ಗೃಹಲಕ್ಷ್ಮಿ ಹಣ ಸಾಲಕ್ಕೆ ಕಡಿತಗೊಳಿಸಿದರೆ ಕಠಿಣ ಕ್ರಮ: ಬ್ಯಾಂಕುಗಳಿಗೆ ಬ್ರೇಕ್ ಹಾಕಲು ಸಿಎಂ ಡಿಕೆ ಶಿವಕುಮರ್ ತುರ್ತು ಆದೇಶ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಡಿ ಮಹಿಳೆಯರ ಖಾತೆಗೆ ಜಮೆಯಾಗುವ ಮಾಸಿಕ ₹2,000 ಹಣವನ್ನು ಯಾವುದೇ ಕಾರಣಕ್ಕೂ ಹಳೆಯ ಸಾಲದ ಕಂತು ಅಥವಾ ಬಡ್ಡಿಗೆ ಕಡಿತ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸಲ್ಲಿಸಿದ ಸುದೀರ್ಘ ಮನವಿ ಪತ್ರಕ್ಕೆ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಈ ಕುರಿತು ತುರ್ತು ನಿರ್ದೇಶನ ರವಾನಿಸಿದ್ದಾರೆ.”ಬ್ಯಾಂಕ್ ಆಡಳಿತ ಮಂಡಳಿಗಳಿಗೆ ತಕ್ಷಣ ಪತ್ರ ಬರೆಯಿರಿ. ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಯಿಂದ ಹಣವನ್ನು ಯಾವುದೇ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಕಟ್ಟುನಿಟ್ಟಾಗಿ ತಿಳಿಸಿ” ಎಂದು ಸಿಎಂ ಸೂಚಿಸಿದ್ದಾರೆ.

ಯೋಜನೆಯ ಮೂಲ ಆಶಯಕ್ಕೆ ಧಕ್ಕೆ ತಂದಿದ್ದ ಬ್ಯಾಂಕುಗಳು:

ಪ್ರತಿ ತಿಂಗಳು 1 ಕೋಟಿ 24 ಲಕ್ಷದ 48 ಸಾವಿರಕ್ಕೂ ಹೆಚ್ಚು ಕುಟುಂಬದ ಯಜಮಾನಿಯರ ಖಾತೆಗೆ ಜಮೆಯಾಗುತ್ತಿರುವ ₹2,000 ಹಣವು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ದಿನಸಿ ಅಗತ್ಯಗಳು, ಮಕ್ಕಳ ಶಿಕ್ಷಣ ಮತ್ತು ಮಹಿಳೆಯರ ಸ್ವಾವಲಂಬನೆಗೆ ದೊಡ್ಡ ಆಸರೆಯಾಗಿದೆ. ಆದರೆ, ವಾಣಿಜ್ಯ ಬ್ಯಾಂಕುಗಳು, ಖಾಸಗಿ ಫೈನಾನ್ಸ್ ಕಂಪನಿಗಳು ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಜಮೆಯಾದ ತಕ್ಷಣವೇ ಹಳೆಯ ಸಾಲ ಅಥವಾ ಬಡ್ಡಿಯ ನೆಪವೊಡ್ಡಿ ಫಲಾನುಭವಿಗಳ ಗಮನಕ್ಕೆ ತರದೆ ಹಣ ಕಡಿತಗೊಳಿಸುತ್ತಿದ್ದವು. ಇದು ಯೋಜನೆಯ ಮೂಲ ಉದ್ದೇಶವನ್ನೇ ಗಾಳಿಗೆ ತೂರಿದಂತಾಗಿತ್ತು.

ಮುಖ್ಯಮಂತ್ರಿಗಳ ಆದೇಶದಲ್ಲಿರುವ ಪ್ರಮುಖ ಕಟ್ಟುನಿಟ್ಟಿನ ಕ್ರಮಗಳು:

ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ (SLBC) ಸುತ್ತೋಲೆ: ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕುಗಳು ಗೃಹಲಕ್ಷ್ಮಿ ಅನುದಾನವನ್ನು ಫಲಾನುಭವಿಯ ಹಳೆಯ ಸಾಲ, ಕೃಷಿಯೇತರ ಸಾಲ ಅಥವಾ ಬಡ್ಡಿಗೆ ಜಮೆ ಮಾಡಿಕೊಳ್ಳದಂತೆ ಎಸ್‌ಎಲ್‌ಬಿಸಿ ಮೂಲಕ ತಕ್ಷಣವೇ ಕಠಿಣ ಸುತ್ತೋಲೆ ಹೊರಡಿಸಲು ಸೂಚಿಸಲಾಗಿದೆ.

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್: ಮಹಿಳೆಯರ ಖಾತೆಗೆ ಹಣ ಬರುತ್ತಿದ್ದಂತೆ ಸ್ಥಳದಲ್ಲೇ ಬಲವಂತವಾಗಿ ವಸೂಲಿ ಮಾಡುವ ಅಥವಾ ಬೆದರಿಕೆ ಒಡ್ಡುವ ಖಾಸಗಿ ಫೈನಾನ್ಸ್ ಕಂಪನಿಗಳು ಮತ್ತು ಏಜೆಂಟರ ವಿರುದ್ಧ ಸುಲಿಗೆ ಪ್ರಕರಣ (Extortion Case) ದಾಖಲಿಸಲು ಹಾಗೂ ಅವರ ಪರವಾನಗಿ ರದ್ದುಪಡಿಸಲು ಕಠಿಣ ಎಚ್ಚರಿಕೆ ನೀಡಲಾಗಿದೆ.

ಕಡಿತವಾದ ಹಣ ತಕ್ಷಣ ಮರುಪಾವತಿ: ಮಹಿಳೆಯರ ಲಿಖಿತ ಒಪ್ಪಿಗೆಯಿಲ್ಲದೆ ಈಗಾಗಲೇ ಸಾಲದ ಬಾಕಿಗೆ ಕಡಿತಗೊಳಿಸಲಾಗಿರುವ ಹಣವನ್ನು ತಕ್ಷಣವೇ ಆಯಾ ಮಹಿಳೆಯರ ಖಾತೆಗೆ ಮರುಜಮೆ ಮಾಡಿಸಲು ಬ್ಯಾಂಕುಗಳಿಗೆ ತಾಕೀತು ಮಾಡುವಂತೆ ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ಆದೇಶಿಸಲಾಗಿದೆ.

ಜಿಲ್ಲಾಡಳಿತದಿಂದ ನಿರಂತರ ಮೇಲುಸ್ತುವಾರಿ: ಇಂತಹ ಅಕ್ರಮ ಹಣ ಕಡಿತ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು (SP) ನಿರಂತರ ನಿಗಾ ಇಡಲಿದ್ದಾರೆ. ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಈ ವಿಷಯವನ್ನು ಕಡ್ಡಾಯವಾಗಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

 

Related Articles

Comments (0)

Leave a Comment