ದೀಪಾವಳಿ ಹಬ್ಬ: ಕೆಎಸ್ಆರ್ಟಿಸಿಯಿಂದ 2,600 ಹೆಚ್ಚುವರಿ ವಿಶೇಷ ಬಸ್ಗಳ ಸಂಚಾರ!
- by Suddi Team
- October 31, 2026
- 7 Views
ಬೆಂಗಳೂರು: ಮುಂಬರುವ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಭರ್ಜರಿ ವ್ಯವಸ್ಥೆ ಮಾಡಿದೆ. ಹಬ್ಬದ ದಿನಗಳಲ್ಲಿ ಊರುಗಳಿಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಒಟ್ಟು 2,600 ಹೆಚ್ಚುವರಿ ವಿಶೇಷ ಬಸ್ಗಳ ಕಾರ್ಯಾಚರಣೆ ನಡೆಸಲು ನಿಗಮ ನಿರ್ಧರಿಸಿದೆ.
ನವೆಂಬರ್ 8 ರಂದು ನರಕ ಚತುರ್ದಶಿ ಹಾಗೂ ನವೆಂಬರ್ 10 ರಂದು ಬಲಿಪಾಡ್ಯಮಿ ಆಚರಣೆ ಇರಲಿದ್ದು, ನವೆಂಬರ್ 7 ಮತ್ತು 8 ರಾರಾಂತ (ವೀಕೆಂಡ್) ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗಾಗಿ ದಿನಾಂಕ 06.11.2026 ರಿಂದ 08.11.2026 ರವರೆಗೆ ಬೆಂಗಳೂರಿನಿಂದ ವಿವಿಧ ಊರುಗಳಿಗೆ ವಿಶೇಷ ಬಸ್ಗಳು ಸಂಚರಿಸಲಿವೆ. ತದನಂತರ ರಾಜ್ಯದ ಹಾಗೂ ಹೊರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಮರಳಲು ದಿನಾಂಕ 10.11.2026 ಮತ್ತು 11.11.2026 ರಂದು ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಯಾವ ಬಸ್ ನಿಲ್ದಾಣದಿಂದ ಎಲ್ಲೆಲ್ಲಿಗೆ ಸಂಚಾರ?
ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರಿನ ವಿವಿಧ ಪ್ರಮುಖ ನಿಲ್ದಾಣಗಳಿಂದ ಬಸ್ಗಳ ಕಾರ್ಯಾಚರಣೆ ನಿಗದಿಪಡಿಸಲಾಗಿದೆ:
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್): ಇಲ್ಲಿಂದ ಉಡುಪಿ, ಕುಂದಾಪುರ, ಪುತ್ತೂರು, ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ದಾವಣಗೆರೆ, ಗೋಕರ್ಣ, ಹಾಸನ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಸಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಹಾಗೂ ಹೊರರಾಜ್ಯಗಳಾದ ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್ಗಳು ಹೊರಡಲಿವೆ.
ಮೈಸೂರು ರಸ್ತೆ ಬಸ್ ನಿಲ್ದಾಣ: ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೆ ಬಸ್ಗಳು ಸಂಚರಿಸಲಿವೆ.
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ: ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೋಯಿಕ್ಕೋಡ್ ಮುಂತಾದ ಸ್ಥಳಗಳಿಗೆ ಹೋಗುವ ಬಸ್ಗಳು ಇಲ್ಲಿಂದ ಹೊರಡಲಿವೆ.
ಟಿಕೆಟ್ ಬುಕಿಂಗ್ ಮೇಲಿದೆ ವಿಶೇಷ ರಿಯಾಯಿತಿ:
ಬುಕಿಂಗ್ ವೆಬ್ಸೈಟ್: ಸಾರ್ವಜನಿಕರು ಆನ್ಲೈನ್ ಮೂಲಕ www.ksrtc.karnataka.gov.in ವೆಬ್ಸೈಟ್ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದು.
ಗ್ರೂಪ್ ರಿಯಾಯಿತಿ: ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇಕಡಾ 5 ರಷ್ಟು ರಿಯಾಯಿತಿ ನೀಡಲಾಗುವುದು.
ರಾಂಡ್ ಟ್ರಿಪ್ ರಿಯಾಯಿತಿ: ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ಗಳನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣದ ದರದಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ಸಿಗಲಿದೆ.
ಹೊರರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ಪುದುಚೇರಿಯಲ್ಲಿರುವ ಪ್ರಮುಖ ನಗರಗಳಲ್ಲೂ ನಿಗಮದ ಮುಂಗಡ ಆಸನ ಕಾಯ್ದಿರಿಸುವ ಕೌಂಟರ್ಗಳು ಲಭ್ಯವಿವೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ತಮ್ಮ ಟಿಕೆಟ್ಗಳಲ್ಲಿ ನಮೂದಿಸಲಾಗಿರುವ ಬಸ್ ನಿಲ್ದಾಣ ಅಥವಾ ಪಿಕ್ಅಪ್ ಪಾಯಿಂಟ್ ಹೆಸರನ್ನು ಗಮನಿಸುವಂತೆ ಕರಾರಸಾ ನಿಗಮ ಪ್ರಕಟಣೆಯಲ್ಲಿ ಕೋರಿದೆ.
Related Articles
Thank you for your comment. It is awaiting moderation.


Comments (0)