ಪೊಲೀಸ್ ಕಮಿಷನರೋ ಅಥವಾ ಹೆಡ್ ಕ್ಲರ್ಕೋ?: ಸ್ಟಿಂಗ್ ಕೇಸ್ ತನಿಖಾ ಮಾಹಿತಿ ಸೋರಿಕೆ ವಿರುದ್ಧ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲ
- by Suddi Team
- November 2, 2026
- 22 Views
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖಾ ವಿವರಗಳನ್ನು ಬಹಿರಂಗಪಡಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಕಿಡಿಕಾರಿದ್ದಾರೆ. “ಅವರು ಪೊಲೀಸ್ ಕಮಿಷನರಾ ಅಥವಾ ಹೆಡ್ ಕ್ಲರ್ಕಾ?” ಎಂದು ಸಿಡಿಮಿಡಿಗೊಂಡಿರುವ ಸಚಿವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಅಧಿಕಾರಿಗಳು ನನ್ನ ವಿರುದ್ಧ ವ್ಯವಸ್ಥಿತವಾಗಿ ಹಗೆತನ ಸಾಧಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಜಾಲಹಳ್ಳಿಯ ಹೆಚ್ಎಂಟಿ ಆಟದ ಮೈದಾನದಲ್ಲಿ ಭಾನುವಾರ ಸಂಜೆ ನಡೆದ ‘hmt ಕನ್ನಡಿಗ’ ಕೈಗಡಿಯಾರಗಳ ಲೋಕಾರ್ಪಣೆ ಹಾಗೂ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಖಾರವಾಗಿ ಉತ್ತರಿಸಿದರು.
ಕುಮಾರಸ್ವಾಮಿಯನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ:
ಪೊಲೀಸ್ ಆಯುಕ್ತರ ಹೇಳಿಕೆಗೆ ಕೌಂಟರ್ ನೀಡಿದ ಕೇಂದ್ರ ಸಚಿವರು, “ಈ ಕುಮಾರಸ್ವಾಮಿಯನ್ನು ಮುಟ್ಟಲು ಈ ಸರ್ಕಾರಕ್ಕಾಗಲಿ ಅಥವಾ ಇಲ್ಲಿನ ಅಧಿಕಾರಿಗಳಿಗಾಗಲಿ ಸಾಧ್ಯವಿಲ್ಲ. ಕುಮಾರಸ್ವಾಮಿಯನ್ನು ಅಷ್ಟು ಸುಲಭವಾಗಿ ಎದುರಿಸಲು ಇವರಿಂದ ಆಗುವುದಿಲ್ಲ. ಈ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ಯಾರ ಹಂಗಿನಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನನಗಿದೆ. ಪೊಲೀಸ್ ಆಯುಕ್ತರು ತಮ್ಮ ಹುದ್ದೆ ಉಳಿಸಿಕೊಳ್ಳಲು ಏನೆಲ್ಲಾ ಕಸರತ್ತು ನಡೆಸುತ್ತಿದ್ದಾರೆ ಎಂಬುದು ಇಡೀ ಇಲಾಖೆಗೆ ಗೊತ್ತಿದೆ” ಎಂದು ಗುಡುಗಿದರು.
ಸೋಮವಾರ ‘ಸ್ಟಿಂಗ್’ ರಹಸ್ಯ ಬಹಿರಂಗ – ಉಲ್ಟಾ ಹೊಡೆಯಲಿದೆ ಕೇಸ್:
ಈ ಇಡೀ ಪ್ರಕರಣವು ಕಾಂಗ್ರೆಸ್ ಸರ್ಕಾರಕ್ಕೆ ಹೇಗೆ ತಿರುಗುಬಾಣವಾಗಲಿದೆ ಎಂಬುದನ್ನು ಸಾಕ್ಷ್ಯ ಸಮೇತ ಸೋಮವಾರ (ನವೆಂಬರ್ 2) ಸುದೀರ್ಘ ಸುದ್ದಿಗೋಷ್ಠಿ ನಡೆಸಿ ಬಹಿರಂಗಪಡಿಸುವುದಾಗಿ ಸಚಿವರು ಸವಾಲು ಹಾಕಿದ್ದಾರೆ. “ನಮ್ಮ ಬಗ್ಗೆ ಯಾರೂ ಗಾಬರಿ ಪಡಬೇಕಾಗಿಲ್ಲ. ಇಲಾಖೆಯ ಒಳಗೆ ಏನೆಲ್ಲಾ ರಾಜಕೀಯ ನಡೆಯುತ್ತಿದೆ ಎಂಬುದನ್ನು ನಾನೇ ಎಳೆಎಳೆಯಾಗಿ ಬಿಚ್ಚಿಡುತ್ತೇನೆ. ಈ ಸರ್ಕಾರ ಯಾರನ್ನೆಲ್ಲಾ ರಕ್ಷಿಸಲು ಈ ತಂತ್ರ ಹೂಡಿದೆ ಎಂಬುದು ನನಗೆ ಗೊತ್ತು. ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಯಾಕೆ ಕೋರ್ಟ್ನಿಂದ ಸ್ಟೇ ತಂದಿದ್ದಾರೆ? ಸ್ವತಃ ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಪಕ್ಷದವರೇ ಸ್ಟಿಂಗ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ” ಎಂದು ಕುಮಾರಸ್ವಾಮಿ ನೆನಪಿಸಿದರು.
ನಾನು ಸಿನಿಮಾ ಮಾಡಿದವನು, ಇವರ ಟ್ರೈಲರ್ ನನಗೆ ಗೊತ್ತು:
ಇದೇ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ‘ಇದು ಕೇವಲ ಟ್ರೈಲರ್’ ಎಂಬ ಹೇಳಿಕೆಗೆ ವ್ಯಂಗ್ಯವಾಡಿದ ಕುಮಾರಸ್ವಾಮಿ, “ಇದೆಲ್ಲಾ ಯಾವ ಲೆಕ್ಕದ ಟ್ರೈಲರ್? ನಾನು ಸ್ವತಃ ಚಲನಚಿತ್ರ ನಿರ್ಮಾಣ ಮಾಡಿ ಬಂದವನು. ಇವರು ಈಗ ಹೊಸದಾಗಿ ಸಿನಿಮಾ ಮಾಡಲು ಹೊರಟಿದ್ದಾರೆ. ಇವರ ಇಡೀ ಸಿನಿಮಾದ ಅಸಲಿ ಕಥೆ ಏನು ಎಂಬುದನ್ನು ನಾಳೆ ವಿವರವಾಗಿ ರಾಜ್ಯದ ಜನತೆಗೆ ತಿಳಿಸುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ.
Related Articles
Thank you for your comment. It is awaiting moderation.


Comments (0)