ಕಾಶಿಯಲ್ಲಿ ಸಂಚಾರ ಕ್ರಾಂತಿ: ಇನ್ನು ಕೇವಲ 16 ನಿಮಿಷದಲ್ಲಿ ವಿಶ್ವನಾಥನ ಸನ್ನಿಧಿಗೆ! ದೇಶದ ಮೊದಲ ಅರ್ಬನ್ ರೋಪ್ವೇ ಆರಂಭಕ್ಕೆ ದಿನಾಂಕ ಫಿಕ್ಸ್!
- by Suddi Team
- July 3, 2026
- 2 Views
ವಾರಾಣಸಿ:ವಿಶ್ವದ ಅತ್ಯಂತ ಪ್ರಾಚೀನ ಜೀವಂತ ನಗರಿ ಕಾಶಿ (ವಾರಾಣಸಿ), ಈಗ ಜಾಗತಿಕ ಮಟ್ಟದ ಅತ್ಯಾಧುನಿಕ ಸಾರಿಗೆ ವ್ಯವಸ್ಥೆಗೆ ಸಾಕ್ಷಿಯಾಗುತ್ತಿದೆ. ಕಾಶಿಯ ಅತ್ಯಂತ ಜನದಟ್ಟಣೆಯ ರಸ್ತೆಗಳಲ್ಲಿ ಸಿಲುಕಿ ಗಂಟೆಗಟ್ಟಲೆ ಪರದಾಡುತ್ತಿದ್ದ ಭಕ್ತರು ಮತ್ತು ಪ್ರವಾಸಿಗರಿಗೆ ನೆರವಾಗಲು ಸುಮಾರು ₹800 ಕೋಟಿ ವೆಚ್ಚದ ಬೃಹತ್ ರೋಪ್ವೇ ಯೋಜನೆ ಸಿದ್ಧಗೊಳ್ಳುತ್ತಿದೆ.
ಮೆಕ್ಸಿಕೋ ಮತ್ತು ಬೊಲಿವಿಯಾದ ನಂತರ ಸಾರ್ವಜನಿಕ ಸಾರಿಗೆಗಾಗಿ ಇಂತಹ ಹೈಟೆಕ್ ರೋಪ್ವೇ ಹೊಂದಲಿರುವ ವಿಶ್ವದ 3ನೇ ಹಾಗೂ ಭಾರತದ ಮೊದಲ ನಗರ ಎಂಬ ಹೆಗ್ಗಳಿಕೆಗೆ ವಾರಾಣಸಿ ಪಾತ್ರವಾಗಲಿದೆ. ಈ ವರ್ಷದ ದೇವ್ ದೀಪಾವಳಿ ಹಬ್ಬದ ವೇಳೆಗೆ ಇದು ಸಾರ್ವಜನಿಕರ ಬಳಕೆಗೆ ಮುಕ್ತವಾಗುವ ಸಾಧ್ಯತೆಯಿದೆ.
45 ನಿಮಿಷಗಳ ಪ್ರಯಾಣ ಕೇವಲ 16 ನಿಮಿಷಕ್ಕೆ ಕಡಿತ!
ಸದ್ಯ ವಾರಾಣಸಿ ಜಂಕ್ಷನ್ (ಕ್ಯಾಂಟ್ ರೈಲ್ವೆ ನಿಲ್ದಾಣ) ನಿಂದ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪವಿರುವ ಗೋದೌಲಿಯಾ ಚೌಕ್ಗೆ ರಸ್ತೆ ಮಾರ್ಗದ ಮೂಲಕ ತಲುಪಲು ಕನಿಷ್ಠ 45 ರಿಂದ 50 ನಿಮಿಷ ಬೇಕಾಗುತ್ತದೆ. ಆದರೆ ಈ ರೋಪ್ವೇ ಆರಂಭವಾದರೆ, ಆಕಾಶಮಾರ್ಗದ ಮೂಲಕ ಕೇವಲ 16 ನಿಮಿಷಗಳಲ್ಲಿ 3.75 ಕಿಲೋಮೀಟರ್ ದೂರವನ್ನು ಕ್ರಮಿಸಬಹುದಾಗಿದೆ.
