ರಾಜ್ಯದಲ್ಲಿ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ, ಹಸಿರು ಪಟಾಕಿಗೆ ಮಾತ್ರ ಗ್ರೀನ್ ಸಿಗ್ನಲ್!
- by Suddi Team
- October 30, 2026
- 13 Views
ಬೆಂಗಳೂರು: ರಾಜ್ಯಾದ್ಯಂತ ಈ ಬಾರಿಯ ದೀಪಾವಳಿ ಹಬ್ಬದ ಆಚರಣೆಗೆ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ರಾತ್ರಿ 8:00 ಗಂಟೆಯಿಂದ 10:00 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದ್ದು, ಉಳಿದ ಸಮಯದಲ್ಲಿ ಪಟಾಕಿ ಸ್ಫೋಟಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಕಟ್ಟುನಿಟ್ಟಿನ ಅಧಿಕೃತ ಆದೇಶ ಹೊರಡಿಸಿದ್ದಾರೆ.
ನವೆಂಬರ್ 8 ರಿಂದ 10 ರವರೆಗೆ ನಿಯಮ ಅನ್ವಯ:
ರಾಜ್ಯದಲ್ಲಿ 2026ರ ನವೆಂಬರ್ 08 ರಿಂದ ನವೆಂಬರ್ 10 ರವರೆಗೆ ದೀಪಾವಳಿ ಹಬ್ಬದ ದಿನಗಳಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಶಬ್ದ ಮತ್ತು ವಾಯು ಮಾಲಿನ್ಯ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರದ ಪ್ರಮುಖ ಮಾರ್ಗಸೂಚಿಗಳು ಇಲ್ಲಿವೆ:
ಹಸಿರು ಪಟಾಕಿಗೆ ಮಾತ್ರ ಅನುಮತಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇವಲ ‘ಹಸಿರು ಪಟಾಕಿಗಳನ್ನು’ (Green Crackers) ಮಾತ್ರ ಬಳಸಲು ಅನುಮತಿ ಇದೆ. ಎಲ್ಲಾ ಹಸಿರು ಪಟಾಕಿಗಳ ಪ್ಯಾಕೆಟ್ ಮೇಲೆ ಕಡ್ಡಾಯವಾಗಿ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂ.ಆರ್.ಕೋಡ್ (QR Code) ಇರಲಿದ್ದು, ಈ ಗುರುತಿಲ್ಲದ ಪಟಾಕಿಗಳನ್ನು ನಿಷೇಧಿತ ಪಟಾಕಿ ಎಂದು ಪರಿಗಣಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಗೋದಾಮುಗಳ ಮೇಲೆ ದಾಳಿ – ಕ್ರಿಮಿನಲ್ ಕೇಸ್: ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳು, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಪರಿಸರ ಅಧಿಕಾರಿಗಳನ್ನೊಳಗೊಂಡ ವಿಶೇಷ ಕಾರ್ಯಪಡೆ ರಚಿಸಲಾಗುತ್ತದೆ. ಪಟಾಕಿ ಗೋದಾಮುಗಳನ್ನು ಪರಿಶೀಲಿಸಿ ನಿಷೇಧಿತ ಪಟಾಕಿ ಪತ್ತೆಯಾದರೆ ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಂಡು, ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಆದೇಶಿಸಲಾಗಿದೆ.
ಗಡಿಗಳಲ್ಲಿ ಬಿಗಿ ತಪಾಸಣೆ: ಹೊರ ರಾಜ್ಯಗಳಿಂದ ಅನಧಿಕೃತವಾಗಿ ನಿಷೇಧಿತ ಪಟಾಕಿಗಳನ್ನು ಸಾಗಾಟ ಮಾಡುವುದನ್ನು ತಡೆಯಲು ವಾಣಿಜ್ಯ ತೆರಿಗೆ ಮತ್ತು ಸಾರಿಗೆ ಇಲಾಖೆ ವತಿಯಿಂದ ರಾಜ್ಯದ ಗಡಿ ತನಿಖಾ ಠಾಣೆಗಳಲ್ಲಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚನೆ ನೀಡಲಾಗಿದೆ.
ಸೈಲೆನ್ಸ್ ಝೋನ್ಗಳಲ್ಲಿ ನಿಷೇಧ: ಯಾವುದೇ ಸ್ಥಳೀಯ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಪಟಾಕಿ ಸಿಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಸಮಯ ಪಾಲನೆ ಕಡ್ಡಾಯ: ಉಚ್ಚ ನ್ಯಾಯಾಲಯದ ಆದೇಶದಂತೆ ರಾತ್ರಿ 8 ರಿಂದ 10 ಗಂಟೆಯ 2 ಗಂಟೆಗಳ ಅವಧಿಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದ್ದು, ಸಾರ್ವಜನಿಕರು ನಿಯಮ ಮೀರಿ ಪಟಾಕಿ ಸಿಡಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಮೆಟ್ರೋ, ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ಧ್ವನಿವರ್ಧಕ ಹಾಗೂ ಕರಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಲಾಖೆ ಮುಂದಾಗಿದೆ. ಸಾರ್ವಜನಿಕರು ಮಕ್ಕಳು, ವೃದ್ಧರು ಹಾಗೂ ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕಾಗಿ ಸಚಿವರು ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.


Comments (0)