ಧರ್ಮದಿಂದ ಸಂಸ್ಕೃತಿ-ಸಂಸ್ಕೃತಿಯಿಂದ ಸಮಾಜಕ್ಕೆ ಬಲ: ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- September 16, 2026
- 238 Views
ತರೀಕೆರೆ: “ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಾಗದೇ ಜನಜಾಗೃತಿ ಸಮಾಜ ಜಾಗೃತಿಯ ಕೇಂದ್ರಗಳಾಗಬೇಕು. ಧರ್ಮದಿಂದ ಸಂಸ್ಕೃತಿ ಉಳಿದರೆ ಸಂಸ್ಕೃತಿಯಿಂದ ಸಮಾಜಕ್ಕೆ ಹೆಚ್ಚಿನ ಬಲ ಪ್ರಾಪ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ” ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಹಳಿಯೂರು ಗ್ರಾಮದ ಶ್ರೀ ಬಯಲು ಬಸವೇಶ್ವರಸ್ವಾಮಿ ಹಾಗೂ ಶ್ರೀ ಉಮಾಮಹೇಶ್ವರಸ್ವಾಮಿ ಉತ್ಸವ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ಮಂಡಲ ಪೂಜಾ ಮಹೋತ್ಸವದ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಆಧುನಿಕತೆಯ ನಡುವೆ ಸಂಸ್ಕಾರ ಮರೆಯದಿರಿ:
ಇಂದಿನ ಯುವ ಜನಾಂಗ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಧರ್ಮ ಸಂಸ್ಕೃತಿ ಪರಂಪರೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಮರೆಯಬಾರದು. ವಿಜ್ಞಾನವನ್ನು ಸ್ವೀಕರಿಸೋಣ, ಆದರೆ ಸಂಸ್ಕಾರವನ್ನು ಕಳೆದುಕೊಳ್ಳಬಾರದು. ಆಧುನಿಕತೆಯನ್ನು ಅಪ್ಪಿಕೊಳ್ಳೋಣ ಆದರೆ ನಮ್ಮ ಧಾರ್ಮಿಕ ಪರಂಪರೆಯನ್ನು ನಿರ್ಲಕ್ಷಿಸಬಾರದು. ದೇವರ ಮುಂದೆ ಎಲ್ಲರೂ ಸಮಾನರು. ಜಾತಿ ವರ್ಗ ಆರ್ಥಿಕ ಸ್ಥಿತಿ ಎಂಬ ಭೇದಗಳನ್ನು ಮೀರಿ ಪರಸ್ಪರ ಪ್ರೀತಿ ಸಹೋದರತ್ವ ಮತ್ತು ಸೌಹಾರ್ದದಿಂದ ಬದುಕುವುದೇ ನಿಜವಾದ ಧರ್ಮಾಚರಣೆ. ಮಕ್ಕಳಿಗೆ ಸಂಸ್ಕಾರ ನೀಡೋಣ, ಯುವಕರಲ್ಲಿ ಧರ್ಮ ಪ್ರಜ್ಞೆ ಬೆಳೆಸೋಣ, ಗುರು ಹಿರಿಯರನ್ನು ಗೌರವಿಸೋಣ ಎಂದು ಶ್ರೀಗಳು ಕರೆ ನೀಡಿದರು.
ದಾಸೋಹದ ಮನೋಭಾವ ಬೆಳೆಸಿ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡಬೇಕು. ವೀರಶೈವ ಧರ್ಮ ಸಿದ್ಧಾಂತದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ಮೌಲ್ಯಗಳನ್ನು ಜೋಡಿಸಿ ಸಮಾಜವನ್ನು ಉದ್ಧರಿಸಿದ್ದಾರೆ. ಹಳಿಯೂರು ಗ್ರಾಮದ ಸದಸ್ಯರು ಸುಂದರವಾದ ದೇವಾಲಯ ನಿರ್ಮಿಸಿ ಬಯಲು ಬಸವೇಶ್ವರ ಮತ್ತು ಉಮಾಮಹೇಶ್ವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು.
