ಕೈ ಪಾಳಯದಲ್ಲಿ ಭಿನ್ನಮತ ಸ್ಫೋಟ: ಯಶವಂತರಾಯಗೌಡ ರಾಜೀನಾಮೆ ಅಸ್ತ್ರ; ಬೇಳೂರು, ತನ್ವೀರ್ ಸೇಟ್, ಸಂಗಮೇಶ್ ತೀವ್ರ ಅಸಮಾಧಾನ!
- by Suddi Team
- August 3, 2026
- 18 Views
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತ ಪಕ್ಷದಲ್ಲಿ ಬಂಡಾಯದ ಬಿರುಗಾಳಿ ಎದ್ದಿದೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಭಾರಿ ಬೇಸರಗೊಂಡಿರುವ ನಾಲ್ವರು ಪ್ರಮುಖ ಹಿರಿಯ ಶಾಸಕರು ಹೈಕಮಾಂಡ್ ವಿರುದ್ಧ ಬಹಿರಂಗವಾಗಿಯೇ ಬಂಡಾಯದ ಬಾವುಟ ಹಾರಿಸಿದ್ದಾರೆ.
ಯಶವಂತರಾಯಗೌಡ ಪಾಟೀಲ್ ಅಧಿಕೃತ ರಾಜೀನಾಮೆ!
ಸಂಪುಟದಲ್ಲಿ ಸ್ಥಾನ ಸಿಗದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಉಪಸಭಾಪತಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, “ಕೊನೆ ಕ್ಷಣದವರೆಗೂ ನನ್ನ ಹೆಸರಿತ್ತು, ಆದರೆ ಪಕ್ಷ ಕೊಟ್ಟ ಮಾತು ತಪ್ಪಿದೆ. ನನ್ನ ವಿರುದ್ಧ ದೊಡ್ಡ ಪಿತೂರಿ ನಡೆದಿದೆ” ಎಂದು ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ.
ರಾಜೀನಾಮೆ ಹಾದಿಯಲ್ಲಿ ಗೋಪಾಲಕೃಷ್ಣ ಬೇಳೂರು
ಮತ್ತೊಂದೆಡೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕೂಡ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. “ಕಾಂಗ್ರೆಸ್‌ನಲ್ಲಿ ಕೇವಲ ಮಾಜಿ ಸಿಎಂ ಹಾಗೂ ಹಿರಿಯ ಸಚಿವರ ಮಕ್ಕಳಿಗೆ ಮಾತ್ರ ಮನ್ನಣೆ ನೀಡಲಾಗುತ್ತಿದೆ” ಎಂದು ನೇರ ವಾಗ್ದಾಳಿ ನಡೆಸಿರುವ ಅವರು, ಮಂಗಳವಾರ ಬೆಳಿಗ್ಗೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬೆಂಬಲಿಗರೊಂದಿಗೆ ತನ್ವೀರ್ ಸೇಟ್ ಮಹತ್ವದ ಸಭೆ
ಆರು ಬಾರಿಯ ಹಿರಿಯ ಶಾಸಕ ತನ್ವೀರ್ ಸೇಟ್ ಅವರು ಕೂಡ ಹೈಕಮಾಂಡ್ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ಎಂದಿಗೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದವನಲ್ಲ. ಆದರೆ ಪಕ್ಷ ನೀಡಿದ್ದ ಭರವಸೆಗಳು ಈಡೇರಿಲ್ಲ ಮತ್ತು ಮೈಸೂರು ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ” ಎಂದು ಬೇಸರ ಹೊರಹಾಕಿರುವ ಅವರು, ಸದ್ಯಕ್ಕೆ ರಾಜೀನಾಮೆ ನೀಡದಿದ್ದರೂ ಬೆಂಬಲಿಗರೊಂದಿಗೆ ತುರ್ತು ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಎಚ್ಚರಿಸಿದ್ದಾರೆ.
ಬಿ.ಕೆ. ಸಂಗಮೇಶ್ ಜಂಟಿ ಹೋರಾಟದ ಪ್ಲಾನ್
ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರು ಸಚಿವ ಸ್ಥಾನ ವಂಚಿತ ಇತರ ಹಿರಿಯ ಶಾಸಕರೊಂದಿಗೆ ಕೈಜೋಡಿಸಿದ್ದಾರೆ. ಹಿರಿಯ ಮುಖಂಡರ ನಿವಾಸದಲ್ಲಿ ನಡೆಯುತ್ತಿರುವ ಅತೃಪ್ತ ಶಾಸಕರ ಸಭೆಯಲ್ಲಿ ಭಾಗಿಯಾಗಿರುವ ಅವರು, ಹೈಕಮಾಂಡ್ ವಿರುದ್ಧ ಜಂಟಿ ಹೋರಾಟ ಅಥವಾ ಸಾಮೂಹಿಕ ಒತ್ತಡ ತರುವ ಕುರಿತು ತಮ್ಮ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ದಿನೇಶ್ ಗುಂಡೂರಾವ್ ಬಹಿರಂಗ ನಿರಾಸೆ!
