ಸೆಪ್ಟೆಂಬರ್ 26ರಂದು ‘ಪರಮ್ ವಿಹಾರ’ದ 16ನೇ ಸಾಂಸ್ಕೃತಿಕ ಸಂಜೆ: ವೀಣಾ ವಾದನ, ಒಡಿಸ್ಸಿ ನೃತ್ಯದ ಜುಗಲ್ಬಂದಿ
- by Suddi Team
- September 22, 2026
- 6 Views
ಬೆಂಗಳೂರು: ಉದಯೋನ್ಮುಖ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಲು ಹಾಗೂ ಸಾರ್ವಜನಿಕರಲ್ಲಿ ಕಲಾ ಪ್ರಜ್ಞೆಯನ್ನು ಜಾಗೃತಗೊಳಿಸಲು ‘ಪರಮ್ ಕಲ್ಚರ್’ ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ ಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮ ‘ಪರಮ್ ವಿಹಾರ’ದ 16ನೇ ಆವೃತ್ತಿಯು ಸೆಪ್ಟೆಂಬರ್ 26ರಂದು ಆಯೋಜನೆಗೊಂಡಿದೆ. ನಗರದ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಸಂಜೆ 6ರಿಂದ ರಾತ್ರಿ 8ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ಪ್ರತಿ ತಿಂಗಳ ನಾಲ್ಕನೇ ಭಾನುವಾರದಂದು ಕಲಾಪ್ರೇಮಿಗಳಿಗಾಗಿ ಆಯೋಜನೆಯಾಗುವ ಈ ಸರಣಿಯಲ್ಲಿ, ಈ ಬಾರಿ ಶಾಸ್ತ್ರೀಯ ವೀಣಾ ವಾದನ ಮತ್ತು ಒಡಿಸ್ಸಿ ನೃತ್ಯ ಪ್ರದರ್ಶನಗಳು ಪ್ರಮುಖ ಆಕರ್ಷಣೆಯಾಗಿರಲಿವೆ.
ನಾದಮಾಧುರ್ಯದ ವೀಣಾ ವಾದನ:
ಖ್ಯಾತ ವಿದ್ವಾನ್ ಗೋಪಾಲ್ ವೆಂಕಟರಮಣ ಅವರ ಶಿಷ್ಯೆಯರಾದ ಕುಮಾರಿ ನಿರೀಕ್ಷಾ ಜಿ. ಮತ್ತು ಕುಮಾರಿ ಸಿ.ಸಿ. ಹಾಸಿನಿ ಅವರು ಜಂಟಿಯಾಗಿ ವೀಣಾ ಜುಗಲ್ಬಂದಿ ಪ್ರಸ್ತುತಪಡಿಸಲಿದ್ದು, ಸಂಜೆಯ ಕಾರ್ಯಕ್ರಮಕ್ಕೆ ಸಂಗೀತದ ಸುಧೆ ಹರಿಸಲಿದ್ದಾರೆ.
‘ಜಗದೀಶ್ವರ’ ಒಡಿಸ್ಸಿ ನೃತ್ಯ ವೈಭವ:
ಪ್ರಸಿದ್ಧ ನೃತ್ಯಗುರು ಶೃಂಗಾರಮಣಿ ದೇಬಾಶಿಶ್ ಪಟ್ನಾಯಕ್ ಅವರ ಶಿಷ್ಯೆಯಾದ ಕುಮಾರಿ ಅನಯಾ ಪತಿ ಅವರು ‘ಜಗದೀಶ್ವರ: ದ ಡ್ಯಾನ್ಸ್ ಆಫ್ ದ ಡಿವೈನ್’ ಎಂಬ ವಿಶಿಷ್ಟ ಪರಿಕಲ್ಪನೆಯಡಿ ಒಡಿಸ್ಸಿ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.
ಸಮುದಾಯದಲ್ಲಿ ಶಾಸ್ತ್ರೀಯ ಕಲೆಗಳನ್ನು ಪ್ರಚಲಿತದಲ್ಲಿಡುವುದು ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮಕ್ಕೆ ಸಂಗೀತ ಹಾಗೂ ನೃತ್ಯ ಆಸಕ್ತರಿಗೆ ಮುಕ್ತ ಪ್ರವೇಶವಿರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
Related Articles
Thank you for your comment. It is awaiting moderation.


Comments (0)