ಕೆಎಸ್‌ಆರ್‌ಟಿಸಿಗೆ ಎರಡು ‘ಎಲೆಟ್ಸ್ ಮೊಬಿಲಿಟಿ ಎಕ್ಸಲೆನ್ಸ್’ ರಾಷ್ಟ್ರೀಯ ಪ್ರಶಸ್ತಿಗಳ ಗರಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ತಂತ್ರಜ್ಞಾನ ಮತ್ತು ಜನಸ್ನೇಹಿ ಸೇವೆಯಲ್ಲಿ ಮತ್ತೊಮ್ಮೆ ರಾಷ್ಟ್ರಮಟ್ಟದ ಗಮನ ಸೆಳೆದಿದ್ದು, ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ಎರಡು ‘ಎಲೆಟ್ಸ್ ಮೊಬಿಲಿಟಿ ಎಕ್ಸಲೆನ್ಸ್ – 2026’ (Elets Mobility Excellence) ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಯಾವ ಯೋಜನೆಗಳಿಗೆ ಪ್ರಶಸ್ತಿ?

1. ಧ್ವನಿಸ್ಪಂದನ ಉಪಕ್ರಮ: ‘ನಾಗರಿಕ ತೊಡಗಿಸಿಕೊಳ್ಳುವಿಕೆ ಮತ್ತು ಅಂತರ್ಗತ ಸಂಚಾರಿ ನಾವೀನ್ಯತೆ’ (Innovation in Citizen Engagement and Inclusive Mobility) ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ. ಜರ್ಮನಿಯ GiZ ಸಹಯೋಗದೊಂದಿಗೆ ಮೈಸೂರು ನಗರದ 200 ಬಸ್‌ಗಳಲ್ಲಿ ಈ ‘ಆನ್-ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಷನ್ ಸಿಸ್ಟಮ್’ ಜಾರಿಗೆ ತರಲಾಗಿದೆ. ಇದು ದೃಷ್ಟಿ ವಿಕಲಚೇತನರು ಇತರರ ಅವಲಂಬನೆ ಇಲ್ಲದೆ ಸುರಕ್ಷಿತವಾಗಿ ಮತ್ತು ಆತ್ಮವಿಶ್ವಾಸದಿಂದ ಪ್ರಯಾಣಿಸಲು ಸಹಕಾರಿಯಾಗಿದೆ.

2. ಅವತಾರ್ 4.0 (AWATAR 4.0): ‘ಸಾರ್ವಜನಿಕ ಸಾರಿಗೆ ಡಿಜಿಟಲೀಕರಣದ ಅತ್ಯುತ್ತಮ ಉಪಕ್ರಮ’ (Outstanding Public Transport Digitisation Initiative) ವಿಭಾಗದಲ್ಲಿ ಈ ಗೌರವ ಸಂದಿದೆ. ನಿಗಮದ ಪ್ರಮುಖ ಡಿಜಿಟಲ್ ಆಸನ ಕಾಯ್ದಿರಿಸುವಿಕೆ ವ್ಯವಸ್ಥೆಯಾದ ಇದರಲ್ಲಿ ರಿಯಲ್-ಟೈಮ್ ಆಸನ ಲಭ್ಯತೆ ಮತ್ತು ಸುಗಮ ಟಿಕೆಟ್ ಬುಕಿಂಗ್ ಸೌಲಭ್ಯವಿದೆ. ಮುಖ್ಯವಾಗಿ, ಇದರಲ್ಲಿ ಅಳವಡಿಸಲಾದ ಡೈನಾಮಿಕ್ ಯುಪಿಐ (Dynamic UPI) ಪಾವತಿ ವ್ಯವಸ್ಥೆಯು ನಗದುರಹಿತ ವಹಿವಾಟು ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸಿದೆ.

ಪ್ರಶಸ್ತಿ ಪ್ರದಾನ:

ಹೈದರಾಬಾದ್‌ನ ನೊವೊಟೆಲ್ ಹೋಟೆಲ್‌ನಲ್ಲಿ ಮಾಚ್ 17 ರಂದು ನಡೆದ ಸಮಾರಂಭದಲ್ಲಿ, ತೆಲಂಗಾಣ ಸರ್ಕಾರದ ಸಾರಿಗೆ ಇಲಾಖೆ ಆಯುಕ್ತರಾದ ಕೆ. ಇಳಂಬರಿತಿ ಮತ್ತು ಎಲೆಟ್ಸ್ ಟೆಕ್ನೋಮೀಡಿಯಾದ ಸಿಇಒ ಡಾ. ರವಿ ಗುಪ್ತಾ ಅವರಿಂದ ಕೆಎಸ್‌ಆರ್‌ಟಿಸಿ ನಿರ್ದೇಶಕಿ (ಸಿ ಮತ್ತು ಜಾ) ಗಾಯಿತ್ರಿ ಕೆ. ಎಂ. ಅವರು ಈ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ತಾಂತ್ರಿಕ ನಾವೀನ್ಯತೆಗಳ ಮೂಲಕ ಪ್ರಯಾಣಿಕರ ಅನುಭವವನ್ನು ಉತ್ತಮಪಡಿಸುತ್ತಿರುವ ಕೆಎಸ್‌ಆರ್‌ಟಿಸಿಯ ಕಾರ್ಯಕ್ಕೆ ಈ ಪ್ರಶಸ್ತಿಗಳು ಸಂದ ಗೌರವವಾಗಿದೆ.

 

Related Articles

Comments (0)

Leave a Comment