ನಾಡಿನ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಬೆಂಗಳೂರು: “ಭಾರತದ ಬಲ ಕರ್ನಾಟಕ” ಎಂಬ ದೂರದೃಷ್ಟಿಯ ಪರಿಕಲ್ಪನೆಯೊಂದಿಗೆ ನಾವೆಲ್ಲರೂ ಬೆಳೆಯಬೇಕಿದೆ. ಇಂದು ದೇಶದ ಒಟ್ಟು ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ. 5.5 ರಷ್ಟಿದ್ದರೆ, ದೇಶದ ಆರ್ಥಿಕತೆಗೆ ರಾಜ್ಯ ನೀಡುತ್ತಿರುವ ಕೊಡುಗೆ ಬರೋಬ್ಬರಿ ಶೇ. 9.19 ರಷ್ಟಿದೆ. ಆ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರು ಇಂದು ಇಡೀ ಭಾರತದ ಹೆಬ್ಬಾಗಿಲಾಗಿ ಪರಿವರ್ತನೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಮ್ಮೆಯಿಂದ ತಿಳಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನಾಡಿನ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಧ್ವಜದ ಕೆಳಗೆ ನಾಡಧ್ವಜ ಹಾರಾಡಲಿ:

“ಸಂವಿಧಾನದ ಚೌಕಟ್ಟಿನಲ್ಲಿ ನಾಡಧ್ವಜ ಹೊಂದಬಾರದು ಎಂದು ಎಲ್ಲೂ ಹೇಳಿಲ್ಲ. ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆ ಬಾರದಂತೆ, ಅದರ ಕೆಳಗೆ ನಮ್ಮ ಹೆಮ್ಮೆಯ ಕೆಂಪು-ಹಳದಿ ನಾಡಧ್ವಜ ಅಧಿಕೃತವಾಗಿ ಹಾರಾಡಲು ಸರ್ಕಾರ ಬದ್ಧವಾಗಿದೆ. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುತ್ತಿದ್ದು, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಹಾಗೂ ಸಾರ್ವಜನಿಕ ಚರ್ಚೆಗೆ ಮುಕ್ತ ಅವಕಾಶ ನೀಡಿ ಒಮ್ಮತದ ನಿರ್ಣಯ ಕೈಗೊಳ್ಳಲಾಗುವುದು. ಕನ್ನಡದ ಹಕ್ಕಿನ ವಿಷಯ ಬಂದಾಗ ಯಾವುದೇ ರಾಜಕೀಯ ಇಲ್ಲದೆ ಎಲ್ಲಾ ಪಕ್ಷಗಳೂ ಒಗ್ಗಟ್ಟಾಗಬೇಕು” ಎಂದು ಅವರು ಕರೆ ನೀಡಿದರು.

ಖಾಸಗಿ ಸಂಸ್ಥೆಗಳಿಗೂ ಕನ್ನಡ ಧ್ವಜ, ಉದ್ಯೋಗದಲ್ಲಿ ಆದ್ಯತೆ ಕಡ್ಡಾಯ:

ರಾಜ್ಯದಲ್ಲಿ ನೆಲೆಗೊಂಡಿರುವ ಐಟಿ-ಬಿಟಿ ಕಂಪನಿಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲಾ ಖಾಸಗಿ ಸಂಸ್ಥೆಗಳು ಹಾಗೂ ವಿದ್ಯಾಸಂಸ್ಥೆಗಳು ತಮ್ಮ ಕಚೇರಿಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವುದರ ಜೊತೆಗೆ ಕನ್ನಡ ಧ್ವಜ ಹಾರಿಸುವುದನ್ನು ಕಡ್ಡಾಯಗೊಳಿಸಲು ಇದೇ ತಿಂಗಳು ಸರ್ಕಾರಿ ಆದೇಶ ಹೊರಡಿಸಲಾಗುವುದು. ಇಷ್ಟೇ ಅಲ್ಲದೆ, ಕರ್ನಾಟಕದಲ್ಲಿ ನೆಲೆಸಿರುವ ಎಲ್ಲಾ ಕಾರ್ಖಾನೆ ಮತ್ತು ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೇ ಮೊದಲ ಆದ್ಯತೆ ನೀಡಬೇಕು ಎಂದು ಕಡಕ್ ಎಚ್ಚರಿಕೆ ನೀಡಿದರು. ಕಚೇರಿಗಳ ನಾಮಫಲಕಗಳಲ್ಲಿ ಶೇ. 60 ಕನ್ನಡ ಮತ್ತು ಶೇ. 40 ಇಂಗ್ಲಿಷ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಬೆಂಗಳೂರಿನ ಭಾಷಾ ವೈವಿಧ್ಯತೆ ಮತ್ತು ಆತಂಕ:

