ಸಮಾಜದ ಒಳಿತಿಗೆ ಬದುಕು ಸಮರ್ಪಿಸುವುದೇ ನಿಜವಾದ ಶಕ್ತಿ ಆರಾಧನೆ: ರಂಭಾಪುರಿ ಜಗದ್ಗುರುಗಳು
- by Suddi Team
- October 11, 2026
- 210 Views
ಜಮಖಂಡಿ: ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮತ್ತು ಆಧ್ಯಾತ್ಮಿಕ ಅರಿವು ಅತ್ಯಗತ್ಯವಾಗಿದೆ ಎಂದು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ಹೇಳಿದ್ದಾರೆ.
ಜಮಖಂಡಿ ಕಡಪಟ್ಟಿ ಶ್ರೀ ಬಸವಣ್ಣ ದೇವಸ್ಥಾನದ ಆವರಣದ ಮಾಧವ ಧರ್ಮ ಮಂಟಪದಲ್ಲಿ ರಂಭಾಪುರಿ ಪೀಠದ ವತಿಯಿಂದ ಹಮ್ಮಿಕೊಳ್ಳಲಾಗಿರುವ ದಸರಾ ಧರ್ಮ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಅಧರ್ಮದ ಮೇಲೆ ಧರ್ಮದ ವಿಜಯವೇ ದಸರಾ:
“ಅಜ್ಞಾನವನ್ನು ತೊರೆದು ಜ್ಞಾನವನ್ನು ಸಂಪಾದಿಸುವುದು ಮತ್ತು ಅನ್ಯಾಯದ ವಿರುದ್ಧ ನಿಲ್ಲುವುದು ಸತ್ಯದ ಮಾರ್ಗವಾಗಿದೆ. ಸಮಾಜದ ಒಳಿತಿಗಾಗಿ ಬದುಕನ್ನು ಸಮರ್ಪಿಸಿಕೊಳ್ಳುವುದೇ ನಿಜವಾದ ಶಕ್ತಿ ಆರಾಧನೆಯಾಗಿದೆ. ದಸರಾ ಹಬ್ಬವು ದುಷ್ಟ ಶಕ್ತಿಗಳ ದಮನ ಹಾಗೂ ಸತ್ಶಕ್ತಿಗಳ ರಕ್ಷಣೆಯ ಸಂಕೇತವಾಗಿದೆ. ಜಮಖಂಡಿ ನಗರದಲ್ಲಿ ಅದ್ಧೂರಿಯಾಗಿ ದಸರಾ ಧರ್ಮ ಸಮ್ಮೇಳನ ಜರುಗುತ್ತಿರುವುದು ತಮಗೆ ಅಪಾರ ಹರ್ಷ ತಂದಿದೆ” ಎಂದು ಶ್ರೀಗಳು ನುಡಿದರು.
ಸಮ್ಮೇಳನ ಉದ್ಘಾಟಿಸಿದ ಸಚಿವ ಪ್ರಹ್ಲಾದ್ ಜೋಶಿ:
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು, “ಭಾರತೀಯ ಸಂಸ್ಕೃತಿ ಮತ್ತು ಅಧ್ಯಾತ್ಮದ ಅಡಿಪಾಯದ ಮೇಲೆ ನಮ್ಮ ಸಮಾಜದ ಬದುಕು ರೂಪಿತವಾಗಿದೆ. ಪ್ರತಿಯೊಬ್ಬರೂ ಸರಿಯಾದ ಮಾರ್ಗದಲ್ಲಿ ನಡೆಯುವಂತಾಗಲು ಧರ್ಮದ ಅಗತ್ಯವಿದೆ. ರಂಭಾಪುರಿ ಪೀಠವು ಸಮಾಜದ ಒಳಿತಿಗಾಗಿ ಮತ್ತು ಜನರಲ್ಲಿ ಸತ್ಚಿಂತನೆಗಳನ್ನು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಜಮಖಂಡಿಯಲ್ಲಿ ಈ ದಸರಾ ಧರ್ಮ ಸಮ್ಮೇಳನ ಆಯೋಜಿಸಿರುವುದು ನಾಡಿನ ಜನರ ಸೌಭಾಗ್ಯವಾಗಿದೆ” ಎಂದು ಶ್ಲಾಘಿಸಿದರು.
ಶಕ್ತಿ ಎಂದರೇನು? ಪೀಠಾಧ್ಯಕ್ಷರ ವ್ಯಾಖ್ಯಾನ:
ಉಪನ್ಯಾಸ ನೀಡಿದ ಒಪ್ಪತ್ತೇಶ್ವರ ಮಹಾಸ್ವಾಮಿಗಳು, “ಶಕ್ತಿ ಎಂದರೆ ಕೇವಲ ಅಧಿಕಾರ ಪ್ರದರ್ಶನವಲ್ಲ, ಅದು ದುರ್ಬಲರ ರಕ್ಷಣೆಗೆ ಬಳಸಿಕೊಳ್ಳುವ ಸಾಮರ್ಥ್ಯ. ಸತ್ಶಕ್ತಿ ಮತ್ತು ಸಾಮರಸ್ಯವನ್ನು ಬೆಳೆಸುವ ಮೂಲಕ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು. ನವರಾತ್ರಿಯ ಶಕ್ತಿ ಆರಾಧನೆ ಮನುಷ್ಯನಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಲಿ” ಎಂದರು. ಗೋಗಾಂವದ ಅಭಿನವ ಸಿದ್ಧಲಿಂಗ ಮುನಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಾಂತಗೌಡ ಪಾಟೀಲ ಅವರು ಎಲ್ಲರನ್ನೂ ಸ್ವಾಗತಿಸಿದರು.
ಸಮಾರಂಭದಲ್ಲಿ ಗೌರಿಶಂಕರ ಶಿವಾಚಾರ್ಯ ಸ್ವಾಮಿಗಳು ಜಮಖಂಡಿ ನೇತೃತ್ವ ವಹಿಸಿದ್ದರು. ದಾ.ನಿರೂಪಾದೀಶ ಸ್ವಾಮಿಗಳು ಅಡವಿ ಸಿದ್ದೇಶ್ವರಮಠ ಮಲಗಾಲ್ವಿ ಸಮುಖ ವಹಿಸಿದ್ದರು. ಶರಣಬಸವ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬನಹಟ್ಟಿ, ಜಮಖಂಡಿಯ ವೇದಾಂತಾಚಾರ್ಯ ಸಹಜಾನಂದ ಅವಧೂತರು, ರುದ್ರಾಪುರಮಠದ ಮಠಾಧೀಶರು ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.


Comments (0)