ಬೆಳಗಿನ ಜಾವದ ‘ಅನ್ನದಾತ’: ಬಿಎಂಟಿಸಿ ಚಾಲಕನ ಸದ್ದಿಲ್ಲದ ಸತ್ಕರ್ಮದ ಮಹಾವ್ರತ!
- by Suddi Team
- July 23, 2026
- 3 Views
ಬೆಂಗಳೂರು: ಪ್ರತಿದಿನ ಬೆಳಗ್ಗೆ ಸಿಲಿಕಾನ್ ಸಿಟಿಯ ರಸ್ತೆಗಳು ವಾಹನಗಳ ಸದ್ದಿನಿಂದ ಜಾಗೃತಗೊಳ್ಳುವ ಮೊದಲೇ, ಉತ್ತರಹಳ್ಳಿಯಿಂದ ಮೆಜೆಸ್ಟಿಕ್ ಕಡೆಗೆ ಸಾಗುವ ಆ ಬಿಎಂಟಿಸಿ ಬಸ್‌ನಲ್ಲಿ ಒಂದು ಅಪೂರ್ವ ಮಾನವೀಯ ಕಥೆ ಅನಾವರಣಗೊಳ್ಳುತ್ತಿರುತ್ತದೆ. ನಿತ್ಯ ನೂರಾರು ಜನರನ್ನು ಸುರಕ್ಷಿತವಾಗಿ ತಲುಪಿಸುವ ಆ ಚಾಲಕನ ಕೈಗಳು, ಕೇವಲ ಬಸ್ಸಿನ ಸ್ಟೇರಿಂಗ್ ಹಿಡಿಯುವುದಿಲ್ಲ; ಬದಲಿಗೆ ಹಸಿದ ಹೊಟ್ಟೆಗಳಿಗೆ ಪ್ರೀತಿಯ ಅನ್ನದ ಪೊಟ್ಟಣವನ್ನೂ ಚಾಚುತ್ತವೆ!
ಅವರೇ ಬಿಎಂಟಿಸಿ ಚಾಲಕ ಕೃಷ್ಣಮೂರ್ತಿ. ಪ್ರಚಾರದ ಹಂಗಿಲ್ಲದೆ, ಸದ್ದಿಲ್ಲದೆ ಸಮಾಜದ ಕಟ್ಟಕಡೆಯ ಜನರಲ್ಲಿ ದೇವರನ್ನು ಕಾಣುತ್ತಿರುವ ನಿಜವಾದ ‘ಹೀರೋ’.
ರಸ್ತೆಯಲ್ಲೇ ದೇವರನ್ನು ಹುಡುಕುವ ಕಣ್ಣುಗಳು
ಸಾಮಾನ್ಯವಾಗಿ ರಸ್ತೆಯಲ್ಲಿ ಯಾರಾದರೂ ಅಡ್ಡ ಬಂದರೆ ಬಸ್ ಚಾಲಕರು ಜೋರಾಗಿ ಹಾರ್ನ್ ಮಾಡುವುದು ಅಥವಾ ಕೂಗಾಡುವುದು ಸಹಜ. ಆದರೆ, ಕೃಷ್ಣಮೂರ್ತಿ ಅವರ ಶೈಲಿಯೇ ಬೇರೆ. ಅವರು ರಸ್ತೆಯ ಬದಿಯಲ್ಲಿ ಹೋಗುತ್ತಿರುವ ಚಿಂದಿ ಆಯುವ ಮಹಿಳೆಯನ್ನು ಕಂಡರೆ, “ಯೇ ತಾಯಿ, ಈ ಕಡೆ ಬಾ…” ಎಂದು ಪ್ರೀತಿಯಿಂದ ಕೂಗುತ್ತಾರೆ. ಬಸ್ಸನ್ನು ಅರೆಕ್ಷಣ ನಿಧಾನಗೊಳಿಸಿ, ತಮ್ಮ ಬಳಿಯಿರುವ ಬಿಸಿಬಿಸಿ ಪಲಾವ್ ಅಥವಾ ರೈಸ್ ಐಟಂನ ಪೊಟ್ಟಣವನ್ನು ಅವರ ಕೈಗಿಡುತ್ತಾರೆ.
ಬಸ್ ಚಲಾಯಿಸುವಾಗ ಅವರ ಕಣ್ಣುಗಳು ಕೇವಲ ರಸ್ತೆಯ ಮೇಲಿರುವುದಿಲ್ಲ; ರಸ್ತೆ ಬದಿಯ ಭಿಕ್ಷುಕರು, ಫುಟ್‌ಪಾತ್‌ನಲ್ಲಿ ಕುಳಿತಿರುವ ಅಸಹಾಯಕ ವೃದ್ಧರು ಮತ್ತು ಮುಂಜಾನೆಯೇ ನಗರವನ್ನು ಸ್ವಚ್ಛಗೊಳಿಸಲು ದಣಿದು ಕುಳಿತಿರುವ ಪೌರಕಾರ್ಮಿಕರ ಕಡೆಗೆ ಇರುತ್ತವೆ. “ತಮ್ಮಣ್ಣ ಇಲ್ಲಿ ಬಾ”, “ಅಜ್ಜಿ ಇದನ್ನು ತೊಗೋ” ಎನ್ನುತ್ತಾ ಸಾಗುವಷ್ಟರಲ್ಲಿ ಉತ್ತರಹಳ್ಳಿಯಿಂದ ಮೆಜೆಸ್ಟಿಕ್ ತಲುಪುವ ಮೊದಲೇ ಕನಿಷ್ಠ ನಾಲ್ಕೈದು ಜನರ ಹಸಿವು ನೀಗಿರುತ್ತದೆ.
