ಶಿವಮೊಗ್ಗ ದಸರಾ ಆನೆ ಅವಘಡ: ಮುಂದಿನ ಜಂಬೂಸವಾರಿಗೂ ಮುನ್ನ ಆನೆಗಳಿಗೆ 20ರಿಂದ 30 ದಿನ ಕಡ್ಡಾಯ ತಾಲೀಮು ನಡೆಸಲು ಸಚಿವ ರಾಮಲಿಂಗಾ ರೆಡ್ಡಿ ಸೂಚನೆ
- by Suddi Team
- October 21, 2026
- 11 Views
ಬೆಂಗಳೂರು: ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಬೆದರಿ ಓಡಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಅವರು, ಮುಂದಿನ ವರ್ಷದಿಂದ ಜಂಬೂಸವಾರಿಗೂ ಮುನ್ನ ಆನೆಗಳಿಗೆ ಕನಿಷ್ಠ 20ರಿಂದ 30 ದಿನಗಳ ಕಾಲ ಕಡ್ಡಾಯ ತಾಲೀಮು ನಡೆಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ತುರ್ತು ದೂರವಾಣಿ ಸಂಭಾಷಣೆ
ಶಿವಮೊಗ್ಗ ಜಂಬೂಸವಾರಿಯಲ್ಲಿ ನಡೆದ ಅಚಾತುರ್ಯದ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಅವರು ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಗ್ರ ಮಾಹಿತಿ ಪಡೆದರು. ಆನೆ ಬೆದರಲು ಕಾರಣವೇನು, ಮುಂಜಾಗ್ರತಾ ಕ್ರಮಗಳಲ್ಲಾದ ಲೋಪಗಳೇನು ಮತ್ತು ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾಗೂ ವಾಹನಗಳಿಗೆ ಆಗಿರುವ ಹಾನಿಯ ಬಗ್ಗೆ ವಿವರಗಳನ್ನು ಪಡೆದುಕೊಂಡರು.
ಕಡ್ಡಾಯ ತಾಲೀಮಿಗೆ ಕಟ್ಟುನಿಟ್ಟಿನ ನಿರ್ದೇಶನ
ಮುಂದಿನ ದಿನಗಳಲ್ಲಿ ಇಂತಹ ಅಪಾಯಕಾರಿ ಘಟನೆಗಳು ಮರುಕಳಿಸದಂತೆ ತಡೆಯಲು ಸಚಿವರು ಹೊಸ ಮಾರ್ಗಸೂಚಿ ಪ್ರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ:
ನಿರಂತರ ತರಬೇತಿ: ಮುಂದಿನ ವರ್ಷದಿಂದ ದಸರಾ ಮೆರವಣಿಗೆ ಆರಂಭಿಸುವ ಮುನ್ನ ಕನಿಷ್ಠ 20 ದಿನಗಳಿಂದ ಒಂದು ತಿಂಗಳ ಮುಂಚಿತವಾಗಿಯೇ ನುರಿತ ಮಾವುತರು ಹಾಗೂ ಕಾವಾಡಿಗರ ನೇತೃತ್ವದಲ್ಲಿ ಆನೆಗಳಿಗೆ ಕಡ್ಡಾಯ ತಾಲೀಮು ನಡೆಸುವ ವ್ಯವಸ್ಥೆ ಕಲ್ಪಿಸಬೇಕು.
ಪರಿಸರಕ್ಕೆ ಸಿದ್ಧತೆ: ಭಾರಿ ಜನಸಂದಣಿ, ವಾದ್ಯಗಳ ಸದ್ದು, ಗದ್ದಲ ಹಾಗೂ ಮೆರವಣಿಗೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಆನೆಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಮುಂಚಿತವಾಗಿಯೇ ಸಿದ್ಧಗೊಳಿಸಬೇಕು.
ಸಾರ್ವಜನಿಕ ಸುರಕ್ಷತೆ ಹಾಗೂ ಭಾವನೆಗಳಿಗೆ ಆದ್ಯತೆ
“ದಸರಾ ಜಂಬೂಸವಾರಿ ಕೇವಲ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಅದು ಜನರ ಭಾವನೆ, ಸಂಪ್ರದಾಯ ಮತ್ತು ನಂಬಿಕೆಗಳ ಸಂಕೇತ. ಇಂತಹ ಸಂದರ್ಭದಲ್ಲಿ ಆನೆಗಳು ಬೆದರಿ ಓಡುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತದೆ” ಎಂದು ಸಚಿವರು ಅಭಿಪ್ರಾಯಪಟ್ಟರು. ಇನ್ನುಮುಂದೆ ಜಂಬೂಸವಾರಿಗೆ ನಿಯೋಜಿಸುವ ಪ್ರತಿಯೊಂದು ಆನೆಯ ಆರೋಗ್ಯ, ಮಾನಸಿಕ ಸ್ಥಿತಿ, ತರಬೇತಿ ಹಾಗೂ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಾಕೀತು ಮಾಡಿದರು.
Related Articles
Thank you for your comment. It is awaiting moderation.


Comments (0)