ಆನೇಕಲ್ ಭಾಗದ ಕೆರೆಗಳ ಮಾಲಿನ್ಯಕ್ಕೆ ಬ್ರೇಕ್: ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ
- by Suddi Team
- October 1, 2026
- 27 Views
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ, ಜಿಗಣಿ ಹಾಗೂ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಿಂದ ಸಂಸ್ಕರಿಸದ ತ್ಯಾಜ್ಯ ನೀರು ಸ್ಥಳೀಯ ಜಲಮೂಲಗಳಿಗೆ ಸೇರುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳೊಂದಿಗೆ ಆನೇಕಲ್ ತಾಲೂಕಿನ ಪ್ರಮುಖ ಕೆರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧ್ಯಕ್ಷ ಶಿವಣ್ಣ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚಂದಾಪುರ, ರಾಮಕೃಷ್ಣಾಪುರ, ಹೆನ್ನಾಗರ, ಹೀಲಲಿಗೆ ಮತ್ತು ಮುತ್ತಾನಲ್ಲೂರು ಕೆರೆಗಳಿಗೆ ಭೇಟಿ ನೀಡಿದ ಸಚಿವರು, ಅಲ್ಲಿನ ಪರಿಸ್ಥಿತಿಯನ್ನು ಕಂಡು ಗಂಭೀರ ಕಳವಳ ವ್ಯಕ್ತಪಡಿಸಿದರು.
ಕೈಗಾರಿಕೆಗಳಿಗೆ ಕಠಿಣ ಎಚ್ಚರಿಕೆ:
ಪರಿಶೀಲನೆ ಬಳಿಕ ಮಾತನಾಡಿದ ಸಚಿವರು, “ಯಾವುದೇ ಕಾರಣಕ್ಕೂ ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ಮತ್ತು ಒಳಚರಂಡಿ ನೀರು ನೈಸರ್ಗಿಕ ಜಲಮೂಲಗಳನ್ನು ಸೇರಬಾರದು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಮತ್ತು ಪರಿಸರ ನಿಯಮಗಳನ್ನು ಉಲ್ಲಂಘಿಸಿ ತ್ಯಾಜ್ಯ ನೀರು ಹೊರಬಿಡುವ ಕೈಗಾರಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಸಿದರು.
ವಿಶೇಷ ಮೇಲ್ವಿಚಾರಣಾ ತಂಡ ರಚನೆ:
ಮಾಲಿನ್ಯಕ್ಕೆ ತಡೆ ಒಡ್ಡಲು ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಜಿಗಣಿ ಹಾಗೂ ಅತ್ತಿಬೆಲೆ ಪ್ರದೇಶಗಳಲ್ಲಿ ಕೈಗಾರಿಕಾ ತ್ಯಾಜ್ಯ ನೀರು ಹೊರಹಾಕುವ ಸ್ಥಳಗಳ ಮೇಲೆ ನಿರಂತರ ನಿಗಾ ಇಡಲು ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ‘ವಿಶೇಷ ಮೇಲ್ವಿಚಾರಣಾ ತಂಡಗಳನ್ನು’ ರಚಿಸಲು ಸಚಿವರು ಆದೇಶಿಸಿದರು.
ಸಮಯಬದ್ಧ ಕಾಮಗಾರಿಗೆ ಗಡುವು:
ಕೈಗಾರಿಕಾ ಮತ್ತು ವಸತಿ ಪ್ರದೇಶಗಳ ತ್ಯಾಜ್ಯ ನೀರು ಸಂಸ್ಕರಣೆಗಾಗಿ ನಿರ್ಮಿಸಲಾಗುತ್ತಿರುವ ನಾಲ್ಕು ಪ್ರಮುಖ ನೀರು ಸಂಸ್ಕರಣಾ ಘಟಕಗಳ (STP) ಪ್ರಗತಿಯನ್ನು ಪರಿಶೀಲಿಸಿದ ರಾಮಲಿಂಗಾರೆಡ್ಡಿ ಅವರು, ಈ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಕಾರ್ಯಾಚರಣೆಗೆ ತರಲು ನಗರಸಭೆ ಮತ್ತು KSPCB ಅಧಿಕಾರಿಗಳಿಗೆ ಕಾಲಮಿತಿ ಕಾರ್ಯಯೋಜನೆ ರೂಪಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸ್ಥಳೀಯ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದ ಸಚಿವರು, ಮಾಲಿನ್ಯಕ್ಕೊಳಗಾದ ಕೆರೆಗಳ ಪುನರುಜ್ಜೀವನಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆರ್.ಕೆ. ರಮೇಶ್, ಆರ್. ಗೋಕೂಲ್ (IFS), ಶ್ರೀನಿವಾಸುಲು (IFS), ಕ್ಯಾಪ್ಟನ್ ಸಂತೋಷ್ (KAS) ಸೇರಿದಂತೆ ಪ್ರಮುಖ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.


Comments (0)