‘ವಂದೇ ಮಾತರಂ’ ಗೀತೆ ಮೊಟಕು: ಸರ್ಕಾರಿ ಕಾರ್ಯಕ್ರಮದಿಂದ ಹೊರನಡೆದ ಬಿಜೆಪಿ ಶಾಸಕ ಚನ್ನಬಸಪ್ಪ

ಶಿವಮೊಗ್ಗ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಜಿಲ್ಲಾ ಮಟ್ಟದ ಸರ್ಕಾರಿ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ದೇಶಭಕ್ತಿ ಗೀತೆಯನ್ನು ಪೂರ್ಣ ಪ್ರಮಾಣದಲ್ಲಿ ಹಾಡದೆ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ ಎಂದು ಆರೋಪಿಸಿ ಶಿವಮೊಗ್ಗ ನಗರದ ಬಿಜೆಪಿ ಶಾಸಕ ಚನ್ನಬಸಪ್ಪ ಅವರು ಕಾರ್ಯಕ್ರಮದಿಂದ ಹೊರನಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿ, ಅರ್ಧಕ್ಕೆ ನಿಲ್ಲಿಸುವ ಮೂಲಕ ರಾಷ್ಟ್ರಭಕ್ತಿಯ ಪ್ರತೀಕವಾದ ಗೀತೆಗೆ ಅವಮಾನ ಮಾಡಲಾಗಿದೆ ಎಂದು ಶಾಸಕರು ದೂರಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ:

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಚನ್ನಬಸಪ್ಪ, “ರಾಷ್ಟ್ರಗೀತೆಯಷ್ಟೇ ಪಾವಿತ್ರ್ಯತೆ ಹೊಂದಿರುವ ‘ವಂದೇ ಮಾತರಂ’ ಗೀತೆಯನ್ನು ಸರ್ಕಾರಿ ಕಾರ್ಯಕ್ರಮದಲ್ಲೇ ಅರ್ಧಕ್ಕೆ ಮೊಟಕುಗೊಳಿಸಿರುವುದು ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣ ನೀತಿಗೆ ಹಿಡಿದ ಕನ್ನಡಿಯಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ವೀರ ಕ್ರಾಂತಿಕಾರಿಗಳಿಗೆ ಪ್ರೇರಣೆಯಾಗಿದ್ದ ಗೀತೆಯನ್ನು ಪೂರ್ಣಪ್ರಮಾಣದಲ್ಲಿ ಹಾಡಿಸಲು ಈ ಸರ್ಕಾರಕ್ಕೆ ನಡುಕವೇಕೆ?” ಎಂದು ಪ್ರಶ್ನಿಸಿದ್ದಾರೆ.

ಇಡೀ ಸಭಾಂಗಣದಲ್ಲಿ ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇರುವಾಗಲೇ ಇಂತಹ ಪ್ರಮಾದ ನಡೆದಿರುವುದು ಅಕ್ಷಮ್ಯ ಅಪರಾಧ. ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿಗಳ ಕಣ್ಣೆದುರೇ ಈ ಘಟನೆ ನಡೆದಿದ್ದರೂ ಆಡಳಿತ ಮೌನ ವಹಿಸಿರುವುದು ನಾಚಿಕೆಗೇಡು. ಭಾರತ ಮಾತೆಯನ್ನು ಕೀಳಾಗಿ ಕಾಣುವ ಇಂತಹ ಸರ್ಕಾರದ ಬೂಟಾಟಿಕೆಯ ಕಾರ್ಯಕ್ರಮದಲ್ಲಿ ಕೂರಲು ನನ್ನ ಸ್ವಾಭಿಮಾನ ಒಪ್ಪದ ಕಾರಣ ನಾನು ವೇದಿಕೆಯಿಂದ ಹೊರಬಂದಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತುಷ್ಟೀಕರಣದ ಅಮಲಿನಲ್ಲಿ ರಾಷ್ಟ್ರಪ್ರೇಮದ ಗೀತೆಗೆ ಅಪಮಾನ ಮಾಡಿರುವ ಜಿಲ್ಲಾಡಳಿತ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರವು ತಕ್ಷಣವೇ ಬಹಿರಂಗವಾಗಿ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.

 

Related Articles

Comments (0)

Leave a Comment