ಆತ್ಮವಿಶ್ವಾಸದಿಂದ ಜನರ ಸೇವೆಗೆ ಸಿದ್ಧ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು : ಅಧಿಕಾರದ ಎರಡು ವರ್ಷಗಳಲ್ಲಿ  ರಾಜ್ಯದ ಜನರಿಗೆ ಒಳಿತು ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದು ನೂತನ  ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್ ತಿಳಿಸಿದರು.

ಇಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು,ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿಗಳ ಅಧಿಕಾರ ಹಸ್ತಾಂತರದ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು. ಇಂದು ಸಂಜೆ 4.05 ಕ್ಕೆ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಈ ಶುಭಸಂದರ್ಭಕ್ಕೆ ಎಲ್ಲ ಗಣ್ಯರು ಹಾಗೂ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ. “ಹಿಂದಿನ ಹೆಜ್ಜೆಯನ್ನು ಮರೆತವನು, ಮುಂದಿನ ಹೆಜ್ಜೆಯನ್ನು ಇಡಲಾರ” ಎಂಬ ಮಾತಿನಲ್ಲಿ ನಂಬಿಕೆಯಿರಿಸಿದ್ದೇನೆ. ಇಂದು ಹೊಸ ದಿನದಂದು ಹೊಸ ಅವಕಾಶಗಳಿಗೆ ದಾರಿಮಾಡಿಕೊಡಲು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಜನತೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ರಾಜ್ಯದ ರೈತಬಳಗ ನಮ್ಮ ಬೆನ್ನುಲುಬು. ಮುಂದಿನ ದಿನಗಳಲ್ಲಿ ರೈತರೂ ಸೇರಿದಂತೆ ವಿವಿಧ ವರ್ಗದ ಜನರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು , ಕಳೆದ ಆರು ತಿಂಗಳಿನಿಂದ ನನ್ನ ಸಿದ್ಧತೆ ನಡೆದಿದೆ. ಈ ದಿಸೆಯಲ್ಲಿ  ಹೊಸ ಯುವ ಯುಗ ಸೃಷ್ಠಿಸುವ ಉದ್ದೇಶದಿಂದ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ

ನನ್ನ ಮೇಲಿನ ಜನರಿಗೆ ಅಪಾರ ವಿಶ್ವಾಸವಿದೆ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ವೆ ಎಂಬುದರಲ್ಲಿ ವಿಶ್ವಾಸವಿರಿಸಿದ್ದೇನೆ. ರಾಜ್ಯದ ಆಡಳಿತದಲ್ಲಿ ಹೊಸ ಬೆಳಕು ಮೂಡಿಸಲು ನನ್ನ ರಾಜಕೀಯ ಅನುಭವ ನೆರವಾಗಲಿದೆ. 1985ರಿಂದ ವಿಧಾನಸಭೇ ಚುನಾವಣೆಯಲ್ಲಿ ಸ್ಪರ್ಧಿಸಿ, ನಂತರ ಜಿಲ್ಲಾಪಂಚಾಯತ್, ಶಾಸಕರಾಗಿ, ವಿವಿಧ ಸಚಿವ ಸಂಪುಟದ ಭಾಗವಾಗಿ ಸೇವೆ ಸಲ್ಲಿಸಿದ್ದೇನೆ. ಸಣ್ಣ ವಯಸ್ಸಿನಲ್ಲಿ ಅಧಿಕಾರ ಕಂಡರೂ, ಬದುಕಿನ ಹಲವು ಏಳುಬೀಳುಗಳನ್ನು ಕಂಡಿದ್ದೇನೆ. ರಾಜಕೀಯ ತಂತ್ರಗಳ ಕಾರಣ ತಿಹಾರ್ ಜೈಲಿಗೆ ಹೋದರೂ, ನನ್ನ ಆತ್ಮವಿಶ್ವಾಸ ತಗ್ಗಲಿಲ್ಲ. ಇದೇ ಆತ್ಮವಿಶ್ವಾಸದಿಂದ ಜನರ ಸೇವೆಗೆ ಸಿದ್ಧವಾಗಿ ನಿಂತಿದ್ದೇನೆ ಎಂದರು.

