ನೂತನ ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಶುಭ ಹಾರೈಕೆ!
- by Suddi Team
- June 3, 2026
- 177 Views
ಬೆಂಗಳೂರು: ಲೋಕಭವನದ ಗ್ಲಾಸ್ ಹೌಸ್ನಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುತ್ತಿರುವ ಈ ಐತಿಹಾಸಿಕ ಕ್ಷಣಕ್ಕೆ ಧಾರ್ಮಿಕ ವಲಯದ ಪರಮೋಚ್ಛ ಪೀಠಗಳಿಂದ ಮಹತ್ವದ ಶುಭ ಹಾರೈಕೆಗಳು ಹರಿದುಬಂದಿವೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ ಸೇರಿದಂತೆ ದೇಶದ ಪವಿತ್ರ ಶ್ರೀ ಜಗದ್ಗುರು ಪಂಚಪೀಠಗಳ ಅಧೀಶ್ವರರು ನೂತನ ಮುಖ್ಯಮಂತ್ರಿ ಹಾಗೂ ಅವರ ಸಚಿವ ಸಂಪುಟಕ್ಕೆ ಜಂಟಿ ಪತ್ರಿಕಾ ಹೇಳಿಕೆಯ ಮೂಲಕ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ್ದಾರೆ.
ಪದಗ್ರಹಣ ಸಮಾರಂಭಕ್ಕೆ ಪಂಚಪೀಠಗಳ ಜಗದ್ಗುರುಗಳಿಗೆ ಸತ್ಕಾರಪೂರ್ವಕ ಆಹ್ವಾನ ನೀಡಲಾಗಿತ್ತು. ಆದರೆ, ಪೂರ್ವ ನಿಗದಿತ ಧಾರ್ಮಿಕ ಕಾರ್ಯಕ್ರಮಗಳ ಕಾರಣದಿಂದ ಖುದ್ದಾಗಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಜಗದ್ಗುರುಗಳು ಜಂಟಿ ಸಂದೇಶದ ಮೂಲಕ ತಮ್ಮ ಹರಕೆಯನ್ನು ತಲುಪಿಸಿದ್ದಾರೆ. ರಂಭಾಪುರಿಯ ಡಾ. ವೀರಸೋಮೇಶ್ವರ ಜಗದ್ಗುರುಗಳು, ಉಜ್ಜಯಿನಿಯ ಸಿದ್ದಲಿಂಗ ಜಗದ್ಗುರುಗಳು, ಕೇದಾರದ ಭೀಮಾಶಂಕರಲಿಂಗ ಜಗದ್ಗುರುಗಳು, ಶ್ರೀಶೈಲದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಜಗದ್ಗುರುಗಳು ಮತ್ತು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಜಗದ್ಗುರುಗಳು ಹಾಗೂ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಈ ಜಂಟಿ ಆಶೀರ್ವಚನ ನೀಡಿದ್ದಾರೆ.
“ಧರ್ಮದಲ್ಲಿ ರಾಜಕೀಯ ಇರಬಾರದು, ಆದರೆ ರಾಜಕೀಯದಲ್ಲಿ ಧರ್ಮವಿರಬೇಕು” ಎಂಬ ಮಹೋನ್ನತ ತತ್ವವನ್ನು ಅರಿತು ಮುನ್ನಡೆಯುತ್ತಿರುವ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವುದು ಶ್ಲಾಘನೀಯ ಎಂದಿರುವ ಶ್ರೀಗಳು, ನೂತನ ಸರ್ಕಾರವು ಜಾತಿ, ಮತ, ಪಂಥ ಹಾಗೂ ಭಾಷೆಯ ಭೇದಭಾವಗಳನ್ನು ತೊಡೆದುಹಾಕಲಿ ಎಂದು ಹಾರೈಸಿದ್ದಾರೆ. ಸರ್ವರನ್ನು ಸಮಾನವಾಗಿ ಕಂಡು ಸರ್ವ ಜನಾಂಗದವರಿಗೂ ಸಮಾನ ಅವಕಾಶ ನೀಡುವ ಮೂಲಕ ಮಾದರಿ ಆಡಳಿತ ನೀಡುವಂತೆ ಅವರು ಕರೆ ನೀಡಿದ್ದಾರೆ.
ವಿಶೇಷವಾಗಿ, ಶ್ರೀ ರಂಭಾಪುರಿ ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಅಜ್ಜಯ್ಯನವರ ಪರಮ ಶಿಷ್ಯರಾಗಿರುವ ಡಿ.ಕೆ. ಶಿವಕುಮಾರ್ ಅವರು, “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ಪೀಠದ ಮೂಲ ಸಂದೇಶವನ್ನು ತಮ್ಮ ಆಡಳಿತಾವಧಿಯಲ್ಲಿ ಸಾಕಾರಗೊಳಿಸಲಿದ್ದಾರೆ ಎಂಬ ದೃಢ ವಿಶ್ವಾಸವನ್ನು ಪಂಚಪೀಠಾಧೀಶ್ವರರು ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ನೂತನ ಸಂಪುಟ ಸೇರಲಿರುವ ಎಲ್ಲಾ ಸಚಿವರಿಗೂ ಜಗದ್ಗುರುಗಳು ಶುಭ ಹಾರೈಸಿದ್ದಾರೆ.
Related Articles
Thank you for your comment. It is awaiting moderation.


Comments (0)