ಪ್ರತಿದಿನದ ನಿರಂತರ ವ್ರತ
ಕುತೂಹಲದಿಂದ ವಿಚಾರಿಸಿದಾಗ ತಿಳಿದುಬಂದ ಸತ್ಯ ನಿಜಕ್ಕೂ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತದೆ. ಚಾಲಕ ಕೃಷ್ಣಮೂರ್ತಿ ಅವರು ಪ್ರತಿದಿನ ಮನೆಯಿಂದ ಹೊರಡುವಾಗಲೇ ಕನಿಷ್ಠ 10 ತಿಂಡಿಯ ಪ್ಯಾಕೆಟ್‌ಗಳನ್ನು ಕಟ್ಟಿಸಿಕೊಂಡು ಬರುತ್ತಾರೆ. ಇದನ್ನು ಅವರು ಯಾವುದೋ ಒಂದು ದಿನದ ಹರಕೆಯಾಗಿ ಮಾಡುತ್ತಿಲ್ಲ, ಬದಲಿಗೆ ಪ್ರತಿನಿತ್ಯದ ವ್ರತದಂತೆ ಪಾಲಿಸಿಕೊಂಡು ಬರುತ್ತಿದ್ದಾರೆ.
ಮಗನ ಮೇಲಿನ ಪ್ರೀತಿ, ಸತ್ಕರ್ಮದ ನಂಬಿಕೆ
“ಯಾಕೆ ಹೀಗೆ ಪ್ರತಿದಿನ ತಿಂಡಿ ಹಂಚುತ್ತೀರಿ?” ಎಂದು ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಕೇಳಿದಾಗ, ಕೃಷ್ಣಮೂರ್ತಿ ಅವರು ನೀಡಿದ ಉತ್ತರ ಇಡೀ ಸಮಾಜಕ್ಕೇ ಒಂದು ಪಾಠ.
“ನಾನು ದುಡಿದಿದ್ದರಲ್ಲಿ ಒಂದು ಚೂರಾದರೂ ಬೇರೆಯವರಿಗೆ ಕೊಡಬೇಕಲ್ವಾ ಮೇಡಂ.. ಇದರಿಂದ ಏನಾದರೂ ಪುಣ್ಯ ಅಂತ ಬಂದ್ರೆ ಅದು ನನ್ನ ಮಗನನ್ನು ಕಾಪಾಡುತ್ತದೆ.”
ತಮ್ಮ ಕಷ್ಟದ ದುಡಿಮೆಯಲ್ಲೂ ಸಮಾಜಕ್ಕೆ ಕೈಲಾದಷ್ಟು ಕೊಡುಗೆ ನೀಡಬೇಕು ಎನ್ನುವ ಅವರ ಉದಾತ್ತ ಚಿಂತನೆ ಮತ್ತು ಆ ಸತ್ಕರ್ಮದ ಪುಣ್ಯ ತನ್ನ ಮಗನನ್ನು ಕಾಯುತ್ತದೆ ಎನ್ನುವ ಪಿತೃಪ್ರೇಮ ನಿಜಕ್ಕೂ ಹೃದಯಸ್ಪರ್ಶಿ.
ಪ್ರಚಾರವಿಲ್ಲದ ಒಳ್ಳೆಯತನ:
ಇಂದಿನ ದಿನಗಳಲ್ಲಿ ಸಣ್ಣ ಸಹಾಯ ಮಾಡಿದರೂ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್, ಫೋಟೋ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವವರೇ ಹೆಚ್ಚು. ಆದರೆ, ಕೃಷ್ಣಮೂರ್ತಿ ಅವರ ಈ ಅಪಾರ ದಯಾಗುಣಕ್ಕೆ ಯಾವುದೇ ಕ್ಯಾಮೆರಾಗಳ ಹಂಗಿಲ್ಲ, ಲೈಕ್ಸ್‌ಗಳ ಹಪಹಪಿತನವಿಲ್ಲ. ನಿಜವಾದ ಒಳ್ಳೆಯತನಕ್ಕೆ ಪ್ರಚಾರದ ಹಂಗಿರುವುದಿಲ್ಲ ಎಂಬುದಕ್ಕೆ ಈ ಬಿಎಂಟಿಸಿ ಚಾಲಕನೇ ಸಾಕ್ಷಿ. ಇಂತಹ ಸದ್ದಿಲ್ಲದ ಸತ್ಕಾರ್ಯಗಳೇ ಇಂದಿಗೂ ಜಗತ್ತಿನಲ್ಲಿ ಮಾನವೀಯತೆ ಜೀವಂತವಾಗಿರಲು ಕಾರಣವಾಗಿವೆ. ಕೃಷ್ಣಮೂರ್ತಿ ಅವರ ಈ ಸೇವೆಗೆ ನಮ್ಮದೊಂದು ಸಲಾಂ!
Related Articles
Thank you for your comment. It is awaiting moderation.


Comments (0)