ನಗರಗಳಿಗೆ ರೈತರ ವಲಸೆ ತಪ್ಪಿಸಬೇಕಿದೆ

ಮುಖ್ಯಮಂತ್ರಿಯ ಕುರ್ಚಿಯೆಂಬುದು, ಪಕ್ಷದ ಕಾರ್ಯಕರ್ತರು ಮತ್ತು ನಾಡಿನ ಜನತೆ ನೀಡಿರುವ ಅಧಿಕಾರ. ಪಕ್ಷದ ವರಿಷ್ಠರಾದ ಶ್ರೀಮತಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ನನ್ನ ಮೇಲೆ ವಿಶ್ವಾಸವಿರಿಸಿ ಈ ಜವಾಬ್ದಾರಿಯನ್ನು  ವಹಿಸಿದ್ದಾರೆ. ಹಿರಿಯರಾದ ಸಿದ್ದರಾಮಯ್ಯನವರು ಪಕ್ಷದ ವರಿಷ್ಠರ ಮಾತಿಗೆ ಒಪ್ಪಿಗೆ ಸೂಚಿಸಿ, ಮುಖ್ಯಮಂತ್ರಿ ಸ್ಥಾನವನ್ನು ಸಂತೋಷದಿಂದ ತ್ಯಜಿಸಿದ್ದಾರೆ. ಗ್ರಾಮೀಣಾಭಿವೃದ್ಧಿ, ರೈತರ ಬದುಕು , ನಗರದ ಜನರ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಉದ್ಯೋಗವನ್ನರಸಿ ಗ್ರಾಮಗಳಿಂದ ಜನರು ನಗರಗಳೆಡೆಗೆ ಮುಖ ಮಾಡುತ್ತಿದ್ದಾರೆ. ಉತ್ತಮ ಬದುಕು, ಮಕ್ಕಳಿಗೆ ಶಿಕ್ಷಣಕ್ಕಾಗಿ ಹಳ್ಳಿ ಬಿಟ್ಟು ನಗರಕ್ಕೆ ಬರುತ್ತಿದ್ದಾರೆ. ಈ ವಲಸೆಯನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ.  ಸರ್ಕಾರದ ಕೈಗೊಳ್ಳುವ ಯಾವುದೇ ಜನಪರ ನಿರ್ಧಾರ, ಕೇವಲ ನನ್ನ ನಿರ್ಧಾರವಾಗಿರುವುದಿಲ್ಲ, ಅದು ನನ್ನ ಇಡೀ ಸಚಿವಸಂಪುಟದ ಒಕ್ಕೊರಲಿನ ನಿರ್ಧಾರವಾಗಿರಲಿದೆ ಎಂದರು.

ದೂರ ಸಾಗಲು ಸಂಘಟಿತ ಪಯಣ ಮುಖ್ಯ

ಎಸ್ ಎಂ ಕೃಷ್ಣಾ ಅವರ ಅವಧಿಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟಾಟಾ ಕಂಪನಿಯ ರತನ್ ಟಾಟಾ ಅವರು ಭೇಟಿಯಾದ ಸಂದರ್ಭದಲ್ಲಿ   “ವೇಗವಾಗಿ ಸಾಗುವುದಕ್ಕಿಂತ ದೂರವಾಗಿ ಸಾಗಲು ಸಂಘಟಿತ ಪಯಣ ಮುಖ್ಯ” ಎಂದು ಕಿವಿಮಾತು ಹೇಳಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ರಾಜ್ಯವನ್ನು ಮುನ್ನಡೆಸುವಲ್ಲಿ ಮಾಧ್ಯಮದ ಸಹಕಾರವೂ ಅಗತ್ಯ

