ಗ್ಯಾರಂಟಿ ತಲುಪಿಸಲು ಸರ್ಕಾರಿ ಮಾಸ್ಟರ್ ಪ್ಲಾನ್: ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ 6 ಸದಸ್ಯರ ಹೊಸ ಸಮಿತಿ ರಚನೆ
- by Suddi Team
- September 16, 2026
- 7 Views
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಯಾವುದೇ ಲೋಪವಿಲ್ಲದೆ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ತಳಮಟ್ಟದಲ್ಲಿ ಮೇಲ್ವಿಚಾರಣೆ ನಡೆಸಲು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದ ‘ಗ್ಯಾರಂಟಿ ಸಮಿತಿ’ಗಳನ್ನು ರಚಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಬಿಬಿಎಂಪಿ ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರಚಿಸಲಾಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ವ್ಯವಸ್ಥೆಯನ್ನು ಇನ್ನು ಹೆಚ್ವು ವಿಕೇಂದ್ರೀಕರಣಗೊಳಿಸಲು, ಮುಖ್ಯಮಂತ್ರಿಗಳ ಟಿಪ್ಪಣಿ ಆದೇಶದ ಅನ್ವಯ ಈ ಹೊಸ ತಳಮಟ್ಟದ ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.
6 ಸದಸ್ಯರ ಸಮಿತಿಯ ರಚನೆ ಹೀಗಿರಲಿದೆ:
ರಾಜ್ಯಾದ್ಯಂತ ಇರುವ ಪ್ರತಿ ಗ್ರಾಮ ಪಂಚಾಯಿತಿ ಗ್ಯಾರಂಟಿ ಸಮಿತಿ ಹಾಗೂ ನಗರ ಪ್ರದೇಶದ ಪ್ರತಿ ವಾರ್ಡ್ ಗ್ಯಾರಂಟಿ ಸಮಿತಿಯು ಒಟ್ಟು 06 ಸದಸ್ಯರನ್ನು ಒಳಗೊಂಡಿರಲಿದ್ದು, ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST): 01 ಸದಸ್ಯರು
ಅಲ್ಪಸಂಖ್ಯಾತರು: 01 ಸದಸ್ಯರು (ಒಂದು ವೇಳೆ ಲಭ್ಯವಿಲ್ಲದಿದ್ದಲ್ಲಿ ಸಾಮಾನ್ಯ ವರ್ಗಕ್ಕೆ ಅವಕಾಶ)
ಮಹಿಳಾ ಮೀಸಲು: 02 ಸದಸ್ಯರು
ಇತರ ಹಿಂದುಳಿದ ವರ್ಗ (OBC): 01 ಸದಸ್ಯರು
ಸಾಮಾನ್ಯ ವರ್ಗ: 01 ಸದಸ್ಯರು
ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಅಡಿ ಕಾರ್ಯ ನಿರ್ವಹಣೆ:
ಈ ನೂತನ ಸಮಿತಿಗಳು ನೇರವಾಗಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುವಲ್ಲಿ ಸ್ಥಳೀಯವಾಗಿ ಫಲಾನುಭವಿಗಳಿಗೆ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವುದು, ಯೋಜನೆಗಳ ಪ್ರಗತಿ ಪರಿಶೀಲಿಸುವುದು ಮತ್ತು ಅರ್ಹರಿಗೆ ಯೋಜನೆ ತಲುಪುವಂತೆ ನೋಡಿಕೊಳ್ಳುವುದು ಈ ಸಮಿತಿಯ ಪ್ರಮುಖ ಜವಾಬ್ದಾರಿಯಾಗಿದೆ.
ಸರ್ಕಾರದ ಈ ವಿಕೇಂದ್ರೀಕೃತ ನಿರ್ಧಾರದಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬೀಳಲಿದ್ದು, ಗ್ಯಾರಂಟಿ ಯೋಜನೆಗಳ ಪಾರದರ್ಶಕತೆ ಹೆಚ್ಚಾಗಲಿದೆ ಎಂದು ಆಡಳಿತ ವರ್ಗದ ಮೂಲಗಳು ತಿಳಿಸಿವೆ.
Related Articles
Thank you for your comment. It is awaiting moderation.


Comments (0)