ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ: ಗ್ರೇಡ್ ಬದಲಿಗೆ ಅಂಕ ನೀಡಲು ಹೈಕೋರ್ಟ್ ಆದೇಶ
- by Suddi Team
- April 16, 2026
- 6 Views
ವರದಿ:ಜಗನ್ ರಮೇಶ್
ಬೆಂಗಳೂರು: ಪ್ರಸಕ್ತ ಸಾಲಿನ (2025-26) ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದ್ದು, ವಿದ್ಯಾರ್ಥಿಗಳಿಗೆ ಅಂಕಗಳನ್ನೇ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.
ತೃತೀಯ ಭಾಷಾ ವಿಷಯಗಳಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ್, ಉಡುಪಿಯ ಅನುಷಾ ಮತ್ತು ಸುಧಿಕ್ಷಾ ಎಂಬ ವಿದ್ಯಾರ್ಥಿನಿಯರು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠವು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಹತ್ವಸ ಆದೇಶ ಹೊರಡಿಸಿದೆ.
ವಾದ-ಪ್ರತಿವಾದ:
ಅರ್ಜಿದಾರರ ಪರ ವಕೀಲ ಆರ್.ವಿ. ನಾಯ್ಕ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿ, “ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಈ ಮೊದಲು ಹೊರಡಿಸಿದ್ದ ಸುತ್ತೋಲೆಯಲ್ಲಿ ತೃತೀಯ ಭಾಷೆಗೆ 100 ಅಂಕಗಳನ್ನು (80 ಲಿಖಿತ + 20 ಆಂತರಿಕ) ನಿಗದಿಪಡಿಸಲಾಗಿತ್ತು. ಆದರೆ, ಪರೀಕ್ಷಾ ಸಮಯದಲ್ಲಿ ಸರ್ಕಾರ ಇದ್ದಕ್ಕಿದ್ದಂತೆ ಗ್ರೇಡ್ ನೀಡುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ” ಎಂದು ಆಕ್ಷೇಪಿಸಿದರು.
ಉದ್ಯೋಗದ ಮೇಲೆ ಪರಿಣಾಮ:
ಯುಪಿಎಸ್‌ಸಿ ಹಾಗೂ ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇವಲ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ರಾಜ್ಯ ಸರ್ಕಾರ ಗ್ರೇಡಿಂಗ್ ಪದ್ಧತಿ ಜಾರಿಗೆ ತಂದರೆ, ಭವಿಷ್ಯದಲ್ಲಿ ರಾಜ್ಯದ ವಿದ್ಯಾರ್ಥಿಗಳು ಉದ್ಯೋಗದ ಸ್ಪರ್ಧೆಯಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂಬ ಆತಂಕವನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು.
ನ್ಯಾಯಾಲಯದ ಪ್ರಶ್ನೆ ಮತ್ತು ಸರ್ಕಾರದ ಉತ್ತರ:
ವಿಚಾರಣೆಯ ವೇಳೆ ನ್ಯಾಯಪೀಠವು, “ತೃತೀಯ ಭಾಷೆಗಳಿಗೆ ಗ್ರೇಡಿಂಗ್ ನೀಡುವ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆಯೇ?” ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು, “ಸದ್ಯಕ್ಕೆ ಈ ಬಗ್ಗೆ ಕರಡು ಅಧಿಸೂಚನೆಯನ್ನು ಮಾತ್ರ ಸಿದ್ಧಪಡಿಸಲಾಗಿದೆ. ಪೂರ್ಣ ಮಾಹಿತಿ ಪಡೆದು ತಿಳಿಸಲಾಗುವುದು,” ಎಂದರು.
ಎಲ್ಲಾ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಚಾಲ್ತಿಯಲ್ಲಿರುವ ನಿಯಮಗಳಂತೆಯೇ ಈ ಬಾರಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಬೇಕು ಎಂದು ಸ್ಪಷ್ಟಪಡಿಸಿ, ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿತು.
Related Articles
Thank you for your comment. It is awaiting moderation.


Comments (0)