ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ಬಹುಪಯೋಗಿ ನೌಕೆ ‘ಐಎನ್‌ಎಸ್ ಸಮರ್ಥಕ್’ ದೇಶಕ್ಕೆ ಲೋಕಾರ್ಪಣೆ

ಕಾರವಾರ: ಭಾರತೀಯ ನೌಕಾಪಡೆಯ ಬಲವರ್ಧನೆ ಹಾಗೂ ರಕ್ಷಣಾ ವಲಯದ ಸ್ವಾವಲಂಬನೆಯ ಪಯಣದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿತವಾಗಿದೆ. ದೇಶದ ಮೊದಲ ಸ್ವದೇಶಿ ನಿರ್ಮಿತ ಬಹುಪಯೋಗಿ ನೌಕೆ ‘ಐಎನ್‌ಎಸ್ ಸಮರ್ಥಕ್’ ಅನ್ನು ಭಾರತದ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಅವರು ಶುಕ್ರವಾರ ಕರ್ನಾಟಕದ ಕಾರವಾರ ನೌಕಾನೆಲೆಯಲ್ಲಿ ಔಪಚಾರಿಕವಾಗಿ ಲೋಕಾರ್ಪಣೆಗೊಳಿಸಿದರು.

ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, “ಶೇಕಡಾ 75 ಕ್ಕಿಂತಲೂ ಹೆಚ್ಚು ಸ್ವದೇಶಿ ಉತ್ಪನ್ನಗಳನ್ನು ಒಳಗೊಂಡಿರುವ ಐಎನ್‌ಎಸ್ ಸಮರ್ಥಕ್, ಭಾರತದ ಹೆಚ್ಚುತ್ತಿರುವ ತಾಂತ್ರಿಕ ಸಾಮರ್ಥ್ಯ ಹಾಗೂ ಹಡಗು ನಿರ್ಮಾಣದ ಬಲವನ್ನು ಜಗತ್ತಿಗೆ ಸಾರುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಕೇವಲ ನಮ್ಮ ಕನಸಾಗಿ ಉಳಿದಿಲ್ಲ, ಅದು ಇಂದು ನನಸಾಗುತ್ತಿರುವ ವಾಸ್ತವವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಮತ್ತು ‘ವಿಕಸಿತ ಭಾರತ’ದ ಸಂಕಲ್ಪಕ್ಕೆ ದೊರೆತ ದೊಡ್ಡ ಕೊಡುಗೆಯಾಗಿದೆ” ಎಂದು ಶ್ಲಾಘಿಸಿದರು.

ಖಾಸಗಿ ವಲಯದ ಸಹಭಾಗಿತ್ವಕ್ಕೆ ಮೆಚ್ಚುಗೆ:

ಐಎನ್‌ಎಸ್ ಸಮರ್ಥಕ್ ನೌಕೆಯು ಭಾರತದ ಖಾಸಗಿ ಹಡಗು ನಿರ್ಮಾಣ ಉದ್ಯಮದ ಹೆಚ್ಚುತ್ತಿರುವ ಬಲಕ್ಕೆ ಸಾಕ್ಷಿಯಾಗಿದೆ ಎಂದ ಉಪರಾಷ್ಟ್ರಪತಿಗಳು, ಈ ಯೋಜನೆಯ ಯಶಸ್ಸಿಗೆ ಕಾರಣವಾದ ಖಾಸಗಿ ರಕ್ಷಣಾ ವಲಯದ ಪ್ರಮುಖ ಸಂಸ್ಥೆ ‘ಲಾರ್ಸನ್ ಆ್ಯಂಡ್ ಟೂಬ್ರೊ’ (ಎಲ್‌ಆ್ಯಂಡ್‌ಟಿ) ಕಾರ್ಯಕ್ಷಮತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಭಾರತದ ಕಡಲ ಹಿತಾಸಕ್ತಿಗಳನ್ನು ಕಾಯುವಲ್ಲಿ ನೌಕಾಪಡೆಯು ಸದಾ ಜಾಗರೂಕ ಹಾಗೂ ಯುದ್ಧ ಸನ್ನದ್ಧವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರವಾರ ನೌಕಾನೆಲೆಯ ಆಯಕಟ್ಟಿನ ಮಹತ್ವ:

ಕಾರವಾರದ ನೈಸರ್ಗಿಕ ಬಂದರು ಮತ್ತು ಅರಬ್ಬಿ ಸಮುದ್ರದ ಸಾಮೀಪ್ಯವನ್ನು ಉಲ್ಲೇಖಿಸಿದ ಅವರು, ಭಾರತದ ಕಡಲ ಭದ್ರತೆಯಲ್ಲಿ ಈ ಪ್ರದೇಶವು ಅತ್ಯಂತ ಕಾರ್ಯತಂತ್ರದ ತಾಣವಾಗಿದೆ ಎಂದರು. ಸದ್ಯ ಜಾರಿಯಲ್ಲಿರುವ ‘ಪ್ರಾಜೆಕ್ಟ್ ಸೀಬರ್ಡ್’ ಯೋಜನೆ ಮುಗಿದರೆ ಹಡಗುಗಳು ಹಾಗೂ ಜಲಾಂತರ್ಗಾಮಿಗಳ ಕಾರ್ಯಾಚರಣಾ ಸಾಮರ್ಥ್ಯವು ಮತ್ತಷ್ಟು ವೃದ್ಧಿಸಲಿದ್ದು, ಈ ಭಾಗದಲ್ಲಿ ದೊಡ್ಡ ಮಟ್ಟದ ಆರ್ಥಿಕ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ಬಹುಮುಖಿ ಬಳಕೆಯ ಅತ್ಯಾಧುನಿಕ ನೌಕೆ:

ಈ ನೌಕೆಯು ಮುಂದಿನ ಪೀಳಿಗೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಂವೇದಕಗಳು (Sensors) ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಪರೀಕ್ಷೆಗೆ ಪ್ರಮುಖ ವೇದಿಕೆಯಾಗಿ ಬಳಕೆಯಾಗಲಿದೆ. ಕಡಲ ಕಣ್ಗಾವಲು, ಗಸ್ತು ತಿರುಗುವಿಕೆ, ಮಾನವರಹಿತ ವಿಮಾನ/ವ್ಯವಸ್ಥೆಗಳ ಕಾರ್ಯಾಚರಣೆ ಹಾಗೂ ವಿಪತ್ತು ನಿರ್ವಹಣಾ ಸಮಯದ ರಕ್ಷಣಾ ಕಾರ್ಯಗಳಿಗೂ ಇದು ನೌಕಾಪಡೆಗೆ ಬಲ ತುಂಬಲಿದೆ.

ಬೀಳ್ಕೊಡುಗೆ ಮತ್ತು ಲೋಕಾರ್ಪಣೆಯ ಈ ಭವ್ಯ ಕಾರ್ಯಕ್ರಮದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ವೈಸ್-ಅಡ್ಮಿರಲ್ ಸಂಜಯ್ ವತ್ಸಾಯನ್, ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್, ಎಲ್‌ಆ್ಯಂಡ್‌ಟಿ ಹಡಗು ನಿರ್ಮಾಣ ವಿಭಾಗದ ಮುಖ್ಯಸ್ಥ ನಿವೃತ್ತ ರಿಯರ್ ಅಡ್ಮಿರಲ್ ಜಿ. ಕೆ. ಹರೀಶ್ ಹಾಗೂ ಐಎನ್‌ಎಸ್ ಸಮರ್ಥಕ್ ನೌಕೆಯ ಕಮಾಂಡಿಂಗ್ ಆಫೀಸರ್ ಕಮಾಂಡರ್ ಸುಶೀಲ್ ಕುಮಾರ್ ಸಿಂಗ್ ಸೇರಿದಂತೆ ನೌಕಾಪಡೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Related Articles

Comments (0)

Leave a Comment