ಸುಧಾರಿತ ತಂತ್ರಜ್ಞಾನ ಮತ್ತು ನಿಲ್ದಾಣಗಳ ವಿವರ
ರಾಷ್ಟ್ರೀಯ ರೋಪ್ವೇ ಅಭಿವೃದ್ಧಿ ಕಾರ್ಯಕ್ರಮವಾದ ‘ಪರ್ವತಮಾಲಾ ಯೋಜನೆ’ಯಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಐದು ಪ್ರಮುಖ ನಿಲ್ದಾಣಗಳು: ವಾರಾಣಸಿ ಕ್ಯಾಂಟ್ ರೈಲ್ವೆ ನಿಲ್ದಾಣ, ಕಾಶಿ ವಿದ್ಯಾಪೀಠ (ಭಾರತ ಮಾತಾ ಮಂದಿರ), ರಥಯಾತ್ರೆ, ಗಿರ್ಜಾ ಘರ್ ಮತ್ತು ಗೋದೌಲಿಯಾ ಚೌಕ್.
ಸಾಮರ್ಥ್ಯ: ಈ ಮಾರ್ಗದಲ್ಲಿ ಒಟ್ಟು 153 ಸುಸಜ್ಜಿತ ಟ್ರೋಲಿಗಳು (ಕೇಬಲ್ ಕಾರ್) ಸಂಚರಿಸಲಿದ್ದು, ಪ್ರತಿ ಟ್ರೋಲಿಯಲ್ಲಿ 10 ಪ್ರಯಾಣಿಕರು ಕುಳಿತುಕೊಳ್ಳಬಹುದು. ಪ್ರತಿದಿನ ಅಂದಾಜು 96,000 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿದೆ.
ಹಾಲಿ ಸ್ಥಿತಿ: ಈಗಾಗಲೇ ಕ್ಯಾಂಟ್, ವಿದ್ಯಾಪೀಠ ಮತ್ತು ರಥಯಾತ್ರೆ ನಡುವಿನ ಆದ್ಯತೆಯ ಕಾರಿಡಾರ್ನಲ್ಲಿ ವೇಗ ಹಾಗೂ ಸುರಕ್ಷತೆಯ ತಪಾಸಣೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಅಂತಿಮ ನಿಲ್ದಾಣವಾದ ಗೋದೌಲಿಯಾ ಚೌಕ್ ಕಾಮಗಾರಿ ಅಂತಿಮ ಹಂತದಲ್ಲಿದೆ.
ಏರ್ಪೋರ್ಟ್ ಮಾದರಿಯ ಸೌಲಭ್ಯಗಳು!
ಈ ರೋಪ್ವೇ ನಿಲ್ದಾಣಗಳು ಕೇವಲ ಬೋರ್ಡಿಂಗ್ ಪಾಯಿಂಟ್ಗಳಾಗಿ ಉಳಿದಿಲ್ಲ. ರೈಲ್ವೆ ನಿಲ್ದಾಣದ ಸಮೀಪವಿರುವ ಮುಖ್ಯ ರೋಪ್ವೇ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಮಾದರಿಯಲ್ಲೇ ಹೈಟೆಕ್ ಪ್ರೀಮಿಯಂ ಲಾಂಜ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಕ್ತರ ಲಗೇಜ್ ಇಡಲು ಲಾಕರ್ ಸೌಲಭ್ಯ, ಕಾಯುವ ಕೊಠಡಿಗಳು ಮತ್ತು ಅತ್ಯಾಧುನಿಕ ಶೌಚಾಲಯ ವ್ಯವಸ್ಥೆ ಇರಲಿದ್ದು, ವಯಸ್ಸಾದ ಭಕ್ತರಿಗೆ ಮತ್ತು ವಿಕಲಾಂಗ ಚೇತನರಿಗೆ ವೀಲ್ಚೇರ್ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ.
Related Articles
Thank you for your comment. It is awaiting moderation.


Comments (0)