ಕೆಎಸ್ಆರ್ಟಿಸಿ ನೌಕರಿ ಆಮಿಷಕ್ಕೆ ಬಲಿಯಾಗಬೇಡಿ: ನಿಗಮದ ಎಚ್ಚರಿಕೆ
- by Suddi Team
- March 11, 2026
- 10 Views
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್ಆರ್ಟಿಸಿ) ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಕಾಂಕ್ಷಿಗಳಿಗೆ ವಂಚಿಸುತ್ತಿರುವ ಜಾಲದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.
ಸಂಸ್ಥೆಯ ಉನ್ನತ ಅಧಿಕಾರಿ ಎಂದು ಸುಳ್ಳು ಹೇಳಿ, ನಿಗಮದ ನಕಲಿ ಲೆಟರ್ ಹೆಡ್ ಬಳಸಿ ಅಭ್ಯರ್ಥಿಗಳಿಗೆ ವಂಚಿಸಿರುವ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿರುವುದು ನಿಗಮದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ನಿಗಮವು, ಕೆಎಸ್ಆರ್ಟಿಸಿಯಲ್ಲಿ ಯಾವುದೇ ನೇರ ನೇಮಕಾತಿಯನ್ನು ಆನ್ಲೈನ್ ಮೂಲಕವೇ ನಡೆಸಲಾಗುತ್ತದೆ. ಮೆರಿಟ್ ಹಾಗೂ ಮೀಸಲಾತಿ ಆಧಾರದ ಮೇಲೆ ಗಣಕೀಕೃತ ವ್ಯವಸ್ಥೆಯ ಮೂಲಕ ಪಾರದರ್ಶಕವಾಗಿ ಆಯ್ಕೆ ನಡೆಯಲಿದ್ದು, ಯಾವುದೇ ಮಾನವ ಹಸ್ತಕ್ಷೇಪಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಹೇಳಿದೆ.
ಯಾವುದೇ ಶಿಫಾರಸು ಅಥವಾ ನೇರ ಅರ್ಜಿಗಳ ಮೂಲಕ ಉದ್ಯೋಗ ನೀಡುವ ವ್ಯವಸ್ಥೆ ಜಾರಿಯಲ್ಲಿಲ್ಲ. ನೇಮಕಾತಿ ಸಂಬಂಧಿತ ಅಧಿಕೃತ ಮಾಹಿತಿಗಾಗಿ ksrtcjobs.gov.in ಜಾಲತಾಣವನ್ನು ಮಾತ್ರ ಗಮನಿಸಬೇಕು. ಸಾರ್ವಜನಿಕರು ಇಂತಹ ಆಮಿಷಗಳಿಗೆ ಬಲಿಯಾಗಬಾರದು. ಯಾರಾದರೂ ನೌಕರಿಯ ಆಸೆ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ನಿಗಮವು ಪ್ರಕಟಣೆಯಲ್ಲಿ ಕೋರಿದೆ.
Related Articles
Thank you for your comment. It is awaiting moderation.


Comments (0)