ನಟ ಚೇತನ್ ಅಹಿಂಸಾ ಮನೆಗೆ ಅಣ್ಣಾವ್ರ ಅಭಿಮಾನಿಗಳ ಮುತ್ತಿಗೆ:ಕಡೆಗೂ ಕ್ಷಮೆಯಾಚನೆ
- by Suddi Team
- April 25, 2026
- 11 Views
ಬೆಂಗಳೂರು: ನಟ ಚೇತನ್ ಅಹಿಂಸಾ ಅವರು ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಕುರಿತು ನೀಡಿದ್ದ ಹೇಳಿಕೆ ರಾಜ್ಯಾದ್ಯಂತ ಕಿಚ್ಚು ಹಚ್ಚಿದ್ದು, ಇಂದು ಆಕ್ರೋಶಗೊಂಡ ನೂರಾರು ಅಭಿಮಾನಿಗಳು ನಟನ ನಿವಾಸಕ್ಕೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು.
ಉದ್ವಿಗ್ನಗೊಂಡ ವಾತಾವರಣ:
ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಚೇತನ್ ಅವರ ನಿವಾಸಕ್ಕೆ ಜಮಾಯಿಸಿದ ನೂರಾರು ಅಭಿಮಾನಿಗಳು ಮತ್ತು ಕನ್ನಡಪರ ಸಂಘಟನೆಯ ಕಾರ್ಯಕರ್ತರು, ನಟನ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಾರಾ ಗೋವಿಂದು ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಚೇತನ್ ಮನೆಗೆ ನುಗ್ಗಲು ಯತ್ನಿಸಿದ ಅಭಿಮಾನಿಗಳನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಗಂಟೆಗಳ ಕಾಲ ಸತಾಯಿಸಿದ ನಟ:
ಪ್ರತಿಭಟನಾಕಾರರು ಕ್ಷಮೆಯಾಚನೆಗೆ ಪಟ್ಟು ಹಿಡಿದರೂ ಚೇತನ್ ಸುಮಾರು ಎರಡು ಗಂಟೆಗಳ ಕಾಲ ಮನೆಯಿಂದ ಹೊರಬರದೆ ಸತಾಯಿಸಿದರು. ಮನೆಯೊಳಗೆ ಸಂಧಾನಕ್ಕಾಗಿ ಹೋದ ಮುಖಂಡರ ಜೊತೆಗೂ ಚೇತನ್ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದು ಅಭಿಮಾನಿಗಳ ಆಕ್ರೋಶವನ್ನು ಇಮ್ಮಡಿಗೊಳಿಸಿತು. “ಕನ್ನಡದ ಅಸ್ಮಿತೆಯಾದ ಡಾ. ರಾಜ್‌ಕುಮಾರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಸಹಿಸಲಾಗದು” ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಕ್ಷಮೆಯಾಚನೆಯೊಂದಿಗೆ ಸದ್ಯಕ್ಕೆ ತಣ್ಣಗಾದ ವಿವಾದ:
ಪೊಲೀಸ್ ಬಿಗಿ ಬಂದೋಬಸ್ತ್ ಮತ್ತು ಸಂಘಟನೆಗಳ ತೀವ್ರ ಒತ್ತಡಕ್ಕೆ ಮಣಿದ ಚೇತನ್, ಅಂತಿಮವಾಗಿ ಮನೆಯಿಂದ ಹೊರಬಂದು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು. “ನನ್ನ ಪೋಸ್ಟ್‌ನಿಂದ ಅಭಿಮಾನಿಗಳ ಭಾವನೆಗಳಿಗೆ ನೋವಾಗಿದ್ದರೆ ನಾನು ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ” ಎಂದು ಅವರು ತಿಳಿಸಿದರು. ಈ ಮೂಲಕ ಗಂಟೆಗಳ ಕಾಲ ನಡೆದ ಹೈಡ್ರಾಮಾಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ.
Related Articles
Thank you for your comment. It is awaiting moderation.


Comments (0)