ನಟ ಚೇತನ್ ವಿರುದ್ಧ ಸಾರಾ ಗೋವಿಂದು ಆಕ್ರೋಶ; ‘ಗಡಿಪಾರು’ ಮಾಡಲು ಆಗ್ರಹ
- by Suddi Team
- April 25, 2026
- 3 Views
ಬೆಂಗಳೂರು: ಸ್ಯಾಂಡಲ್‌ವುಡ್‌ನ ವಿವಾದಿತ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ ಅವರು ಕನ್ನಡದ ಅಸ್ಮಿತೆ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಕುರಿತು ನೀಡಿರುವ ಹೇಳಿಕೆ ಈಗ ರಾಜ್ಯಾದ್ಯಂತ ಕಿಚ್ಚು ಹಚ್ಚಿದೆ. ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕನ್ನಡಪರ ಹೋರಾಟಗಾರ ಸಾರಾ ಗೋವಿಂದು, ಚೇತನ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಚೇತನ್ ಅವರ ಈ ನಿಲುವನ್ನು ಕಟುವಾಗಿ ಟೀಕಿಸಿರುವ ಸಾರಾ ಗೋವಿಂದು, ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ಚೇತನ್ ಅಹಿಂಸ ಎಂಬ ಈ ವ್ಯಕ್ತಿಗೆ ಕರ್ನಾಟಕದ ನೆಲ, ಜಲ ಮತ್ತು ಇಲ್ಲಿನ ಸಾಂಸ್ಕೃತಿಕ ರಾಯಭಾರಿಗಳ ಬಗ್ಗೆ ಕನಿಷ್ಠ ಗೌರವವಿಲ್ಲ. ಡಾ. ರಾಜ್‌ಕುಮಾರ್ ಅವರು ಈ ನಾಡಿಗೆ ನೀಡಿದ ಕೊಡುಗೆಯನ್ನು ಅರಿಯದ ಇವರು ಕೇವಲ ಪ್ರಚಾರಕ್ಕಾಗಿ ಇಂತಹ ಅಗ್ಗದ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಇವನೊಬ್ಬ ವಿದೇಶಿ ತಳಿ. ನಮ್ಮ ನಾಡಿನ ಶಾಂತಿಯನ್ನು ಕೆಡಿಸಲು ಇವನು ಪದೇ ಪದೇ ಇಂತಹ ಪ್ರಯತ್ನ ಮಾಡುತ್ತಿದ್ದಾನೆ. ಈ ಬಾರಿ ಅವನಿಗೆ ಒದೆ ಬೀಳುವುದು ಖಂಡಿತ, ಅವನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರ ಕೂಡಲೇ ಚೇತನ್ ಅವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯಾದ್ಯಂತ ಹೆಚ್ಚಿದ ಪ್ರತಿಭಟನೆ
ಚೇತನ್ ಅಹಿಂಸ ಅವರ ಹೇಳಿಕೆ ಕೇವಲ ಚಿತ್ರರಂಗಕ್ಕೆ ಸೀಮಿತವಾಗದೆ, ಸಾಮಾಜಿಕವಾಗಿಯೂ ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡಾ. ರಾಜ್ ಅಭಿಮಾನಿ ಸಂಘಗಳು ಚೇತನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿವೆ. ಈಗಾಗಲೇ ಹತ್ತಾರು ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ದೂರು ದಾಖಲಾಗಿದ್ದು, ಸಮಾಜದಲ್ಲಿ ಅಶಾಂತಿ ಹರಡಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕನ್ನಡ ನೆಲದ ಅಸ್ಮಿತೆ ಮತ್ತು ಕೋಟ್ಯಂತರ ಜನರ ಭಾವನೆಗಳೊಂದಿಗೆ ಆಟವಾಡುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬ ಕೂಗು ಕನ್ನಡಪರ ಸಂಘಟನೆಗಳಿಂದ ಕೇಳಿಬರುತ್ತಿದೆ. ಈ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
Related Articles
Thank you for your comment. It is awaiting moderation.


Comments (0)