ಇಂದು ನನ್ನ ಜೊತೆಗೆ ಉಪಮುಖ್ಯಮಂತ್ರಿಗಳು ಮತ್ತು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, “ಕನ್ನಡ ನಾಡನ್ನು ಸರ್ವಜನಾಂಗದ ಶಾಂತಿಯ ತೋಟ’ ವನ್ನಾಗಿಸುವ ಸಾರ್ಥಕತೆಯನ್ನು ಇಂದಿನ ಪ್ರಮಾಣವಚನ ನಿರೂಪಿಸಿದೆ. ವಿವಿಧ ವರ್ಗಗಳ ನಾಯಕರ ಬಲಿಷ್ಠವಾದ ನಾಯಕತ್ವದಲ್ಲಿ , ರಾಜ್ಯವನ್ನು ಮುನ್ನಡೆಸುವ ಈ ಪಯಣದಲ್ಲಿ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿರುವ ಮಾಧ್ಯಮ ರಂಗದ ಸಹಕಾರವೂ ಅವಶ್ಯ.   ಸರ್ಕಾರದ ಸರಿತಪ್ಪುಗಳನ್ನು ಎತ್ತಿಹಿಡಿಯುವ ಜೊತೆಗೆ, ವಿಷಯಗಳ ಸತ್ಯಾಸತ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕೋರಿದರು.

ನನ್ನ ಬದುಕು ಜನಸೇವೆಗೆ ಮುಡಿಪಾಗಿದೆ

ಎಲ್ಲ ಜಾತಿವರ್ಗಗಳ ಸಹಭಾಗಿತ್ವದಲ್ಲಿ ರಾಜ್ಯವನ್ನು ಮುನ್ನಡೆಸಬೇಕಿದೆ. ನಾನು ಯಾವುದೇ ಜಾತಿಧರ್ಮದಲ್ಲಿ ಸಮಾನವಾಗಿದ್ದು, ಮಾನವೀಯತೆಯೇ ಪರಮ ಧರ್ಮ ಎಂಬುದರಲ್ಲಿ ನಂಬಿಕೆಯಿರಿಸಿದವನು. ಇದು ಜನರ ಅಧಿಕಾರ. ನನ್ನ ಜೀವನವನ್ನು ಜನರ ಸೇವೆಗೆ ಮುಡಿಪಾಗಿಡುವ ಸಂಕಲ್ಪವನ್ನು ಮಾಡಿ, ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದೇನೆ ಎಂದರು.

ರೈತರ ಸಮಸ್ಯೆಗಳಿಗೆ ಪರಿಹಾರ

ನೂತನ ಸಚಿವ ಸಂಪುಟದಲ್ಲಿ ಜನಪರ ತೀರ್ಮಾನಗಳನ್ನು ಕೈಗೊಳ್ಳುವ ಉದ್ದೇಶದಿಂದ, ಯುವಯುಗದ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲು ಪ್ರಯತ್ನಿಸಲಾಗಿದೆ. ನೀರಾವರಿ  ಕುರಿತ ಸಮಸ್ಯೆಗಳ ಬಗ್ಗೆ ರೈತಮುಖಂಡರು ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ. ರೈತರು ಉದ್ಯೋಗಳನ್ನರಸಿ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕಿದೆ. ಕೃಷಿ ಸಂಬಂಧಿತ ಪಶುಸಂಗೋಪನೆ, ಹೈನುಗಾರಿಕೆ, ತೋಟಗಾರಿಕೆಯಂತಹ ಹಲವು ಕ್ಷೇತ್ರಗಳ ಬಗ್ಗೆ ರೈತರಿಗೆ ಅನುಕೂಲ ಕಲ್ಪಿಸಲು ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್

ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಎಲ್ಲಾ ಹಂತದ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಸಂಬಂಧಪಟ್ಟ ಅರ್ಜಿ ವಿತರಣೆಯ ಬಗ್ಗೆ ಸಾರಿಗೆ ಇಲಾಖೆಯು ಸಧ್ಯದಲ್ಲಿಯೇ ಕ್ರಮ ಕೈಗೊಳ್ಳಲಿದೆ.

