ಅಂಬರೀಶ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಸಚಿವ ರಾಮಲಿಂಗಾರೆಡ್ಡಿ ಪತ್ರ
- by Suddi Team
- October 6, 2026
- 14 Views
ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರಾಗಿದ್ದ ದಿವಂಗತ ಎಂ. ಎಚ್. ಅಂಬರೀಶ್ (ಮಂಡ್ಯದ ಗಂಡು) ಅವರಿಗೆ ಮರಣೋತ್ತರ ಬದುಕಿನ ಅತ್ಯುನ್ನತ ನಾಗರಿಕ ಗೌರವವಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಪ್ರಕಟಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಅಧಿಕೃತ ನಡವಳಿಯ ಪತ್ರ ಬರೆದಿರುವ ಅವರು, ಮುಂಬರುವ ರಾಜ್ಯೋತ್ಸವ ಅಥವಾ ಯಾವುದೇ ಸೂಕ್ತ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಿ ಗೌರವಿಸಬೇಕೆಂದು ಕೋರಿದ್ದಾರೆ.
ಅಪಾರ ಕೊಡುಗೆಯ ಸ್ಮರಣೆ:
ಕನ್ನಡ ಚಿತ್ರರಂಗದಲ್ಲಿ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ, ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ ‘ರೆಬೆಲ್ ಸ್ಟಾರ್’ ಆಗಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿರುವ ಅಂಬರೀಶ್ ಅವರ ಸಾಧನೆಯನ್ನು ಪತ್ರದಲ್ಲಿ ಕೊಂಡಾಡಲಾಗಿದೆ. ಚಿತ್ರರಂಗದ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಮತ್ತು ಕಲಾವಿದರ ಹಿತ ಕಾಯುವಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿದ್ದರು. ರಾಜಕೀಯ ರಂಗದಲ್ಲೂ ಶಾಸಕರಾಗಿ, ಸಂಸದರಾಗಿ ಹಾಗೂ ಕೇಂದ್ರ ಮತ್ತು ರಾಜ್ಯ ಸಚಿವರಾಗಿ ನಾಡಿನ ಅಭಿವೃದ್ಧಿಗೆ, ವಿಶೇಷವಾಗಿ ಮಂಡ್ಯ ಹಾಗೂ ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗಾಗಿ ಅವರು ನಿರಂತರವಾಗಿ ಶ್ರಮಿಸಿದ್ದರು ಎಂದು ಸಚಿವರು ಸ್ಮರಿಸಿದ್ದಾರೆ.
ಅಭಿಮಾನಿಗಳ ಸಂಘದ ಮನವಿ:
ಅಂಬರೀಶ್ ಅವರ ನಾಡಿನ ಮೇಲಿನ ಪ್ರೀತಿ ಮತ್ತು ಜನಪ್ರಿಯತೆಯನ್ನು ಗೌರವಿಸಿ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡುವುದು ಅತ್ಯಂತ ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ‘ಅಖಿಲ ಕರ್ನಾಟಕ ನ್ಯಾಯ ನೀತಿ ಧರ್ಮ ಡಾ. ಅಂಬರೀಶ್ ಅಭಿಮಾನಿಗಳ ಸಂಘದವರು’ ತಮಗೆ ಸಲ್ಲಿಸಿರುವ ಸ್ವಯಂಪ್ರೇರಿತ ಮನವಿಯನ್ನು ಪತ್ರದೊಂದಿಗೆ ಲಗತ್ತಿಸಿರುವುದಾಗಿ ರಾಮಲಿಂಗಾರೆಡ್ಡಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Related Articles
Thank you for your comment. It is awaiting moderation.


Comments (0)