ಗುರು ಮಾರ್ಗದರ್ಶನ ಜೀವನಕ್ಕೆ ದಾರಿದೀಪ: ಶ್ರೀ ರಂಭಾಪುರಿ ಜಗದ್ಗುರುಗಳು

ವಿಜಯಪುರ: ವೀರಶೈವ ಧರ್ಮದಲ್ಲಿ ಗುರು ಕೇವಲ ವ್ಯಕ್ತಿಯಲ್ಲ, ಜ್ಞಾನ, ಸಂಸ್ಕಾರ ಮತ್ತು ಧರ್ಮದ ದಾರಿ ತೋರುವ ಮಾರ್ಗದರ್ಶಕ ಶಕ್ತಿ. ಗುರುವಿಲ್ಲದೆ ಗುರಿ ಕಾಣದು, ಗುರು ಮಾರ್ಗದರ್ಶನವೇ ಜೀವನಕ್ಕೆ ದಾರಿದೀಪ ಎಂದು ಬಾಳೇಹೊನ್ನೂರು ಶ್ರೀ ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.

ಅವರು ಸೋಮವಾರ ಬಬಲೇಶ್ವರ ಗುರುಪಾದೇಶ್ವರ ಬೃಹನ್ಮಠದ ಶ್ರೀ ಗುರು ಪಟ್ಟಾಧಿಕಾರ ಹಾಗೂ ಡಾ॥ ಮಹದೇವ ಶಿವಾಚಾರ್ಯರ ವಜ್ರ ಮಹೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಬದುಕಿಗೆ ಸರಿಯಾದ ದಿಕ್ಕು ತೋರಿಸಿ ಧರ್ಮದ ಆದರ್ಶ ತತ್ವ ಮೌಲ್ಯಗಳನ್ನು ತಿಳಿಸಿ ಆಚರಣೆಯ ಮೂಲಕ ಬದುಕುವ ಮಾರ್ಗವನ್ನು ಗುರು ತೋರಿಸುತ್ತಾನೆ. ಸಂಪ್ರದಾಯ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಸಮರ್ಪಕವಾಗಿ ಕೊಂಡೊಯ್ಯುವ ಗುರು ಪರಂಪರೆ ಅಗತ್ಯ. ಸಂಕಷ್ಟದ ಸಂದರ್ಭದಲ್ಲಿ ಶಿಷ್ಯನಿಗೆ ಆತ್ಮ ಸ್ಥೆರ್ಯ ಮತ್ತು ಸರಿಯಾದ ನಿರ್ಧಾರದ ದಾರಿ ತೋರಿಸುವುದು ಗುರುವಿನ ಧರ್ಮವಾಗಿದೆ. ವೈಯಕ್ತಿಕ ಹಿತಕ್ಕಿಂತ ಸಮಾಜ ಧರ್ಮ ಮತ್ತು ಲೋಕ ಕಲ್ಯಾಣದ ಚಿಂತನೆಗಳನ್ನು ಬೆಳೆಸುವಾತನೇ ಶ್ರೀ ಗುರುವಾಗಿದ್ದಾನೆ. ಬಬಲೇಶ್ವರ ಗುರುಪಾದೇಶ್ವರಮಠ ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿ ಈ ಭಾಗದಲ್ಲಿ ಧರ್ಮ ಸಂಸ್ಕೃತಿ ಮತ್ತು ಧಾರ್ಮಿಕ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಬಂದಿದೆ. ಡಾ|| ಮಹದೇವ ಶಿವಾಚಾರ್ಯ ಸ್ವಾಮಿಗಳ 75ನೇ ವರ್ಷದ ಅಮೃತ ಮಹೋತ್ಸವ-ತುಲಾಭಾರ ಹಾಗೂ ಅಭಿನಂದನಾ ಸಮಾರಂಭ ಹಮ್ಮಿಕೊಂಡಿರುವುದು ಸ್ತುತ್ಯ ಕಾರ್ಯವೆಂದು ಹರುಷ ವ್ಯಕ್ತಪಡಿಸಿದ ಜಗದ್ಗುರುಗಳು ನೂತನವಾಗಿ ಬಬಲೇಶ್ವರ ಬೃಹನ್ಮಠದ ಪಟ್ಟಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ದೇವರಿಗೆ ವಿದ್ಯುಕ್ತವಾಗಿ ಶ್ರೀ ಗುರು ಪಟ್ಟಾಧಿಕಾರ ನಡೆದಿರುವುದು ಸಂತೋಷದ ಸಂಗತಿ ಎಂದು ಹರುಷ ವ್ಯಕ್ತಪಡಿಸಿ ಉಭಯ ಶ್ರೀಗಳಿಗೆ ಶ್ರೀ ರಂಭಾಪುರಿ ಪೀಠದಿಂದ ರೇಷ್ಮೆ ಪೀತಾಂಬರ ಸ್ಮರಣಿಕೆ ಮತ್ತು ಫಲ ಪುಷ್ಪವಿತ್ತು ಶುಭ ಹಾರೈಸಿದರು.

