ಕರೆಂಟ್ ಬಿಲ್ ಕಟ್ಟಬೇಕಾ? ಎರಡು ದಿನ ಫೋನ್‌ಪೇ, ಗೂಗಲ್‌ಪೇ ವರ್ಕ್ ಆಗಲ್ಲ

ಬೆಂಗಳೂರು: ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯ (IPDS) ಎರಡನೇ ಹಂತದ ಸಾಫ್ಟ್‌ವೇರ್ ಆಧುನೀಕರಣ ಪ್ರಕ್ರಿಯೆ ಹಿನ್ನೆಲೆಯಲ್ಲಿ, ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ಎರಡು ದಿನಗಳ ಕಾಲ ಆನ್‌ಲೈನ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಸೆಪ್ಟೆಂಬರ್ 15ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 17ರ ಮಧ್ಯರಾತ್ರಿವರೆಗೆ ಈ ತಾಂತ್ರಿಕ ಬದಲಾವಣೆ ಕಾರ್ಯ ನಡೆಯಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ಹಳೆಯ ಟಿಆರ್‌ಎಂ (TRM) ತಂತ್ರಜ್ಞಾನದ ಬದಲಾಗಿ ಸುಧಾರಿತ ಹೊಸ ಐಟಿ ಅಪ್ಲಿಕೇಶನ್ ಅಳವಡಿಸಲಾಗುತ್ತಿದೆ. ಈ ಕಾರಣದಿಂದಾಗಿ ಗ್ರಾಹಕರ ದತ್ತಾಂಶಗಳ (ಡೇಟಾ) ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು, ಆನ್‌ಲೈನ್ ವ್ಯವಸ್ಥೆ ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವೆಲ್ಲಾ ಸೇವೆಗಳು ಸಿಗುವುದಿಲ್ಲ?

ಈ ಎರಡು ದಿನಗಳ ಅವಧಿಯಲ್ಲಿ ಡಿಜಿಟಲ್ ನೆಟ್‌ವರ್ಕ್ ಸ್ಥಗಿತಗೊಳ್ಳುವುದರಿಂದ ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಕೆ, ಮಾಲೀಕತ್ವದ ಹೆಸರು ವರ್ಗಾವಣೆ, ಲೋಡ್ ಹೆಚ್ಚಳದ ವಿನಂತಿ ಹಾಗೂ ಮುಖ್ಯವಾಗಿ ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡುವ ಸೌಲಭ್ಯಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ.

ಬಾಧಿತವಾಗಲಿರುವ 20 ಪಟ್ಟಣಗಳ ಪಟ್ಟಿ ಹೀಗಿದೆ:

ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಮತ್ತು ತುರುವೇಕೆರೆ.

ಹೊಸ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಲು ಹಳೆಯ ಸಾಫ್ಟ್‌ವೇರ್ ನಿಲ್ಲಿಸುವುದು ಅನಿವಾರ್ಯವಾಗಿದೆ. ಈ ಪಟ್ಟಣಗಳ ಗ್ರಾಹಕರು ಬಿಲ್ ಪಾವತಿ ಸೇರಿದಂತೆ ತುರ್ತು ಡಿಜಿಟಲ್ ಕೆಲಸಗಳನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಬೇಕು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

 

 

Related Articles

Comments (0)

Leave a Comment