ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಇಂದಿನಿಂದ ಉಚಿತ KSRTC ಬಸ್ ಪಾಸ್ ವಿತರಣೆ ಆರಂಭ
- by Suddi Team
- June 12, 2026
- 8 Views
ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿ ನೀಡಿದೆ. 2026–27ನೇ ಶೈಕ್ಷಣಿಕ ಸಾಲಿನ ಉಚಿತ ವಿದ್ಯಾರ್ಥಿ ಬಸ್ ಪಾಸ್‌ಗಳ ವಿತರಣೆಯು ಜೂನ್ 12 ರಿಂದ ಅಧಿಕೃತವಾಗಿ ಆರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಾದ KSRTC, BMTC, NWKRTC ಮತ್ತು KKRTC ಬಸ್‌ಗಳಲ್ಲಿ ಪ್ರಯಾಣಿಸುವ ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರ ಅನುಮೋದನೆ ನೀಡಿದೆ.
ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ
ಅರ್ಹ ವಿದ್ಯಾರ್ಥಿಗಳು ಸರ್ಕಾರದ ಇ-ಆಡಳಿತ ಇಲಾಖೆಯ ‘ಸೇವಾಸಿಂಧು’ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ಲಿಂಕ್: https://sevasindhuservices.karnataka.gov.in/buspassservices/
ಪಾಸ್ ವಿತರಣೆಗಾಗಿ KSRTC ವ್ಯಾಪ್ತಿಯಲ್ಲಿ ಒಟ್ಟು 123 ಕೌಂಟರ್‌ಗಳನ್ನು ತೆರೆಯಲಾಗಿದ್ದು, ಇದರ ಸಂಪೂರ್ಣ ವಿವರಗಳನ್ನು https://ksrtc.karnataka.gov.in/student pass ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದು.
ಗಡಿಭಾಗದ ವಿದ್ಯಾರ್ಥಿಗಳಿಗೂ ಸೌಲಭ್ಯ ಅನ್ವಯ
ರಾಜ್ಯದಲ್ಲಿ ವಾಸವಿದ್ದು ನೆರೆರಾಜ್ಯಗಳ ಶಾಲಾ-ಕಾಲೇಜುಗಳಿಗೆ ಹೋಗುವ ಹಾಗೂ ನೆರೆರಾಜ್ಯಗಳ ಗಡಿಭಾಗದಲ್ಲಿ ವಾಸವಿದ್ದು ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಈ ಉಚಿತ ಬಸ್ ಪಾಸ್ ಸೌಲಭ್ಯ ಅನ್ವಯವಾಗಲಿದೆ. ಇನ್ನುಳಿದಂತೆ ಶೈಕ್ಷಣಿಕ ಅರ್ಹತೆ, ದೂರದ ಮಿತಿ ಹಾಗೂ ಪಾಸ್ ಅವಧಿಯ ನಿಯಮಾವಳಿಗಳು ಮೊದಲಿನಂತೆಯೇ ಮುಂದುವರಿಯಲಿವೆ.
ಈಗಾಗಲೇ ಹಣ ಪಾವತಿಸಿದ್ದರೆ 15 ದಿನಗಳಲ್ಲಿ ಮರುಪಾವತಿ!
ಪ್ರಸಕ್ತ ಶೈಕ್ಷಣಿಕ ಸಾಲಿಗೆ (2026-27) ಈಗಾಗಲೇ ಹಣ ಪಾವತಿಸಿ ಬಸ್ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೆ ನಿಗಮವು ಬಿಗ್ ರಿಲೀಫ್ ನೀಡಿದೆ. ವಿದ್ಯಾರ್ಥಿಗಳು ಪಾವತಿಸಿರುವ ಸಂಪೂರ್ಣ ಶುಲ್ಕದ ಮೊತ್ತವನ್ನು ಮುಂದಿನ 15 ದಿನಗಳ ಒಳಗಾಗಿ ಮರುಪಾವತಿ (Refund) ಮಾಡಲಾಗುವುದು ಎಂದು ನಿಗಮ ತಿಳಿಸಿದೆ. ಈ ಮರುಪಾವತಿ ಪ್ರಕ್ರಿಯೆಯ ಬಗ್ಗೆ ಶೀಘ್ರದಲ್ಲೇ ಪ್ರತ್ಯೇಕ ಪ್ರಕಟಣೆ ಹೊರಡಿಸಲಾಗುವುದು ಎಂದಿದೆ.
Related Articles
Thank you for your comment. It is awaiting moderation.


Comments (0)