ಒಂದು ಕರ್ನಾಟಕ ಮೊಬಿಲಿಟಿ ಆ್ಯಪ್ ಹಾಗೂ ವಾಟ್ಸಾಪ್ ಮೂಲಕ ಏಕೀಕೃತ ಸಾರಿಗೆ ಸೇವೆ ಲೋಕಾರ್ಪಣೆ
- by Suddi Team
- September 10, 2026
- 14 Views
ಬೆಂಗಳೂರು: ರಾಜ್ಯದ ಪ್ರಯಾಣಿಕರಿಗೆ ಮತ್ತಷ್ಟು ಸುಲಭ, ಸರಳ ಹಾಗೂ ಅನುಕೂಲಕರ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ಡಿಜಿಟಲ್ ಸೇವೆಗಳನ್ನು ವಿಸ್ತರಿಸಿದೆ. ಇದರ ಭಾಗವಾಗಿ ‘ಒಂದು ಕರ್ನಾಟಕ ಮೊಬಿಲಿಟಿ’ ಆ್ಯಪ್ ಹಾಗೂ ವಾಟ್ಸಾಪ್ ಮೂಲಕ ಬಸ್ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಲಾಗಿದೆ.
ರಾಜ್ಯದ ನಾಲ್ಕು ಪ್ರಮುಖ ರಸ್ತೆ ಸಾರಿಗೆ ಸಂಸ್ಥೆಗಳಾದ KSRTC, NWKRTC, KKRTC ಹಾಗೂ BMTC ಸಂಸ್ಥೆಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಒಟ್ಟುಗೂಡಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ನವೀಕೃತ ಮೊಬೈಲ್ ಆ್ಯಪ್ ಹಾಗೂ ವಾಟ್ಸಾಪ್ ಟಿಕೆಟಿಂಗ್ ಸೌಲಭ್ಯಕ್ಕೆ ಇತ್ತೀಚೆಗೆ ಚಾಲನೆ ನೀಡಲಾಗಿದೆ.
ಮೊಬೈಲ್ ಆ್ಯಪ್ನ ಪ್ರಮುಖ ವೈಶಿಷ್ಟ್ಯಗಳು:
ಸುರಕ್ಷಿತ ಲಾಗಿನ್: ಪ್ರಯಾಣಿಕರ ಗುರುತಿನ ದೃಢೀಕರಣದೊಂದಿಗೆ ಸುರಕ್ಷಿತ ಲಾಗಿನ್ ವ್ಯವಸ್ಥೆ ಇರಲಿದೆ.
ದೂರು ನಿರ್ವಹಣೆ: ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಲು ಮತ್ತು ಪರಿಹಾರದ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಅವಕಾಶವಿದೆ.
ಬುಕ್ಕಿಂಗ್ ವಿವರ: ಹಿಂದಿನ ಬುಕ್ಕಿಂಗ್ಗಳ ವಿವರ ವೀಕ್ಷಣೆ ಹಾಗೂ ವಹಿವಾಟುಗಳ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ.
ಬಸ್ ಪಾಸ್ ಸೌಲಭ್ಯ: ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಡಿಜಿಟಲ್ ಮಾಸಿಕ ಪಾಸ್ ವ್ಯವಸ್ಥೆಯ ಮೂಲಕ ಆನ್ಲೈನ್ನಲ್ಲಿ ಬಸ್ ಪಾಸ್ ಬುಕ್ಕಿಂಗ್, ವಿತರಣೆ ಹಾಗೂ QR ಕೋಡ್ ಆಧಾರಿತ ಡಿಜಿಟಲ್ ಪರಿಶೀಲನೆಗೆ ಅವಕಾಶ ಸಿಗಲಿದೆ.
ವಾಟ್ಸಾಪ್ ಮೂಲಕ ಟಿಕೆಟ್ ಬುಕ್ಕಿಂಗ್ ಹೇಗೆ?
