ಪಿಓಪಿ ಗಣೇಶ ಮೂರ್ತಿ ತಯಾರಿಕೆ, ಮಾರಾಟ ತಡೆಗೆ ವಿಶೇಷ ತನಿಖಾದಳ ರಚನೆ: ಸಚಿವ ರಾಮಲಿಂಗಾರೆಡ್ಡಿ
- by Suddi Team
- September 4, 2026
- 10 Views
ಬೆಂಗಳೂರು: ರಾಜ್ಯದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಪರಿಸರಕ್ಕೆ ಹಾನಿ ಉಂಟುಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣೇಶ ವಿಗ್ರಹಗಳ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಲು ಅರಣ್ಯ ಇಲಾಖೆ ವತಿಯಿಂದ ವಿಶೇಷ ಕಾರ್ಯಪಡೆ (ತನಿಖಾದಳ) ರಚಿಸಲಾಗಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು, ರಾಮನಗರ, ಮೈಸೂರು, ಮಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗಣೇಶ ಮೂರ್ತಿಗಳ ಗುರುತಿಸುವಿಕೆ, ಮಾರಾಟ ತಡೆಗಟ್ಟುವಿಕೆ ಹಾಗೂ ವಶಪಡಿಸಿಕೊಳ್ಳುವಿಕೆಗಾಗಿ ಈ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.
872 ಪಿಓಪಿ ಗಣೇಶ ಮೂರ್ತಿಗಳು ಮುಟ್ಟುಗೋಲು:
ಕಳೆದ ಆಗಸ್ಟ್ 18 ರಿಂದ ಸೆಪ್ಟೆಂಬರ್ 2 ರವರೆಗೆ ಈ ವಿಶೇಷ ತಂಡವು ಹಮ್ಮಿಕೊಂಡಿದ್ದ ಕಾರ್ಯಾಚರಣೆಯಲ್ಲಿ, ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪಿಓಪಿ ಮೂರ್ತಿಗಳನ್ನು ತಯಾರಿಸುತ್ತಿದ್ದ ಹಾಗೂ ಸಂಗ್ರಹಿಸಿಟ್ಟಿದ್ದ ಒಟ್ಟು 153 ಮಳಿಗೆ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿ ಪರಿವೀಕ್ಷಿಸಲಾಗಿದೆ. ಈ ವೇಳೆ ನಿಯಮ ಬಾಹಿರವಾಗಿ ಸಿದ್ಧಪಡಿಸಲಾಗಿದ್ದ 872 ಪಿಓಪಿ ಗಣೇಶ ಮೂರ್ತಿಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ರಾಜ್ಯದಲ್ಲಿ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಹಾಗೂ ಜಲಮೂಲಗಳಲ್ಲಿ ಅವುಗಳ ವಿಸರ್ಜನೆಯನ್ನು ಕರ್ನಾಟಕ ಸರ್ಕಾರವು ಕಡ್ಡಾಯವಾಗಿ ನಿಷೇಧಿಸಿದೆ ಎಂದು ಸಚಿವರು ನೆನಪಿಸಿದ್ದಾರೆ.
ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಸಚಿವರ ಮನವಿ:
ಸಾರ್ವಜನಿಕರು ಕಡ್ಡಾಯವಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನೇ ಬಳಸುವ ಮೂಲಕ ಪರಿಸರ ಹಾಗೂ ಜಲಚರಗಳ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಸಚಿವರು ವಿನಂತಿಸಿದ್ದಾರೆ. ಜೈವಿಕವಾಗಿ ನೀರಿನಲ್ಲಿ ಸುಲಭವಾಗಿ ಕರಗುವ ಮಣ್ಣಿನ ಮೂರ್ತಿಗಳು ಜಲಮಾಲಿನ್ಯ ಮತ್ತು ತ್ಯಾಜ್ಯದ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಪಿಓಪಿ ಮೂರ್ತಿಗಳನ್ನು ಖರೀದಿಸದೆ, ಪರಿಸರ ಸ್ನೇಹಿ ಗಣೇಶನ ಹಬ್ಬವನ್ನು ಆಚರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
Related Articles
Thank you for your comment. It is awaiting moderation.


Comments (0)