ಸಾನ್ನಿಧ್ಯ ವಹಿಸಿದ ಶ್ರೀಮತ್ಕಾಶೀ ಡಾ.ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಗುರು ಪಟ್ಟಾಧಿಕಾರ ಕೇವಲ ಒಂದು ಹುದ್ದೆ ಸ್ವೀಕಾರದ ಕಾರ್ಯಕ್ರಮವಲ್ಲ. ಅದು ಗುರು ಪರಂಪರೆಯ ಜವಾಬ್ದಾರಿಯನ್ನು ಸ್ವೀಕರಿಸುವ ಪವಿತ್ರ ಕ್ಷಣ. ನಾನು ಧರ್ಮದ ಸೇವಕ ಸಮಾಜದ ಮಾರ್ಗದರ್ಶಕ ಮತ್ತು ಗುರು ಪರಂಪರೆಯ ಪ್ರತಿನಿಧಿ ಎಂಬ ಭಾವನೆಯಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಗುರು ಮಾರ್ಗದರ್ಶನದಲ್ಲಿ ವಿನಯ, ಜ್ಞಾನ, ತ್ಯಾಗ, ಸೇವೆ ಮತ್ತು ಧರ್ಮನಿಷ್ಠೆ ಬೆಳೆಸಿಕೊಂಡಾಗ ಮಾತ್ರ ಪಟ್ಟಾಧಿಕಾರದ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ. ಡಾ|| ಮಹದೇವ ಶಿವಾಚಾರ್ಯರು ನಮ್ಮೊಂದಿಗೆ ನಿಕಟ ಸಂಬಂಧವನ್ನು ಹೊಂದಿ ಧರ್ಮ ಸಂಸ್ಕೃತಿ ಸಂವರ್ಧಿಸುವ ನಿಟ್ಟಿನಲ್ಲಿ ಅವರು ಮಾಡಿದ ಕಾರ್ಯ ಮರೆಯಲಾಗದು. ಇಂದು ಅವರ ವಜ್ರ ಮಹೋತ್ಸವ-ತುಲಾಭಾರ ಮತ್ತು ಗ್ರಂಥ ಬಿಡುಗಡೆ ಮಾಡುತ್ತಿರುವುದು ತಮಗೆ ಸಂತೋಷ ತಂದಿದೆ. ನೂತನ ಪಟ್ಟಾಧ್ಯಕ್ಷರಾದ ಗುರುಶಾಂತದೇವ ಶಿವಾಚಾರ್ಯರು ತಮ್ಮ ಗುರು ಮಹದೇವ ಶಿವಾಚಾರ್ಯರ ದಾರಿಯಲ್ಲಿ ಮುನ್ನಡೆದು ಶ್ರೀ ಮಠವನ್ನು ಅಭಿವೃದ್ಧಿಪಡಿಸಲೆಂದು ಶುಭ ಹಾರೈಸಿದರು.