2011ರ ಜನಗಣತಿ ಹಾಗೂ ಭಾಷಾ ಸಮೀಕ್ಷೆಗಳ ಮಾಹಿತಿ ನೀಡಿದ ಅವರು, “ಬೆಂಗಳೂರಿನಲ್ಲಿ ಇಂದು 107 ಭಾಷೆಗಳನ್ನು ಮಾತನಾಡುವ ಜನರಿದ್ದು, ಸುಮಾರು 44 ರಿಂದ 47 ಲಕ್ಷ ವಲಸಿಗರಿದ್ದಾರೆ. ವಲಸೆ ಬಂದವರಲ್ಲಿ ಶೇ. 78 ಕ್ಕೂ ಹೆಚ್ಚು ಜನ ಇಲ್ಲೇ ನೆಲೆಸುತ್ತಿದ್ದಾರೆ. ಇದರಿಂದಾಗಿ ಹಿಂದೆ ಶೇ. 90 ರಷ್ಟಿದ್ದ ಕನ್ನಡ ಮಾತನಾಡುವವರ ಸಂಖ್ಯೆ ಇಂದು ಶೇ. 44.5 ಕ್ಕೆ ಕುಸಿದಿದೆ. ಇದು ನಾವೆಲ್ಲರೂ ಆಲೋಚಿಸಬೇಕಾದ ವಿಷಯ. ಅನ್ಯಭಾಷೆಗಳು ಇಲ್ಲಿ ಅತಿಥಿಯಾಗಿರಬೇಕೇ ಹೊರತು ಅಧಿಪತಿಯಾಗಬಾರದು. ಬೇರೆ ಭಾಷೆಯನ್ನು ದ್ವೇಷಿಸದೆ, ಕನ್ನಡವನ್ನು ನಮ್ಮ ಬದುಕಿನ ಭಾಷೆಯಾಗಿಸಿಕೊಳ್ಳಬೇಕು” ಎಂದರು.

ಎಐ ಮತ್ತು ಜಾಗತಿಕ ತಂತ್ರಜ್ಞಾನಕ್ಕೆ ಕನ್ನಡದ ಸ್ಪರ್ಶ:

“ಕನ್ನಡ ಕೇವಲ ಆಡಳಿತ ಭಾಷೆಯಾಗು ಉಳಿಯಬಾರದು. ಡಿಜಿಟಲ್ ಯುಗದಲ್ಲಿ ಕನ್ನಡವು ಕೃತಕ ಬುದ್ಧಿಮತ್ತೆ (AI), ವಿಜ್ಞಾನ ಹಾಗೂ ಸ್ಟಾರ್ಟ್‌ಅಪ್‌ಗಳ ಜಾಗತಿಕ ತಂತ್ರಜ್ಞಾನದ ಭಾಷೆಯಾಗಿ ಬೆಳೆಯಬೇಕು” ಎಂದು ಆಶಿಸಿದ ಅವರು, ಸರ್ಕಾರಿ ಶಾಲೆಗಳ ಮಕ್ಕಳನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸಲು 6ನೇ ತರಗತಿಯಿಂದ 12ನೇ ತರಗತಿವರೆಗೆ ಉಚಿತ ಎಐ ತರಬೇತಿ ಹಾಗೂ ಕೌಶಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಶಿಕ್ಷಣ ಕ್ಷೇತ್ರಕ್ಕೆ ಬಲ – ಶೇ. 7 ರಷ್ಟು ವಿಶೇಷ ಮೀಸಲಾತಿ:

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ (1 ರಿಂದ 10ನೇ ತರಗತಿ ಹಾಗೂ ಪಿಯುಸಿ) ಓದಿದ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಹಾಗೂ ವೈದ್ಯಕೀಯದಂತಹ ಉನ್ನತ ವೃತ್ತಿಪರ ಶಿಕ್ಷಣದ ಪ್ರವೇಶಾತಿಯಲ್ಲಿ ಶೇಕಡಾ 7 ರಷ್ಟು ವಿಶೇಷ ಮೀಸಲಾತಿಯನ್ನು ಸರ್ಕಾರ ಕಲ್ಪಿಸಿದೆ. ಸಿಎಸ್ಆರ್ (CSR) ನಿಧಿ ಬಳಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅತ್ಯಾಧುನಿಕವಾಗಿ ನವೀಕರಿಸಲಾಗುತ್ತಿದ್ದು, 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಹಾಗೂ 25,498 ದ್ವಿಭಾಷಾ ಶಾಲೆಗಳ ಆರಂಭದ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.

ಕಾಂಗ್ರೆಸ್ ಕೊಡುಗೆಯ ಸ್ಮರಣೆ:

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇತಿಹಾಸದ ಜೊತೆಗೆ, ಕರ್ನಾಟಕ ಏಕೀಕರಣಕ್ಕೆ ಧ್ವನಿ ಎತ್ತಿದ್ದು ಹಾಗೂ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯ ದೇವರಾಜ ಅರಸು ಅವರು ಎಂದು ಇತಿಹಾಸವನ್ನು ಸ್ಮರಿಸಿದರು. ಮಾಸ್ತಿ, ಬೇಂದ್ರೆ, ಕುವೆಂಪು, ಬಾನು ಮುಷ್ತಾಕ್ ರಂತಹ ದಿಗ್ಗಜರ ಮಾತೃಭಾಷೆ ಬೇರೆಯಾಗಿದ್ದರೂ ಅವರೆಲ್ಲರೂ ಉಸಿರಾಡಿದ್ದು ಕನ್ನಡದಲ್ಲೇ ಎಂದು ನೆನೆದ ಅವರು, ಪ್ರಶಸ್ತಿ ಪುರಸ್ಕೃತರಾದ ಬಿ.ವಿ. ಆಚಾರ್ಯ, ಪ್ರಸಾದ್ ಬಿದ್ದಪ್ಪ, ಚನ್ನಪ್ಪ ಗೌಡ ಸೇರಿದಂತೆ 71 ಸಾಧಕರ ಸೇವೆಯನ್ನು ಕೊಂಡಾಡಿದರು.

 

Related Articles

Comments (0)

Leave a Comment