ಗಣ್ಯರ ಉಪಸ್ಥಿತಿ ಮತ್ತು ವಿಚಾರ ಮಂಡನೆ:
ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ದೇವಾಲಯಗಳು ಪೂಜೆ ಆಚರಣೆಗೆ ಸೀಮಿತವಾಗಬಾರದು, ನಡೆ ನುಡಿ ಸಂಸ್ಕಾರ ಮತ್ತು ಬದುಕಿನ ಮಾರ್ಗವಾಗಿದ್ದು ಸಮಾಜದ ವಿಕೇಂದ್ರೀಕರಣದ ಕೇಂದ್ರಗಳಾಗಬೇಕೆಂದರು. ತರೀಕೆರೆ ಜಗದೀಶ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.
ತರೀಕೆರೆ ಶಾಸಕರಾದ ಜಿ.ಹೆಚ್.ಶ್ರೀನಿವಾಸ್ ಅವರು ‘ರಂಭಾಪುರಿ ಬೆಳಗು’ ಡಿಜಿಟಲ್ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಬೆಳೆಯುವ ಯುವ ಜನಾಂಗದಲ್ಲಿ ಧರ್ಮ ಗುರು ಪರಂಪರೆ ಸಂಸ್ಕೃತಿ ಸಂಸ್ಕಾರ ಕೊಡುವ ಕೇಂದ್ರಗಳಾಗಬೇಕು, ಜನ ಜಾಗೃತಿ ವಿದ್ಯೆ ಸಂಸ್ಕಾರ ಸೇವೆ ಮತ್ತು ವಿಕೇಂದ್ರೀಕರಣದ ಕೇಂದ್ರಗಳಾಗಬೇಕು ಎಂದರು. ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ದೇವರ ಪ್ರತಿಷ್ಠಾಪನೆ ಜೊತೆಗೆ ಧರ್ಮವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ, ದೇವಾಲಯಗಳನ್ನು ಕಟ್ಟುವುದರ ಜೊತೆಗೆ ಸದ್ಗುಣಗಳ ಸಮಾಜವನ್ನು ಕಟ್ಟೋಣ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್.ಧ್ರುವಕುಮಾರ್, ಕಾಂಗ್ರೆಸ್ ಮುಖಂಡ ಹೆಚ್.ಎಂ.ಗೋಪಿಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ನಂದಿಪುರ ನಂದೀಶ್ವರ ಶಿವಾಚಾರ್ಯರು, ಹಣ್ಣೆ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಸಮಾರಂಭದಲ್ಲಿ ಪಾಲ್ಗೊಂಡು ನುಡಿ ಪುಷ್ಪ ಸಮರ್ಪಿಸಿದರು. ತಾವರೆಕೆರೆ ಅಭಿನವ ಸಿದ್ದಲಿಂಗ ಶಿವಾಚಾರ್ಯರು ನಿರೂಪಿಸಿದರು. ಅರುಣ್ ಕುಮಾರ್ ಸ್ವಾಗತಿಸಿದರು. ಬೆಂಗಳೂರಿನ ಶಿವಶಂಕರ ಶಾಸ್ತ್ರಿ ತಂಡದವರಿಂದ ಭಕ್ತಿಗೀತೆ ಕಾರ್ಯಕ್ರಮ ಜರುಗಿತು.
ಸಮಾರಂಭಕ್ಕೂ ಮುನ್ನ ಹಳಿಯೂರು ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವದಿಂದ ನಡೆಯಿತು. ಸಾಂಸ್ಕೃತಿಕ ಕಲಾತಂಡ ಹಾಗೂ ವೀಳಗಾಸಿ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡು ಎಲ್ಲರ ಗಮನವನ್ನು ಸೆಳೆದರು. ಹಳಿಯೂರು ಸುತ್ತ ಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು.
Related Articles
Thank you for your comment. It is awaiting moderation.


Comments (0)