ಖಾಸಗಿ ಕಂಪನಿ ಮತ್ತು ಉದ್ಯೋಗಾಕಾಂಕ್ಷಿಗಳ ಸಂಪರ್ಕಿಸುವ ವ್ಯವಸ್ಥೆ

ರಾಜ್ಯದಲ್ಲಿ ಉದ್ಯೋಗದ ಸಮಸ್ಯೆಯನ್ನು ನೀಗಿಸುವ ದಿಸೆಯಲ್ಲಿ ಸರ್ಕಾರ, ಈಗಾಗಲೇ 56000 ಹುದ್ದೆಗಳನ್ನು ಭರ್ತಿಗೊಳಿಸುವ ನಿರ್ಣಯವನ್ನು ಕೈಗೊಂಡಿದೆ. ಈ ಬಗ್ಗೆ ಎಲ್ಲಾ ತೊಡಕುಗಳನ್ನು ನಿವಾರಿಸಿ ನೇಮಕಾತಿ ಪ್ರಕ್ರಿಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಕರ್ನಾಟಕ ರಾಜ್ಯವು ಗುಣಮಟ್ಟದ ಮಾನವಸಂಪನ್ಮೂಲದಲ್ಲಿ  ಭಾರತದ  ರಾಜಧಾನಿಯೆಂದೇ ಹೆಸರು ಗಳಿಸಿದೆ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಐಟಿ ಬಿಟಿ ಸೇರಿದಂತೆ ವಿವಿಧ ವಲಯಗಳಲ್ಲಿ ಕರ್ನಾಟಕದಿಂದ ಶ್ರೇಷ್ಠ ಮಾನವಸಂಪನ್ಮೂಲ ಮೂಡಿಬಂದಿದೆ. ಖಾಸಗಿ ರಂಗದಲ್ಲಿ ಉದ್ಯೋಗ ಬಯಸುವ ಯುವಜನರಿಗೆ ಹಾಗೂ ಖಾಸಗಿ  ಕಂಪನಿಗಳ ಉದ್ಯೋಗದ ಬೇಡಿಕೆಗಳ ನಡುವೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ರೂಪಿಸಲು ನಿರ್ಣಯಿಸಲಾಗಿದೆ ಎಂದರು.

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಕಲ್ಪಿಸುವ ನಿಟ್ಟಿನಲ್ಲಿ ಚರ್ಚಿಸಿ ತೀರ್ಮಾನ

ಸೌಲಭ್ಯ ಕೇಂದ್ರದಲ್ಲಿ ಕಂಪನಿಗಳಿಗೆ ಅಗತ್ಯವಿರುವ  ತರಬೇತಿಯನ್ನೂ ನೀಡಿ,   ಅಲ್ಲಿನ  ಅಭ್ಯರ್ಥಿಗಳನ್ನು ಕಂಪನಿಗಳಿಗೆ ಆಯ್ಕೆ ಮಾಡಲಾಗುವುದು.  ಕರ್ನಾಟಕದವರಿಗೆ, ಕನ್ನಡಿಗರಿಗೆ ಉದ್ಯೋಗದಲ್ಲಿ  ಹೆಚ್ಚಿನ  ಪಾಲು ನೀಡಲಾಗುವುದು.    ಕನ್ನಡಿಗರಿಗೆ ನೀಡಬೇಕಾದ ಉದ್ಯೋಗದ ಶೇಕಡಾವಾರನ್ನು ಕಂಪನಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಈ ರಾಜ್ಯದ ಯುವಕರು, ವಿದ್ಯಾರ್ಥಿಗಳು, ನಿರುದ್ಯೋಗಗಳ ಉದ್ಯೋಗದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ.  ಇಲ್ಲಿನ   ಯುವಕರನ್ನು ಜಾಗತಿಕ  ಮಟ್ಟದಲ್ಲಿ ತಯಾರು ಮಾಡುವ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದ್ದು, ತಿಂಗಳೊಳಗೆ ಈ ಬಗ್ಗೆ  ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಎಲ್ಲವೂ ಆನ್ ಲೈನ್ ಆಗಲಿದೆ ಎಂದು ವಿವರಿಸಿದರು.