ಪಕ್ಷದ ಹಿರಿಯ ನಾಯಕ ಹಾಗೂ ಆರು ಬಾರಿಯ ಶಾಸಕ ದಿನೇಶ್ ಗುಂಡೂರಾವ್ ಅವರು ಸಚಿವ ಸ್ಥಾನ ಸಿಗದಿದ್ದಕ್ಕೆ ತಮ್ಮ ಮುನಿಸನ್ನು ಬಹಿರಂಗಪಡಿಸಿದ್ದಾರೆ. “ಸಚಿವ ಸಂಪುಟದಿಂದ ನನ್ನನ್ನು ಹೊರಗಿಟ್ಟಿರುವುದು ತೀವ್ರ ನಿರಾಸೆ ಮೂಡಿಸಿದೆ. ಪಕ್ಷಕ್ಕಾಗಿ ನಿರಂತರವಾಗಿ ದುಡಿದ ನನಗೆ ಈ ನಿರ್ಧಾರದಿಂದ ಭಾರಿ ಬೇಸರವಾಗಿದೆ” ಎಂದು ಮುಕ್ತವಾಗಿ ಹೇಳಿಕೆ ನೀಡುವ ಮೂಲಕ ಹೈಕಮಾಂಡ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಂ. ಕೃಷ್ಣಪ್ಪ ಮತ್ತು ಪ್ರಿಯಾ ಕೃಷ್ಣ ಆಕ್ರೋಶ
ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ, ಶಾಸಕ ಪ್ರಿಯಾ ಕೃಷ್ಣ ಅವರೂ ಕೂಡ ತಮ್ಮನ್ನು ಕಡೆಗಣಿಸಿರುವುದಕ್ಕೆ ತೀವ್ರ ಆಕ್ಷೇಪ ಎತ್ತಿದ್ದಾರೆ. “ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಮತ್ತು ಹಿರಿಯರನ್ನು ಕಡೆಗಣಿಸಿ ಬೇರೆ ಪಕ್ಷಗಳಿಂದ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ” ಎಂದು ಕೃಷ್ಣಪ್ಪ ಬೆಂಬಲಿಗರು ಬೆಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದು, ಶಾಸಕರು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಸದ್ಯದಲ್ಲೇ ತೀರ್ಮಾನಿಸುವುದಾಗಿ ಹೇಳಿದ್ದಾರೆ.
ಕೋಲಾರ ಭಾಗದ ಶಾಸಕರಿಂದ ಒಗ್ಗಟ್ಟಿನ ಮುನಿಸು
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ನೀಡದಿರುವುದಕ್ಕೆ ಆ ಭಾಗದ ನಾಲ್ಕೂ ಜನ ಕಾಂಗ್ರೆಸ್ ಶಾಸಕರಾದ ಎಸ್.ಎನ್. ನಾರಾಯಣಸ್ವಾಮಿ, ಕೆ.ವೈ. ನಂಜೇಗೌಡ, ಕೊಟ್ಟೂರು ಮಂಜುನಾಥ್ ಹಾಗೂ ರೂಪಕಲಾ ಶಶಿಧರ್ ತೀವ್ರ ಅಸಮಾಧಾನಗೊಂಡಿದ್ದಾರೆ. ಆಗಸ್ಟ್ ೪ ರಂದು ಎಸ್.ಎನ್. ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತ್ಯೇಕ ಸಭೆ ಸೇರಿ ಜಂಟಿ ನಿರ್ಧಾರ ಪ್ರಕಟಿಸಲು ಈ ನಾಯಕರು ಮುಂದಾಗಿದ್ದಾರೆ.
ನಿಷ್ಠಾವಂತರಿಗೆ ಅನ್ಯಾಯ: ಅಪ್ಪಾಜಿ ನಾಡಗೌಡ, ಹಂಪನಗೌಡ ಬಾದರ್ಲಿ ಬೇಸರ
ಹಿರಿಯ ಶಾಸಕರಾದ ಅಪ್ಪಾಜಿ ಸಿ.ಎಸ್. ನಾಡಗೌಡ ಹಾಗೂ ಹಂಪನಗೌಡ ಬಾದರ್ಲಿ ಕೂಡ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. “ಪಕ್ಷಕ್ಕೆ ನಿರಂತರವಾಗಿ ನಿಷ್ಠೆ ತೋರಿದ ನಾಯಕರಿಗಿಂತ ಕೊನೆ ಕ್ಷಣದಲ್ಲಿ ವಲಸೆ ಬಂದವರಿಗೆ ಮಣೆ ಹಾಕಲಾಗಿದೆ” ಎಂದು ಕಿಡಿಕಾರಿರುವ ಇವರ ಬೆಂಬಲಿಗರು ಕೊಪ್ಪಳ ಮತ್ತು ರಾಯಚೂರು ಭಾಗದಲ್ಲಿ ತೀವ್ರ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ. ಒಟ್ಟಾರೆಯಾಗಿ ಸಚಿವರ ಪಟ್ಟಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ಬಂಡಾಯದ ತವರೂರಾಗಿ ಮಾರ್ಪಟ್ಟಿದೆ.ಸಚಿವ ಸ್ಥಾನ ವಂಚಿತ ನಾಯಕರ ಅಸಮಾಧಾನವು ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಮಟ್ಟದ ರಾಜಕೀಯ ತಲೆನೋವನ್ನು ತಂದಿಟ್ಟಿದೆ.
Related Articles
Thank you for your comment. It is awaiting moderation.


Comments (0)