ಮೈಸೂರು ದಸರಾ 2026: ‘ಅನ್ನವನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ’ – ತಂತ್ರಜ್ಞಾನದ ಯುಗಕ್ಕೆ ಗವಿಶ್ರೀಗಳ ಮಾರ್ಮಿಕ ಎಚ್ಚರಿಕೆ!

ಮೈಸೂರು:ವಿಶ್ವವಿಖ್ಯಾತ ಮೈಸೂರು ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಬಾರಿಯ ಉತ್ಸವವನ್ನು ಉದ್ಘಾಟಿಸಿದ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ವಿಶಿಷ್ಟ ಶೈಲಿಯ ಭಾಷಣದ ಮೂಲಕ ಇಡೀ ನಾಡಿನ ಗಮನ ಸೆಳೆದಿದ್ದಾರೆ. ತಂತ್ರಜ್ಞಾನದ ಅತಿಯಾದ ವ್ಯಾಮೋಹ ಮತ್ತು ರೈತರ ಕೃಷಿ ಬಿಕ್ಕಟ್ಟಿನ ಬಗ್ಗೆ ಶ್ರೀಗಳು ಆಡಿದ ಮಾತುಗಳು ಈಗ ಡಿಜಿಟಲ್ ಜಗತ್ತಿನಲ್ಲಿ ಭಾರೀ ವೈರಲ್ ಆಗುತ್ತಿವೆ.

ಶ್ರೀಗಳ ಭಾಷಣದ ಪ್ರಮುಖ ಹೈಲೈಟ್ಸ್ ಇಲ್ಲಿದೆ:

ಇಂಟರ್ನೆಟ್ ಯುಗಕ್ಕೆ ಭರ್ಜರಿ ಟಾಂಗ್!

ಎಲ್ಲವೂ ಸಿಗುತ್ತೆ, ಅನ್ನ ಸಿಗಲ್ಲ: “ಇಂದಿನ ಕಾಲದಲ್ಲಿ ಮೊಬೈಲ್‌ನಲ್ಲಿ ಕ್ಲಿಕ್ ಮಾಡಿದರೆ ಜಗತ್ತಿನ ಎಲ್ಲ ಮಾಹಿತಿಯನ್ನೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ ನೆನಪಿಡಿ, ಹಸಿವಾದಾಗ ತಿನ್ನುವ ಅನ್ನ ಮತ್ತು ಸಾರನ್ನು ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ!” ಎಂದು ಶ್ರೀಗಳು ಡಿಜಿಟಲ್ ಜಗತ್ತಿಗೆ ಎಚ್ಚರಿಸಿದರು.

ರೈತನೇ ಆಧಾರ: ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮನುಷ್ಯ ಬದುಕಲು ಕೃಷಿ ಮತ್ತು ರೈತನ ಶ್ರಮವೇ ಅಂತಿಮ ಎಂಬುದನ್ನು ಶ್ರೀಗಳು ನೆನಪಿಸಿದರು.

ದೊರೆಯ ಹಬ್ಬವೀಗ ಧರೆಯ ಹಬ್ಬ

ಒಂದು ಕಾಲದಲ್ಲಿ ಅರಮನೆ ಹಾಗೂ ರಾಜ-ಮಹಾರಾಜರ ವೈಭವಕ್ಕೆ ಸೀಮಿತವಾಗಿದ್ದ ‘ದೊರೆಯ ಹಬ್ಬ’ ದಸರಾ, ಇಂದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಜನಸಾಮಾನ್ಯನ ‘ಧರೆಯ ಹಬ್ಬ’ವಾಗಿ ಬದಲಾಗಿದೆ.

ಈ ಭವ್ಯ ಆಚರಣೆಯ ಹಿಂದೆ ಹಗಲಿರುಳು ದುಡಿಯುವ ಸಾವಿರಾರು ಶ್ರಮಿಕರ ಕಾಣದ ಕೈಗಳ ಪರಿಶ್ರಮವಿದೆ ಎಂದು ಶ್ರೀಗಳು ಬಣ್ಣಿಸಿದರು.

ಜಾತಿಗಿಂತ ನೀತಿ ಮುಖ್ಯ

“ಸಮಾಜದಲ್ಲಿ ಜಾತಿಯನ್ನು ನೋಡಿ ಗೋಡೆಗಳನ್ನು ಕಟ್ಟುವುದಕ್ಕಿಂತ, ನೀತಿಯನ್ನು ಆಧಾರವಾಗಿಟ್ಟುಕೊಂಡು ಮಾನವೀಯತೆಯ ಸಮಾಜ ನಿರ್ಮಿಸಬೇಕು” ಎಂದು ಕರೆ ನೀಡಿದ ಗವಿಶ್ರೀಗಳು, ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವ ಮತ್ತು ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳ ಅನ್ನದಾಸೋಹದ ಸೇವೆಯನ್ನು ಇಂದಿನ ಪೀಳಿಗೆಗೆ ಮಾದರಿ ಎಂದರು.

ಪರಿಸರ ಉಳಿಸಲು ‘ಲಕ್ಷ ದೀಪ ಬೇಡ, ಒಂದು ಗಿಡ ಸಾಕು’

ಜೀವ ನದಿಗಳಾದ ಕಾವೇರಿ, ಕೃಷ್ಣೆ, ತುಂಗಭದ್ರೆ ಬತ್ತಿ ಹೋದರೆ ಇಡೀ ಜೀವರಾಶಿ ಸಂಕಷ್ಟಕ್ಕೆ ಸಿಲುಕುತ್ತದೆ.

ದೇವರ ಮುಂದೆ ಲಕ್ಷ ದೀಪಗಳನ್ನು ಹಚ್ಚಿ ಸಂಭ್ರಮಿಸುವುದಕ್ಕಿಂತ, ಪ್ರಕೃತಿಯನ್ನು ಉಳಿಸಲು ಪ್ರತಿಯೊಬ್ಬರೂ ತಮ್ಮ ಮನೆಯಂಗಳದಲ್ಲಿ ಕನಿಷ್ಠ ಒಂದು ವೃಕ್ಷವನ್ನು ನೆಟ್ಟು ಬೆಳೆಸಬೇಕು. ಅದೇ ದೇವರಿಗೆ ಸಲ್ಲಿಸುವ ನಿಜವಾದ ಸೇವೆ ಎಂದು ಪರಿಸರ ಕಾಳಜಿ ವ್ಯಕ್ತಪಡಿಸಿದರು.

ಶಿಕ್ಷಣಕ್ಕೆ ಹಾಜಬ್ಬರೇ ಪ್ರೇರಣೆ

ಕಿತ್ತಳೆ ಹಣ್ಣು ಮಾರುತ್ತಲೇ ತಮಗಿಲ್ಲದ ಅಕ್ಷರ ಜ್ಞಾನವನ್ನು ಊರಿನ ಮಕ್ಕಳಿಗೆ ನೀಡಲು ಶಾಲೆ ಕಟ್ಟಿದ ಹರೇಕಳ ಹಾಜಬ್ಬ ಅವರ ತ್ಯಾಗವನ್ನು ಸ್ಮರಿಸಿದ ಶ್ರೀಗಳು, ಪ್ರತಿಯೊಬ್ಬ ಸಾರ್ವಜನಿಕರೂ ತಮ್ಮ ಊರಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

 

 

Related Articles

Comments (0)

Leave a Comment