ದಸರಾ ವಿವಾದ: ರಾಜಮಾತೆ ಪ್ರಮೋದಾದೇವಿ ಆಕ್ಷೇಪಣೆಗೆ ಸಚಿವ ಯತೀಂದ್ರ ಖಡಕ್ ತಿರುಗೇಟು

ಮೈಸೂರು: ದಸರಾ ಮಹೋತ್ಸವದ ವ್ಯವಸ್ಥೆಗಳ ಬಗ್ಗೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಪ್ರಕಟಿಸಿದ್ದ ತೀವ್ರ ಅಸಮಾಧಾನಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮೈಸೂರು ಅರಮನೆಯು ಸಾರ್ವಜನಿಕ ಆಸ್ತಿಯಾಗಿದ್ದು, ಅಲ್ಲಿ ರಾಜಮನೆತನಕ್ಕೆ ಕೇವಲ ನಿವಾಸದ ಹಕ್ಕನ್ನು ಮಾತ್ರ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅರಮನೆ ಸರ್ಕಾರದ ಸ್ವತ್ತು

ವಾಸವಿರುವ ಭಾಗವನ್ನು ಹೊರತುಪಡಿಸಿ, ಇಡೀ ಅರಮನೆ ಆವರಣ ಮತ್ತು ಅರಮನೆ ಮಂಡಳಿಯು ರಾಜ್ಯ ಸರ್ಕಾರದ ಆಡಳಿತಕ್ಕೆ ಒಳಪಡುತ್ತದೆ. ರಾಜಮನೆತನದ ಮೇಲಿನ ಗೌರವದ ಸಂಕೇತವಾಗಿ ಅವರಿಗೆ ಅಲ್ಲಿ ನೆಲೆಸಲು ಅವಕಾಶ ನೀಡಲಾಗಿದೆ ಎಂದು ಯತೀಂದ್ರ ಹೇಳಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇವಲ 7 ದಿನಗಳಿಗೆ ಸೀಮಿತಗೊಳಿಸಬೇಕು ಮತ್ತು ಜಂಬೂ ಸವಾರಿಯ ದಿನವನ್ನು ಬದಲಾಯಿಸಬೇಕು ಎಂಬ ರಾಜಮಾತೆಯವರ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. 1972ರಿಂದಲೂ ಸರ್ಕಾರವೇ ಮುಂಚೂಣಿಯಲ್ಲಿ ನಿಂತು ನಾಡಹಬ್ಬವನ್ನು ಅಧಿಕೃತವಾಗಿ ನಡೆಸುತ್ತಿದ್ದು, ಅದಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ ಎಂದು ನೆನಪಿಸಿದ್ದಾರೆ.

ಆನೆ ಆಯ್ಕೆಗೆ ಕಾನೂನು ಬಾಧ್ಯತೆಯಿಲ್ಲ

ಚಿನ್ನದ ಅಂಬಾರಿಯನ್ನು ಹೊರಲಿರುವ ಆನೆಯ ಆಯ್ಕೆಯ ಪ್ರಕ್ರಿಯೆಯನ್ನು ರಾಜಮನೆತನಕ್ಕೆ ಮೊದಲೇ ತಿಳಿಸಬೇಕಾದ ಯಾವುದೇ ಕಾಯ್ದೆ ಅಥವಾ ಕಾನೂನು ಬಾಧ್ಯತೆ ಸರ್ಕಾರಕ್ಕಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಎದುರಾದ ತಾಂತ್ರಿಕ ಗೊಂದಲಗಳಿಂದಾಗಿ ಈ ಬಾರಿ ಆನೆಯ ಅಂತಿಮ ತೀರ್ಮಾನ ಕೊಂಚ ವಿಳಂಬವಾಗಿತ್ತು ಅಷ್ಟೆ ಎಂದಿದ್ದಾರೆ. ರಾಜಮನೆತನಕ್ಕೆ ಇರುವ ಕುಂದುಕೊರತೆಗಳನ್ನು ಚರ್ಚೆಯ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದ್ದು, ಪ್ರಮೋದಾ ದೇವಿಯವರು ನೇರವಾಗಿ ಮಾಧ್ಯಮಗಳ ಮುಂದೆ ಹೋಗುವ ಬದಲು ಸರ್ಕಾರದೊಂದಿಗೆ ಆಕ್ಷೇಪಣೆಗಳನ್ನು ಹಂಚಿಕೊಳ್ಳಬೇಕಿತ್ತು ಎಂದಿದ್ದಾರೆ. ಸದ್ಯದಲ್ಲೇ ಸರ್ಕಾರದಿಂದ ಅಧಿಕೃತ ದೂತರನ್ನು ಕಳುಹಿಸಿ ಅಥವಾ ಲಿಖಿತ ಪತ್ರದ ಮೂಲಕ ಅವರ ಪ್ರಶ್ನೆಗಳಿಗೆ ಸೂಕ್ತ ಜವಾಬು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ

 

Related Articles

Comments (0)

Leave a Comment