ದಸರಾ ವಿದ್ಯುತ್ ದೀಪಾಲಂಕಾರದ ವೈಭವಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಚಾಲನೆ
- by Suddi Team
- October 12, 2026
- 95 Views
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್ ದೀಪಾಲಂಕಾರಕ್ಕೆ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ ಅವರು ನಗರದ ಸಯ್ಯಾಜಿರಾವ್ ರಸ್ತೆಯ ಹಸಿರು ಚಪ್ಪರದ ಆವರಣದಲ್ಲಿ ಭಾನುವಾರ ವಿದ್ಯುಕ್ತ ಚಾಲನೆ ನೀಡಿದರು. ಇಂದಿನಿಂದ ಆರಂಭಗೊಂಡು ಅಕ್ಟೋಬರ್ 31 ರವರೆಗೆ ಒಟ್ಟು 21 ದಿನಗಳ ಕಾಲ ಸ್ಥಳೀಯರು ಹಾಗೂ ಪ್ರವಾಸಿಗರು ಇಡೀ ಮೈಸೂರು ನಗರದ ದೀಪಾಲಂಕಾರದ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.
146 ಕಿಲೋಮೀಟರ್ ವ್ಯಾಪ್ತಿಯಲ್ಲಿ ದೀಪದ ಜಗಮಗ:
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಬಾರಿಯ ದೀಪಾಲಂಕಾರವು ಕಳೆದ ವರ್ಷಕ್ಕಿಂತಲೂ ಹೆಚ್ಚು ಆಕರ್ಷಣೀಯವಾಗಿ ಮೂಡಿಬಂದಿದೆ. ನಗರದ ಒಟ್ಟು 199 ರಸ್ತೆಗಳ 146 ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ 123 ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಇದರೊಂದಿಗೆ ನಗರದ ಆಯಕಟ್ಟಿನ ಜಾಗಗಳಲ್ಲಿ ಎಲ್ಇಡಿ ಬಲ್ಬ್‌ಗಳಿಂದ ಸಿದ್ಧಪಡಿಸಲಾದ 80 ವಿವಿಧ ಭವ್ಯ ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಅರಮನೆ ಸುತ್ತಲಿನ ರಸ್ತೆಗಳು, ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ದೊಡ್ಡಕೆರೆ ಮೈದಾನ, ಕೆ.ಆರ್. ವೃತ್ತ ಸೇರಿದಂತೆ ಇಡೀ ಸಾಂಸ್ಕೃತಿಕ ನಗರಿ ದೀಪದ ಬೆಳಕಿನಲ್ಲಿ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
3,500 ಡ್ರೋನ್‌ಗಳ ಬೃಹತ್ ಪ್ರದರ್ಶನ – ಗಿನ್ನಿಸ್ ರೆಕಾರ್ಡ್ ಯತ್ನ:
ದೀಪಾಲಂಕಾರದ ಚಾಲನೆ ಬಳಿಕ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್ ಅವರು, ಈ ಬಾರಿಯ ದಸರಾದಲ್ಲಿ ಮತ್ತೊಂದು ಹೈಲೈಟ್ ಎಂದರೆ ಅದು ವರ್ಣರಂಜಿತ ಡ್ರೋನ್ ಪ್ರದರ್ಶನ ಎಂದರು. ರಾಷ್ಟ್ರೀಯ ಪಕ್ಷಿ ನವಿಲಿನ ಬೃಹತ್ ಆಕೃತಿಯನ್ನು ಮೂಡಿಸಲು ಬರೋಬ್ಬರಿ 3,500 ಡ್ರೋನ್‌ಗಳನ್ನು ಬಳಸಲಾಗುತ್ತಿದ್ದು, ಇದು ಗಿನ್ನಿಸ್ ದಾಖಲೆ ಬರೆಯಲು ಸಜ್ಜಾಗಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅಕ್ಟೋಬರ್ 17, 18, 20 ಮತ್ತು 21 ರಂದು ರಾತ್ರಿ 8 ಗಂಟೆಗೆ ಈ ಅದ್ಭುತ ಡ್ರೋನ್ ಶೋ ಸಾರ್ವಜನಿಕರಿಗೆ ಪ್ರದರ್ಶನಗೊಳ್ಳಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ತನ್ವೀರ್ ಸೇಠ್, ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಅರ್ಚನಾ ಎಂ.ಎಸ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ದಸರಾ ಉಪ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.


Comments (0)