ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಜ್ಞಾನ ಮತ್ತು ಸಂಸ್ಕಾರ ಅಗತ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

ಲಕ್ಷ್ಮೇಶ್ವರ: ಸುಸಂಸ್ಕೃತ ಹಾಗೂ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಧರ್ಮ ಜ್ಞಾನ ಮತ್ತು ಸಂಸ್ಕಾರದ ಅಗತ್ಯತೆ ಹೆಚ್ಚಾಗಿದೆ ಎಂದು ಬಾಳೇಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ಶ್ರೀಮದ್ ರಂಭಾಪುರಿ ಶಾಖಾ ಮುಕ್ತಿಮಂದಿರ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಲಿಂಗಾಂಗ ಸಾಮರಸ್ಯದ 44ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಗುರು ಎಂದರೆ ಕೇವಲ ಜ್ಞಾನ ಬೋಧಿಸುವವರಲ್ಲ, ಬದಲಿಗೆ ಶಿಷ್ಯನಿಗೆ ಸನ್ಮಾರ್ಗ ತೋರಿಸಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಾರ್ಗದರ್ಶಕರು. ಸಮಾಜದಲ್ಲಿ ಶಾಂತಿ, ಸಾಮರಸ್ಯ ಸ್ಥಾಪಿಸುವುದು ಹಾಗೂ ಬಡವರ, ದುರ್ಬಲರ ಮತ್ತು ಮಹಿಳೆಯರ ಏಳಿಗೆಗಾಗಿ ಶ್ರಮಿಸುವುದು ಗುರುವಿನ ಪರಮ ಕರ್ತವ್ಯವಾಗಿದೆ. ಭೂಲೋಕದ ಶಿವನಾಗಿ ಸಕಲ ಸಮುದಾಯಕ್ಕೆ ಆದರ್ಶ ಮೌಲ್ಯಗಳ ಮೂಲಕ ಧರ್ಮ ಮತ್ತು ಸಮಾಜವನ್ನು ಕಟ್ಟಿ ಬೆಳೆಸಿದ ಶ್ರೇಯಸ್ಸು ಲಿಂ. ವೀರಗಂಗಾಧರ ಜಗದ್ಗುರುಗಳದ್ದಾಗಿದೆ ಎಂದು ಸ್ಮರಿಸಿದರು.

ಜಾತಿಗಿಂತ ಮಾನವೀಯತೆಗೆ ಆದ್ಯತೆ ನೀಡಿ: ಬಸವರಾಜ ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, “ಜಾತಿ, ಮತಗಳ ಭೇದಭಾವವನ್ನು ಬದಿಗಿಟ್ಟು ಪ್ರತಿಯೊಬ್ಬರೂ ಮಾನವೀಯತೆಗೆ ಮೊದಲ ಆದ್ಯತೆ ನೀಡಬೇಕು. ಭರತಖಂಡದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಮಠಗಳು ಮತ್ತು ಪೀಠಗಳು ಸಮಾಜಕ್ಕೆ ನೀತಿ, ಸಂಸ್ಕಾರ ಹಾಗೂ ಸೇವಾ ಮನೋಭಾವನೆಯನ್ನು ಬೋಧಿಸುವ ದಾರಿದೀಪಗಳಾಗಿವೆ” ಎಂದರು.

ಧರ್ಮವು ಶಿಸ್ತು ಮತ್ತು ಸಂಯಮ ನೀಡುತ್ತದೆ: ಜಿ.ಎಸ್. ಪಾಟೀಲ್

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಸಭೆಯ ಸಭಾಧ್ಯಕ್ಷರಾದ ಜಿ.ಎಸ್. ಪಾಟೀಲ್ ಅವರು ಮಾತನಾಡಿ, ಧರ್ಮವು ಮಾನವ ಜೀವನಕ್ಕೆ ಶಿಸ್ತು, ಸಂಯಮ ಮತ್ತು ಸನ್ಮಡತೆಯನ್ನು ನೀಡುವ ಶಕ್ತಿಯಾಗಿದೆ. ಯುವ ಜನತೆ ಶಿಕ್ಷಣ, ಶಿಸ್ತು ಹಾಗೂ ಸೇವಾ ಭಾವನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ವೇಳೆ ದಾವಣಗೆರೆ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಹಾಗೂ ಸಾಮಾಜಿಕ ಚಿಂತನೆಗಳು ಜನಾಂಗಕ್ಕೆ ಆಶಾಕಿರಣವಾಗಿವೆ ಎಂದರು. ಶಾಸಕ ಚಂದ್ರು ಲಾಮಾಣಿ ಮತ್ತು ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ ಹಾಗೂ ಅಡ್ಡಪಲ್ಲಕ್ಕಿ ಮಹೋತ್ಸವ:

ಇದೇ ಸಂದರ್ಭದಲ್ಲಿ ಮಲೇಬೆನ್ನೂರಿನ ಶ್ರೀ ಬಿ.ಎಂ. ನಂಜಯ್ಯನವರಿಗೆ ‘ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ’ ಪ್ರಶಸ್ತಿಯನ್ನು ಉಭಯ ಜಗದ್ಗುರುಗಳು ದಯಪಾಲಿಸಿ ಶುಭ ಹಾರೈಸಿದರು. ಸಾನ್ನಿಧ್ಯ ವಹಿಸಿದ್ದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಕೂಡ ಆಶೀರ್ವಚನ ನೀಡಿದರು.

ಮುಕ್ತಿಮಂದಿರ ಕ್ಷೇತ್ರದ ಪೀಠಾಧ್ಯಕ್ಷರಾದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶದಲ್ಲಿ ಎಮ್ಮಿಗನೂರು, ಬಂಕಾಪುರ, ಗಿರಿ ಸಾಗರ, ಬೆಳ್ಳಿಕೇರಿ, ಸುಳ್ಳ, ಸಿದ್ದರಬೆಟ್ಟ, ಮರಳಿ, ಹೀರೆವಡ್ಡಟ್ಟಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿದ್ದರು. ಸಮಾವೇಶಕ್ಕೂ ಮುನ್ನ ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸವವು ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು. ಬಂದ ಭಕ್ತಾದಿಗಳಿಗೆ ಅನ್ನದಾಸೋಹ ಸೇವೆ ಸಲ್ಲಿಸಲಾಯಿತು. ಸವರ್ಣೂರಿನ ಡಾ. ಗುರುಪಾದಯ್ಯ ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು.

Related Articles

Comments (0)

Leave a Comment