿ (BBMP) ವ್ಯಾಪ್ತಿ.
Related Articles
Thank you for your comment. It is awaiting moderation.


Comments (0)