ಹತ್ತು ಸಾವಿರ ಭಾರತ ಜೋಡೋ ಯುವಕ ಸಂಘ ರಚಿಸಲು ತೀರ್ಮಾನ

ಹತ್ತು ಸಾವಿರ ಭಾರತ ಜೋಡೋ ಯುವಕ ಸಂಘ ರಚಿಸಲು ತೀರ್ಮಾನಿಸಲಾಗಿದ್ದು,ಪ್ರತಿ ಪಂಚಾಯರಿಗೂ ಒಂದು ಯುವಕ ಸಂಘ ರಚಿಸಿ,  ಸಂಘದಲ್ಲಿ ಕನಿಷ್ಠ 150 ರಿಂದ 200 ಜನರಿರುತ್ತಾರೆ. ಕ್ರೀಡೆ  ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು   ಯುವಕ ಸಂಘಗಳು ಕೈಗೊಳ್ಳುವುದಲ್ಲದೇ ನಾಯಕತ್ವ ಬೆಳವಣಿಗೆಗೆ,  ಸಾಮಾಜಿಕ ಸಾಮರಸ್ಯ ಕಾಪಾಡಲು ಶ್ರಮಿಸಲಿವೆ ಎಂದರು. ಅವರ ಪ್ರತಿಭೆಗೂ ಇಲ್ಲಿ ಅವಕಾಶ ದೊರೆಯಲಿದೆ. ಭಾರತ ಜೋಡೋ ಯುವಕ ಸಂಘಗಳಿಗೆ ಸರ್ಕಾರ ತಲಾ ಹತ್ತು ಲಕ್ಷ ರೂ.ಗಳ ಅನುದಾನ ನೀಡಲಿದೆ ಎಂದು ವಿವರಿಸಿದರು.

2500 ಅಡಿ   ನಿವೇಶನಗಳಲ್ಲಿ ನಿರ್ಮಿಸಲಾಗಿರುವ  ವಸತಿ ಕಟ್ಟಡಗಳಿಗೆ ವಿನಾಯ್ತಿ

ಬೆಂಗಳೂರು ನಗರದಲ್ಲಿ ವಿದ್ಯುತ್ ಸಮಸ್ಯೆ ಇದ್ದು, ಸರ್ಕಾರವು 2500 ಅಡಿ   ನಿವೇಶನಗಳಲ್ಲಿ ನಿರ್ಮಿಸಲಾಗಿರುವ  ವಸತಿ ಕಟ್ಟಡಗಳಿಗೆ ಒಸಿ (OC) ಮತ್ತು ಸಿಸಿ (CC) ಪಡೆಯುವುದರಿಂದ ಒಂದು ಬಾರಿ ಮಾತ್ರ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.

ರಾಜ್ಯಾದ್ಯಂತ ‘ನನ್ನ ಇ ಖಾತಾ ನನ್ನ ಹಕ್ಕು ‘ ಅಭಿಯಾನ ವಿಸ್ತರಣೆ

ಬಿ ಖಾತೆಯನ್ನು ಎ ಖಾತೆಗೆ ಪರಿವರ್ತನೆ ಅಭಿಯಾನವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಆರನೇ ಗ್ಯಾರಂಟಿಯಾದ ಭೂ ಗ್ಯಾರಂಟಿಗೆ ಸೂಕ್ತ ದಾಖಲೆ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದರು.

ನಗರದ ರಸ್ತೆಗಳನ್ನು ಉತ್ತಮಪಡಿಸಲು 2000 ಕೋಟಿ ರೂ.ಅನುದಾನ

ನಗರ ಮೂಲಸೌಕರ್ಯವನ್ನು ಉತ್ತಮಗೊಳಿಸಲು, ಚಾಲ್ತಿಯಲ್ಲಿರುವ  ಕಾಮಗಾರಿಗಳನ್ನು ಹೊರತುಪಡಿಸಿ ಜಿಬಿಎ, ಬಿಡಿಎ ವ್ಯಾಪ್ತಿ ಸೇರಿ ಕೇವಲ ರಸ್ತೆಗಳನ್ನು  ಉತ್ತಮಪಡಿಸಲು 2000 ಕೋಟಿ ರೂ.ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಸಚಿವರುಗಳಾದ ಕೆ.ಹೆಚ್.ಮುನಿಯಪ್ಪ, ಯು.ಟಿ.ಖಾದರ್ ಅವರು ಉಪಸ್ಥಿತರಿದ್ದರು.

Related Articles

Comments (0)

Leave a Comment