ಧರ್ಮ ಸಮಾಜ ಒಂದಕ್ಕೊಂದು ಪೂರಕ: ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- September 17, 2026
- 7 Views
ಚನ್ನಗಿರಿ: “ಧರ್ಮವು ಕೇವಲ ಪೂಜೆ ಪುನಸ್ಕಾರಗಳಿಗೆ ಸೀಮಿತವಾಗದೇ ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಶಕ್ತಿಯಾಗಬೇಕು. ಧರ್ಮ ಮತ್ತು ಸಮಾಜ ಒಂದಕ್ಕೊಂದು ಪೂರಕವಾಗಿವೆ” ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಹಿರೇಮಠದ ಸಭಾಂಗಣದಲ್ಲಿ ಗುರುವಾರ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಧಾರ್ಮಿಕ ಮೌಲ್ಯಗಳ ಜೊತೆಗೆ ಆಧುನಿಕ ಶಿಕ್ಷಣ, ಜ್ಞಾನ ಮತ್ತು ಕೌಶಲ್ಯಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಚಿಂತನೆ ಇರಬೇಕು. ಯುವಕರು ಸಂಸ್ಕೃತಿ ಸಂಸ್ಕಾರ ಮತ್ತು ರಾಷ್ಟ್ರಪ್ರಜ್ಞೆಯೊಂದಿಗೆ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಸಹಬಾಳ್ವೆ ಮತ್ತು ಪ್ರಕೃತಿ ರಕ್ಷಣೆ ಇಂದಿನ ಅಗತ್ಯ:
ಜಾತಿ, ವರ್ಣ, ಭೇದ ಭಾವಗಳನ್ನು ಮೀರಿ ಪರಸ್ಪರ ಗೌರವ, ಪ್ರೀತಿ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಯಬೇಕು. ಬಡವರು, ಅಶಕ್ತರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಾಗುವುದೇ ಧರ್ಮದ ನೈಜ ಆಚರಣೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರ ಸಂದೇಶವನ್ನು ನೆನಪಿಸಿದರು. ಕ್ರಿಯಾಶೀಲ ಬದುಕು ಜೀವನದ ಉನ್ನತಿಗೆ ಅಡಿಪಾಯವಾಗಿದ್ದು, ದೇಹವನ್ನು ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಜೀವನ ಸಾರ್ಥಕಗೊಳ್ಳುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಮಾತನಾಡಿ, ನಾಡಿನ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು. ನೀರು, ಮರ, ಮಣ್ಣು ಮತ್ತು ಪ್ರಕೃತಿಯನ್ನು ರಕ್ಷಿಸುವುದು ಇಂದಿನ ಸಮಾಜದ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.
ಶ್ರೀ ಕಾಶಿ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಆಶೀರ್ವಚನ ನೀಡಿ, ಯುವಜನರನ್ನು ದುಶ್ಚಟಗಳಿಂದ ದೂರವಿಟ್ಟು ಆರೋಗ್ಯಕರ ಹಾಗೂ ಸಾತ್ವಿಕ ಜೀವನದ ಕಡೆಗೆ ಕೊಂಡೊಯ್ಯುವ ಜಾಗೃತಿ ಮೂಡಿಸಬೇಕಾಗಿದೆ. ಸಮಾಜ ನಿರ್ಮಾಣದಲ್ಲಿ ಪುರುಷರು ಮತ್ತು ಮಹಿಳೆಯರು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಆಧುನಿಕತೆಯ ಹೆಸರಿನಲ್ಲಿ ಪೂಜೆ, ಹೋಮ, ಹವನ, ಯಜ್ಞ ಯಾಗಾದಿಗಳನ್ನು ವಿರೋಧಿಸುವ ಪ್ರವೃತ್ತಿ ಒಳ್ಳೆಯದಲ್ಲ; ಜನರ ಒಳಿತಿಗಾಗಿಯೇ ಇವೆಲ್ಲ ಆಚರಣೆಗಳು ಬೆಳೆದು ಬಂದಿವೆ ಎಂದರು.
ಸಮಾರಂಭದಲ್ಲಿ ಶಾಸಕ ಬಸವರಾಜ ಶಿವಗಂಗಾ, ಮಾಜಿ ಶಾಸಕ ಮಹಿಮಾ ಪಟೇಲ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಸಮಾರಂಭಕ್ಕೂ ಮುನ್ನ ಶ್ರೀ ಕಡೂರು ವೀರಭದ್ರೇಶ್ವರ ನಿವಾಸ ಹಾಗೂ ಸೌಮ್ಯ ವಾಣಿಜ್ಯ ಸಂಕೀರ್ಣವನ್ನು ಜಗದ್ಗುರು ತ್ರಯರು ಉದ್ಘಾಟಿಸಿದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ವಿರಕ್ತಮಠದ ಡಾ. ಬಸವ ಜಯಚಂದ್ರ ಸ್ವಾಮಿಗಳು, ಡಾ. ಕೇದಾರ ಶಿವಾಶಾಂತವೀರ ಶಿವಾಚಾರ್ಯರು ಸೇರಿದಂತೆ 20ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು. ಇದೇ ವೇಳೆ ‘ಗುರುಪಥ ದರ್ಶಿನಿ’ ಕೃತಿಯನ್ನು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಬಿಡುಗಡೆಗೊಳಿಸಿದರು.
Related Articles
Thank you for your comment. It is awaiting moderation.


Comments (0)