ಧರ್ಮ ರಕ್ಷಣೆ ದುಷ್ಟ ಶಕ್ತಿಗಳ ದಮನವೇ ವೀರಭದ್ರಸ್ವಾಮಿ ಅವತಾರದ ಮೂಲ ಉದ್ದೇಶ: ಶ್ರೀ ರಂಭಾಪುರಿ ಜಗದ್ಗುರುಗಳು

ಹುಬ್ಬಳ್ಳಿ: ಸಮಾಜದಲ್ಲಿ ದುಷ್ಟ ಶಕ್ತಿಗಳು, ಅಸಮಾನತೆ, ಅಶಾಂತಿ ಮತ್ತು ಮೌಲ್ಯಗಳ ಕುಸಿತ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ವೀರಭದ್ರನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಯುವಕರು ಧರ್ಮದೊಂದಿಗೆ ಆಧುನಿಕ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.

ನಗರದ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದ ಆವರಣದಲ್ಲಿ ಜರುಗಿದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

“ವೀರಭದ್ರ ಎಂದರೆ ಕೇವಲ ಶಸ್ತ್ರಧಾರಿ ದೈವದ ರೂಪವಲ್ಲ. ಧರ್ಮ ರಕ್ಷಣೆ ಹಾಗೂ ದುಷ್ಟ ಶಕ್ತಿಗಳ ದಮನವೇ ವೀರಭದ್ರಸ್ವಾಮಿ ಅವತಾರದ ಮೂಲ ಉದ್ದೇಶವಾಗಿದೆ. ವಿವೇಕ, ಧೈರ್ಯ, ಶಿಸ್ತು, ಕರ್ತವ್ಯನಿಷ್ಠೆ ಮತ್ತು ಧರ್ಮಬದ್ಧ ಜೀವನವೇ ನಿಜವಾದ ವೀರತ್ವ” ಎಂದು ಶ್ರೀಗಳು ಪ್ರತಿಪಾದಿಸಿದರು.

ವೀರಭದ್ರೇಶ್ವರಸ್ವಾಮಿ ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ. ಅವು ನಮ್ಮ ಜನಪರ ಸಂಸ್ಕೃತಿ, ಶೈವ ಪರಂಪರೆ, ಕಲೆ, ಆಚರಣೆ ಮತ್ತು ಸಮುದಾಯದ ಐತಿಹಾಸಿಕ ನೆನಪುಗಳನ್ನು ಉಳಿಸಿಕೊಂಡು ಬಂದಿರುವ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಶ್ರೀ ವೀರಭದ್ರಸ್ವಾಮಿ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಮತ್ತು ಕುಲಪುರುಷನಾಗಿ ಪೂಜೆಗೊಳ್ಳುತ್ತಿದ್ದಾನೆ. ನಾಡಿನ ಯಾವುದೇ ಭಾಗದಲ್ಲಿ ಶ್ರೀ ವೀರಭದ್ರಸ್ವಾಮಿ ನೆಲೆಗೊಂಡಿದ್ದರೂ ಆತನ ಮೂಲ ಶಕ್ತಿಕೇಂದ್ರ ರಂಭಾಪುರಿ ಕ್ಷೇತ್ರವಾಗಿದೆ ಎಂದು ಅವರು ನುಡಿದರು.

ಜಾತಿ, ಪ್ರದೇಶ, ಪಕ್ಷ ಭೇದಗಳನ್ನು ಮೀರಿ ಧರ್ಮ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ಕಟ್ಟುವ ಸಂಕಲ್ಪ ಜಯಂತ್ಯುತ್ಸವದಿಂದ ನಡೆಯಬೇಕೆಂಬ ಆಶಯ ನಮ್ಮದು. ವೀರಭದ್ರನ ಶೌರ್ಯ ನಮ್ಮಲ್ಲಿ ಧೈರ್ಯವನ್ನು, ಶಿವನ ತತ್ವ ನಮ್ಮಲ್ಲಿ ಜ್ಞಾನವನ್ನು ಹಾಗೂ ಧರ್ಮದ ಮಾರ್ಗ ನಮ್ಮಲ್ಲಿ ಸದಾಚಾರವನ್ನು ಬೆಳೆಸಲಿ ಎಂದು ಆಶೀರ್ವದಿಸಿದರು.

ಸಮಾರಂಭದಲ್ಲಿ ಪ್ರಮುಖರಾದ ಸದಾನಂದ ಡಂಗನವರ, ಚಂದ್ರಶೇಖರ ಜುಟ್ಟಲ, ವಿ.ಜಿ.ಪಾಟೀಲ, ಆರ್.ಎಂ.ಹಿರೇಮಠ, ಬಂಗಾರೇಶ ಹಿರೇಮಠ, ಬಸವರಾಜ ಸುಳ್ಳದ, ಡಾ.ರಾಮು ಮೂಲಗಿ, ಸಂತಿ ಉಮೇಶ, ಸುಮಂಗಲಾ ಹಿರೇಮಠ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.

 

 

Related Articles

Comments (0)

Leave a Comment