ಚೌಡಯ್ಯ ಸ್ಮಾರಕ ಭವನದಲ್ಲಿ ಏ. 17ಕ್ಕೆ ‘ತತ್ವ’ ಭಕ್ತಿ ಫ್ಯೂಷನ್ ಸಂಗೀತ ಸಂಜೆ

ಬೆಂಗಳೂರು: ರಾಜಧಾನಿಯ ಕಲಾಭಿಮಾನಿಗಳಿಗಾಗಿ ಪರಮ್ ಫೌಂಡೇಶನ್ ವತಿಯಿಂದ ‘ತತ್ವ’ ಎಂಬ ವಿಶಿಷ್ಟ ಭಕ್ತಿ ಫ್ಯೂಷನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ಐತಿಹಾಸಿಕ ಚೌಡಯ್ಯ ಸ್ಮಾರಕ ಭವನದಲ್ಲಿ ಏಪ್ರಿಲ್ 17ರಂದು ಸಂಜೆ 6.15ಕ್ಕೆ ಈ ಗಾಯನ ಸುಧೆ ಹರಿಯಲಿದೆ.

ನಾದದ ಲಯ-ಆನಂದದ ಪಯಣ:

‘ಎ ಜರ್ನಿ ಫ್ರಮ್ ಬ್ರೀತ್ ಟು ಬ್ಲಿಸ್’ (A Journey from Breath to Bliss) ಎಂಬ ವಿಶಿಷ್ಟ ಪರಿಕಲ್ಪನೆಯಡಿ ಈ ಕಾರ್ಯಕ್ರಮ ಮೂಡಿಬರುತ್ತಿದೆ. ಗಾಯಕಿ ಅರುಂಧತಿ ವಸಿಷ್ಠ ಹಾಗೂ ವರುಣ್ ಪ್ರದೀಪ್ ತಂಡವು ಈ ಸಂಗೀತ ಸಂಜೆಯನ್ನು ನಡೆಸಿಕೊಡಲಿದ್ದಾರೆ. ಭಾರತೀಯ ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ಇಂದಿನ ಸಮಕಾಲೀನ ಶೈಲಿಗೆ ತಕ್ಕಂತೆ ಪ್ರಸ್ತುತಪಡಿಸುವುದು ಈ ಶೋನ ವಿಶೇಷತೆ.

ಕಲಾವಿದರ ದಂಡು:

ಕಾರ್ಯಕ್ರಮದಲ್ಲಿ ವೇದಘೋಷಗಳು, ಶಾಸ್ತ್ರೀಯ ಮತ್ತು ಜನಪದ ಶೈಲಿಯ ಗಾಯನವನ್ನು ಆಧುನಿಕ ವಾದ್ಯಗಳೊಂದಿಗೆ ಸಮ್ಮಿಲನಗೊಳಿಸಲಾಗಿದೆ. ಪ್ರಸಿದ್ಧ ಕಲಾವಿದರಾದ ಪ್ರವೀಣ್ ಡಿ. ರಾವ್ ಹಾಗೂ ಮಂಜುನಾಥ್ ಸತ್ಯಶೀಲ್ ಅವರ ಉಪಸ್ಥಿತಿಯೊಂದಿಗೆ, ಉಮೇಶ್ ವಾರ್ಭುವನ್ ಮತ್ತು ಪ್ರದ್ಯುಮ್ನ ಸೊರಬ ಸೇರಿದಂತೆ 15ಕ್ಕೂ ಹೆಚ್ಚು ಪರಿಣತ ವಾದ್ಯ ಕಲಾವಿದರು ಸಾಥ್ ನೀಡಲಿದ್ದಾರೆ. ಸುಮಾರು 8 ಮಂದಿ ಗಾಯಕರ ತಂಡವೂ ಈ ಸಂಗೀತ ವೈಭವಕ್ಕೆ ಧ್ವನಿಯಾಗಲಿದೆ.

ಏನಿದು ಪರಂಪರಾ?

‘ಪರಮ್ ಕಲ್ಚರ್’ ಸಂಸ್ಥೆಯು ‘ಪರಂಪರಾ’ ಸರಣಿಯ ಮೂಲಕ ಈಗಾಗಲೇ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದೆ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭರತನಾಟ್ಯ ಹಾಗೂ ಮಲ್ಟಿಮೀಡಿಯಾ ಪ್ರೊಡಕ್ಷನ್‌ಗಳ ಮೂಲಕ ಕಲಾ ಲೋಕದಲ್ಲಿ ಗುರುತಿಸಿಕೊಂಡಿರುವ ಈ ಸಂಸ್ಥೆ, ಇದೀಗ ‘ತತ್ವ’ ಮೂಲಕ ಪ್ರೇಕ್ಷಕರಿಗೆ ಆಧ್ಯಾತ್ಮಿಕ ಅನುಭವ ನೀಡಲು ಮುಂದಾಗಿದೆ.

ಮನಸ್ಸಿಗೆ ಶಾಂತಿ ಮತ್ತು ಚೈತನ್ಯ ನೀಡುವ ಈ ಕಲಾ ಸಂಗಮಕ್ಕೆ ಸಂಗೀತ ಪ್ರಿಯರಿಗೆ ಮುಕ್ತ ಆಹ್ವಾನವಿದೆ.

 

Related Articles

Comments (0)

Leave a Comment