ಪ್ರಯಾಣಿಕರು ಇನ್ಮುಂದೆ +91 6364940880 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಸುಲಭವಾಗಿ ಟಿಕೆಟ್ ಕಾಯ್ದಿರಿಸಬಹುದು. ವಾಟ್ಸಾಪ್ನಲ್ಲಿ ಲಭ್ಯವಾಗುವ ಸಂವಾದಾತ್ಮಕ ವ್ಯವಸ್ಥೆಯು ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ.
ಟಿಕೆಟ್ ಬುಕ್ಕಿಂಗ್ ವಿಧಾನ:
ಪ್ರಯಾಣ ಆರಂಭಿಸುವ ಸ್ಥಳ, ಗಮ್ಯಸ್ಥಾನ ಹಾಗೂ ಪ್ರಯಾಣದ ದಿನಾಂಕವನ್ನು ಆಯ್ಕೆ ಮಾಡಿ ಬಸ್ ಸೇವೆಗಳನ್ನು ಹುಡುಕಬೇಕು.
ಪ್ರಯಾಣದ ಆದ್ಯತೆಗೆ ಅನುಗುಣವಾಗಿ ಸೂಕ್ತವಾದ ಬಸ್ ಸೇವೆಯನ್ನು ಆಯ್ದುಕೊಳ್ಳಬೇಕು.
ಪ್ರಯಾಣಿಕರ ವಿವರಗಳನ್ನು ನಮೂದಿಸಬೇಕು.
ಟಿಕೆಟ್ ವಿವರಗಳನ್ನು ಪರಿಶೀಲಿಸಿ ಪಾವತಿಯನ್ನು ಪೂರ್ಣಗೊಳಿಸಬೇಕು. UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ವ್ಯಾಲೆಟ್ಗಳ ಮೂಲಕ ಹಣ ಪಾವತಿಸಬಹುದು. ಪಾವತಿ ಯಶಸ್ವಿಯಾದ ನಂತರ ಟಿಕೆಟ್ ದೃಢೀಕರಣವನ್ನು ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ.
ಟಿಕೆಟ್ ರದ್ದುಪಡಿಸುವಿಕೆ (ಕ್ಯಾನ್ಸಲೇಶನ್):
ವಾಟ್ಸಾಪ್ ಮೂಲಕ ಬುಕ್ ಮಾಡಿರುವ ಟಿಕೆಟ್ಗಳನ್ನು ಅದೇ ವಾಟ್ಸಾಪ್ ಸಂಖ್ಯೆಯ ಮೂಲಕ ರದ್ದುಪಡಿಸಬಹುದು. ಪ್ರಯಾಣಿಕರು ವಾಟ್ಸಾಪ್ನಲ್ಲಿ ಯಾವುದೇ ಸಂದೇಶ ಕಳುಹಿಸಿ “Ticket Cancellation” ಆಯ್ಕೆಯನ್ನು ಆರಿಸಿಕೊಳ್ಳಬೇಕು. ನಂತರ PNR ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಆ ಸಮಯದಲ್ಲಿ ಬರುವ Transaction Password ಅನ್ನು ನಮೂದಿಸಿ ಟಿಕೆಟ್ ರದ್ದುಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಟಿಕೆಟ್ ಕಾಯ್ದಿರಿಸುವಿಕೆ ಅಥವಾ ಯಾವುದೇ ಸಹಾಯಕ್ಕಾಗಿ ಪ್ರಯಾಣಿಕರು ಕೆಎಸ್ಆರ್ಟಿಸಿ ಕರೆ ಕೇಂದ್ರದ ಸಂಖ್ಯೆ 080-26252625 (24×7) ಅಥವಾ ಅವತಾರ್ ಸೆಲ್ ಸಂಖ್ಯೆಗಳಾದ 7760990034 / 7760990035 (ಬೆಳಿಗ್ಗೆ 7.00 ರಿಂದ ರಾತ್ರಿ 10.00 ಗಂಟೆಯವರೆಗೆ) ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Related Articles
Thank you for your comment. It is awaiting moderation.


Comments (0)