ಸಿಲಿಕಾನ್ ಸಿಟಿಯಲ್ಲಿ ಗರಿಗೆದರಲಿದೆ ಇಂಡೋನೇಷ್ಯಾದ ಬಾಲಿ ಸಂಸ್ಕೃತಿ: ಅ. 3ರಿಂದ 16 ದಿನಗಳ ಸಾಂಸ್ಕೃತಿಕ ಮಹೋತ್ಸವ
- by Suddi Team
- October 1, 2026
- 31 Views
ಬೆಂಗಳೂರು: ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಿ ಇಂಡೋನೇಷ್ಯಾದ ಬಾಲಿ ದ್ವೀಪದ ಶ್ರೀಮಂತ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳಲು ಸಜ್ಜಾಗಿದೆ. ಪರಮ್ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿರುವ ‘ಬಾಲಿ ಇನ್ ಬೆಂಗಳೂರು’ (BALI IN BENGALURU) ಸಾಂಸ್ಕೃತಿಕ ಉತ್ಸವವು ಅಕ್ಟೋಬರ್ 3ರಿಂದ 18ರವರೆಗೆ ನಗರದ ವಿವಿಧೆಡೆ ಜರುಗಲಿದೆ.
ಒಟ್ಟು 16 ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ 15ಕ್ಕೂ ಹೆಚ್ಚು ವಿಭಿನ್ನ ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರಗಳು ನಡೆಯಲಿವೆ. ವಿಶೇಷವೆಂದರೆ, ಅಕ್ಟೋಬರ್ 3ರಂದು ಒರಾಯನ್ ಮಾಲ್ನಲ್ಲಿ ನಡೆಯಲಿರುವ ಉದ್ಘಾಟನಾ ದಿನದ ‘ಕೆಚಕ್’ ನೃತ್ಯ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಬಾಲಿ–ಬೆಂಗಳೂರು ನಡುವೆ ಸಾಂಸ್ಕೃತಿಕ ಸೇತು:
ಇದು ಕೇವಲ ಕಲಾ ಪ್ರದರ್ಶನವಷ್ಟೇ ಅಲ್ಲದೆ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಪ್ರಾಚೀನ ಸಾಂಸ್ಕೃತಿಕ ಸಾಮ್ಯತೆ ಹಾಗೂ ರಾಮಾಯಣ ಆಧಾರಿತ ಪುರಾಣ ಕಥನಗಳನ್ನು ಮರುಶೋಧಿಸುವ ಸೃಜನಶೀಲ ಸಾಂಸ್ಕೃತಿಕ ವಿನಿಮಯವಾಗಿದೆ. ಭಾರತ ಸರ್ಕಾರದಿಂದ ಪದ್ಮಶ್ರೀ ಪುರಸ್ಕೃತರಾದ ಪ್ರಸಿದ್ಧ ಬಾಲಿನೀಸ್ ನೃತ್ಯ ಸಂಯೋಜಕ ಹಾಗೂ ವಿದ್ವಾಂಸ ಡಾ. ಐ. ವಯಾನ್ ಡಿಬಿಯಾ ಮತ್ತು ಅವರ ಪರಿಣಿತ ಕಲಾವಿದರ ತಂಡ ಈ ಉತ್ಸವವನ್ನು ಮುನ್ನಡೆಸಲಿದೆ.
ಕೆಚಕ್ ಮತ್ತು ಯಕ್ಷಗಾನದ ಜುಗಲ್ಬಂದಿ:
ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ಬಾಲಿಯ ಸಾಂಪ್ರದಾಯಿಕ ಕಲೆಯಾದ ‘ಕೆಚಕ್’ (Kecak) ನೃತ್ಯ ವೈಭವ ಮೂಡಿಬರಲಿದೆ. ಯಾವುದೇ ವಾದ್ಯ ಪರಿಕರಗಳಿಲ್ಲದೆ, ಕೇವಲ ಕಲಾವಿದರ ಕಂಠಧ್ವನಿಯ ಲಯದಲ್ಲೇ ಮೂಡಿಬರುವ ಈ ಪ್ರದರ್ಶನವು ರಾಮಾಯಣದ ಪ್ರಸಂಗಗಳನ್ನು ಆಧರಿಸಿದೆ. ಇದರೊಂದಿಗೆ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನ ಮತ್ತು ಬಾಲಿಯ ನೃತ್ಯ ಪ್ರಕಾರಗಳನ್ನು ಒಟ್ಟಿಗೆ ಜೋಡಿಸುವ ಅಪೂರ್ವ ಕಲಾ ಜುಗಲ್ಬಂದಿ ಕೂಡ ಪ್ರೇಕ್ಷಕರನ್ನು ರಂಜಿಸಲಿದೆ.
ಕಾರ್ಯಾಗಾರ ಮತ್ತು ಪ್ರದರ್ಶನಗಳು:
ಕಲಾಸಕ್ತರಿಗಾಗಿ ಬಾಲಿಯ ಸಾಂಪ್ರದಾಯಿಕ ಮುಖವಾಡ ತಯಾರಿಕೆ (Mask-making), ತೊಗಲುಗೊಂಬೆಯಾಟ (Shadow Puppetry), ನೃತ್ಯ ಚಲನೆಗಳ ತರಬೇತಿ ಹಾಗೂ ಬಾಲಿಯ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯ ಪರಿಚಯವನ್ನು ಈ ಉತ್ಸವ ಒಳಗೊಂಡಿರಲಿದೆ. ಇಂಡೋನೇಷ್ಯಾ ಮತ್ತು ಭಾರತದ ಮಾಸ್ಟರ್ ಕಲಾವಿದರು ಜಂಟಿಯಾಗಿ ನಡೆಸಿಕೊಡುವ ಈ ಕಾರ್ಯಕ್ರಮಗಳು ನಗರದ 13ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಜರುಗಲಿವೆ. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು paramfoundation.org ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ.
Related Articles
Thank you for your comment. It is awaiting moderation.


Comments (0)