ಗೌರಿ-ಗಣೇಶ ಹಬ್ಬ: ಕೆಎಸ್ಆರ್ಟಿಸಿಯಿಂದ 2,400 ಹೆಚ್ಚುವರಿ ಬಸ್ಗಳ ಸಂಚಾರ
- by Suddi Team
- September 4, 2026
- 8 Views
ಬೆಂಗಳೂರು: ಮುಂಬರುವ ಗೌರಿ-ಗಣೇಶ ಹಬ್ಬ ಹಾಗೂ ವಾರಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) 2,400 ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆಯನ್ನು ಮಾಡಿದೆ.
ದಿನಾಂಕ 14.09.2026 ರಂದು ಗೌರಿ-ಗಣೇಶ ಹಬ್ಬವಿದ್ದು, ಅದಕ್ಕೂ ಮುನ್ನ 12.09.2026 ಮತ್ತು 13.09.2026 ಶನಿವಾರ ಮತ್ತು ಭಾನುವಾರದ ರಜೆ ದಿನಗಳಾಗಿವೆ. ಈ ಕಾರಣದಿಂದಾಗಿ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 13ರ ವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್ಗಳು ಸಂಚರಿಸಲಿವೆ. ಹಬ್ಬ ಮುಗಿದ ನಂತರ ಸಾರ್ವಜನಿಕರು ಮರಳಿ ಬೆಂಗಳೂರಿಗೆ ಬರಲು ಅನುಕೂಲವಾಗುವಂತೆ ಸೆಪ್ಟೆಂಬರ್ 14ರಂದು ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ಭಾಗಗಳಿಂದ ಬೆಂಗಳೂರಿಗೆ ವಿಶೇಷ ಬಸ್ಗಳ ಕಾರ್ಯಾಚರಣೆ ಇರಲಿದೆ.
ನಿಲ್ದಾಣಗಳ ವಿವರ ಮತ್ತು ಪ್ರಮುಖ ಮಾರ್ಗಗಳು:
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್): ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಹಾಗೂ ಹೊರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಇಲ್ಲಿಂದ ಬಸ್ಗಳು ಹೊರಡಲಿವೆ.
ಮೈಸೂರು ರಸ್ತೆ ಬಸ್ ನಿಲ್ದಾಣ: ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗಗಳ ಕಡೆಗೆ ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
ಶಾಂತಿನಗರ ಬಸ್ ನಿಲ್ದಾಣ (BMTC ನಿಲ್ದಾಣ): ತಮಿಳುನಾಡು ಮತ್ತು ಕೇರಳ ರಾಜ್ಯಗಳ ಕಡೆಗೆ ಹೋಗುವ ಅಂದರೆ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೋಯಿಕ್ಕೋಡ್ ಮುಂತಾದ ಸ್ಥಳಗಳಿಗೆ ವಿಶೇಷ ಸಾರಿಗೆಗಳ ವ್ಯವಸ್ಥೆ ಇರಲಿದೆ.
ಟಿಕೆಟ್ ಬುಕಿಂಗ್ ಮತ್ತು ರಿಯಾಯಿತಿಗಳು:
ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಆಸನ ಕಾಯ್ದಿರಿಸುವ (Advance Booking) ಸೌಲಭ್ಯವನ್ನು ನೀಡಲಾಗಿದೆ. ಪ್ರಯಾಣಿಕರು ಅಧಿಕೃತ ವೆಬ್ಸೈಟ್ www.ksrtc.karnataka.gov.in ಮೂಲಕ ಇ-ಟಿಕೆಟ್ ಬುಕ್ ಮಾಡಬಹುದು. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡಾ 5 ರಷ್ಟು ರಿಯಾಯಿತಿ ಸಿಗಲಿದೆ. ಇನ್ನು ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ಗಳನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣದ ದರದಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ದೊರೆಯಲಿದೆ.
ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿರುವ ನಿಗಮದ ಮುಂಗಡ ಆಸನ ಕಾಯ್ದಿರಿಸುವ ಕೌಂಟರ್ಗಳ ಮೂಲಕವೂ ಟಿಕೆಟ್ ಪಡೆಯಬಹುದು. ಹೆಚ್ಚುವರಿ ಬಸ್ಗಳು ಹೊರಡುವ ಸ್ಥಳ ಮತ್ತು ವೇಳಾಪಟ್ಟಿಯ ಸಂಪೂರ್ಣ ವಿವರಗಳನ್ನು ವೆಬ್ಸೈಟ್ನಲ್ಲಿ ನೀಡಲಾಗಿದ್ದು, ಪ್ರಯಾಣಿಕರು ಟಿಕೆಟ್ ಮೇಲಿರುವ ಬಸ್ ನಿಲ್ದಾಣ/ಪಿಕಪ್ ಪಾಯಿಂಟ್ ಹೆಸರನ್ನು ಗಮನಿಸಿ ಪ್ರಯಾಣಿಸುವಂತೆ ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.
Related Articles
Thank you for your comment. It is awaiting moderation.


Comments (0)