ಶ್ರೀ ಮಲ್ಲಿಕಾರ್ಜುನ ದೇವರಿಗೆ ಇಂದು ಶ್ರೀ ಗುರುಶಾಂತದೇವ ಶಿವಾಚಾರ್ಯ ಸ್ವಾಮಿಗಳು ಎಂಬ ನೂತನ ನಾಮಾಂಕಿತದಿಂದ ದಂಡ ಕಮಂಡಲ ಪಂಚಮುದ್ರ ಸಮೇತ ಶ್ರೀ ರಂಭಾಪುರಿ ಜಗದ್ಗುರುಗಳು ಹಾಗೂ ಶ್ರೀ ಕಾಶೀ ಜಗದ್ಗುರುಗಳು ರೇಷ್ಮೆ ಪೀತಾಂಬರ ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂ.ಬಿ.ಪಾಟೀಲ, ವಿಜಾಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಜಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಮ್ಮಣಿ. ಭಾವಿ ಬೆಟ್ಟಪ್ಪ ಮೊದಲಾದ ಗಣ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಸಲ್ಲಿಸಿದರು

ಜನ್ಮ ಅಮೃತ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಡಾ॥ ಮಹದೇವ ಶಿವಾಚಾರ್ಯರು ಮಾತನಾಡಿ ನಮ್ಮ ಜೀವನದ ಇತಿಹಾಸದಲ್ಲಿ ಮರೆಯಲಾರದ ಅಮೃತ ಘಳಿಗೆ. ಶ್ರೀ ರಂಭಾಪುರಿ ಜಗದ್ಗುರುಗಳು ಮತ್ತು ಶ್ರೀ ಕಾಶೀ ಜಗದ್ಗುರುಗಳು ದಯಮಾಡಿಸಿ ನಮ್ಮ ನಿಮ್ಮೆಲ್ಲರಿಗೂ ಆಶೀರ್ವದಿಸಿರುವುದು ಭಕ್ತ ಸಂಕುಲದ ಸೌಭಾಗ್ಯವೆಂದು ವರ್ಣಿಸಿದರು. ನೂತನ ಪಟ್ಟಾಧ್ಯಕ್ಷರಾದ ಗುರುಶಾಂತದೇವ ಶಿವಾಚಾರ್ಯರು ಮಾತನಾಡಿ ಪೂರ್ವ ಸುಕೃತದ ಫಲವಾಗಿ ನಮಗಿಂದು ಗುರು ಕಾರುಣ್ಯ ಪ್ರಾಪ್ತವಾಗಿದೆ. ವೀರಶೈವ ಧರ್ಮ ಗುರು ಪರಂಪರೆ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ. ಹಿರಿಯ ಡಾ|| ಮಹದೇವ ಶಿವಾಚಾರ್ಯರ ಆಶೀರ್ವಾದ ಹಾಗೂ ಶ್ರೀ ರಂಭಾಪುರಿ ಮತ್ತು ಶ್ರೀ ಕಾಶೀ ಜಗದ್ಗುರುಗಳ ಆಶೀರ್ವಾದ ಶ್ರೀರಕ್ಷೆ ಅನವರತ ನಮ್ಮೆಲ್ಲ ಭಕ್ತ ಮಂಡಳಿಯ ಮೇಲೆ ಇರಲೆಂದು ಬಯಸಿದರು.

ಶ್ರೀ ಗುರು ಪಟ್ಟಾಧಿಕಾರ ಸಮಾರಂಭದಲ್ಲಿ ಹಲವಾರು ಮಠಾಧೀಶರು, ಗಣ್ಯರು ಮತ್ತು ರಾಜಕೀಯ ಧುರೀಣರು ಪಾಲ್ಗೊಂಡಿದ್ದರು.

Related Articles

Comments (0)

Leave a Comment