ಕೋರಮಂಗಲದಲ್ಲಿ ಕಸದಿಂದ ರಸ: ‘ಘನತ್ಯಾಜ್ಯ ಕಲಿಕಾ ಕೇಂದ್ರ’ ಹಾಗೂ ರಾಜ್ಯದ ಪ್ರಥಮ ‘ಸರ್ಕ್ಯುಲರ್ ಟೆಕ್ಸ್ಟೈಲ್ ಲ್ಯಾಬ್’ ಲೋಕಾರ್ಪಣೆ ಮಾಡಿದ ಸಚಿವ ರಾಮಲಿಂಗಾರೆಡ್ಡಿ!
- by Suddi Team
- September 7, 2026
- 5 Views
ಬೆಂಗಳೂರು: ರಾಜಧಾನಿಯನ್ನು ಕಸಮುಕ್ತ ಹಾಗೂ ಪರಿಸರಸ್ನೇಹಿ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋರಮಂಗಲದ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ (ಕಸ ರಸ ಕೇಂದ್ರ) ನೂತನವಾಗಿ ಸ್ಥಾಪಿಸಲಾದ ‘ಘನತ್ಯಾಜ್ಯ ಕಲಿಕಾ ಕೇಂದ್ರ’ ಹಾಗೂ ಬೆಂಗಳೂರಿನ ಪ್ರಥಮ ‘ಸರ್ಕ್ಯುಲರ್ ಟೆಕ್ಸ್ಟೈಲ್ ಲ್ಯಾಬ್’ ಅನ್ನು ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆಗೊಳಿಸಿದರು.
ಬರಲಿರುವ ದಿನಗಳಲ್ಲಿ ಲ್ಯಾಂಡ್ಫಿಲ್ ಮುಕ್ತ ನಗರ ನಿರ್ಮಾಣಕ್ಕೆ ಈ ವಿಶಿಷ್ಟ ಮತ್ತು ನೂತನ ತಂತ್ರಜ್ಞಾನದ ಘಟಕಗಳು ಪ್ರಮುಖ ಮುನ್ನುಡಿಯಾಗಲಿವೆ ಎಂದು ಈ ಸಂದರ್ಭದಲ್ಲಿ ಸಚಿವರು ಆಶಿಸಿದರು.
ಉದ್ಘಾಟನೆಗೊಂಡ ಘಟಕಗಳ ಪ್ರಮುಖ ವಿಶೇಷತೆಗಳು:
ಸರ್ಕ್ಯುಲರ್ ಟೆಕ್ಸ್ಟೈಲ್ ಲ್ಯಾಬ್: ನಗರದ ಗಾರ್ಮೆಂಟ್ಸ್ ಮತ್ತು ಟೈಲರಿಂಗ್ ಅಂಗಡಿಗಳಿಂದ ವ್ಯರ್ಥವಾಗಿ ಹೊರಬೀಳುವ ವಸ್ತ್ರ ತ್ಯಾಜ್ಯವನ್ನು (ಬಟ್ಟೆ ಚಿಂದಿ) ವೈಜ್ಞಾನಿಕವಾಗಿ ಸಂಗ್ರಹಿಸಿ, ಇಲ್ಲಿ ಸಂಪೂರ್ಣವಾಗಿ ಮರುಬಳಕೆ ಮಾಡಲಾಗುತ್ತದೆ.
ತ್ಯಾಜ್ಯದಿಂದ ಮೌಲ್ಯವರ್ಧನೆ & ಉದ್ಯೋಗ: ನಿರುಪಯುಕ್ತ ಬಟ್ಟೆ ಚಿಂದಿಗಳಿಂದ ಪರಿಸರಸ್ನೇಹಿ ಬ್ಯಾಗ್, ವ್ಯಾಲೆಟ್ ಹಾಗೂ ಬೆಡ್ಶೀಟ್ಗಳನ್ನು ತಯಾರಿಸಲಾಗುತ್ತದೆ. ಇದು ತ್ಯಾಜ್ಯ ಮುಕ್ತ ಉದ್ದೇಶದ ಜೊತೆಗೆ ಸ್ಥಳೀಯರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ಹಸಿ ಕಸದಿಂದ ಹೋಟೆಲ್ಗಳಿಗೆ ಇಂಧನ: ಪ್ರತಿದಿನ 13 ಟನ್ ಹಸಿ ಕಸ ಸಂಸ್ಕರಿಸುವ ಸಾಮರ್ಥ್ಯದ ‘ಬಯೋ-ಮಿಥನೈಸೇಷನ್ ಘಟಕ’ವನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಉತ್ಪಾದನೆಯಾಗುವ ಬಯೋಗ್ಯಾಸ್ ಅನ್ನು ಸುತ್ತಮುತ್ತಲಿನ ಹೋಟೆಲ್ಗಳಿಗೆ ಇಂಧನವಾಗಿ ಸರಬರಾಜು ಮಾಡಲಾಗುತ್ತದೆ. ಕಸ ಸಾಗಣೆಯನ್ನು ಸುಲಭಗೊಳಿಸಲು 25 ಟನ್ ಸಾಮರ್ಥ್ಯದ ಮಿನಿ ಟ್ರಾನ್ಸ್ಫರ್ ಸ್ಟೇಷನ್ ವ್ಯವಸ್ಥೆಯೂ ಇಲ್ಲಿದೆ.
ಥರ್ಮಾಕೋಲ್ & ಹಾಸಿಗೆಗಳ ನಾರು ಮರುಬಳಕೆ: ಪರಿಸರಕ್ಕೆ ಮಾರಕವಾಗುವ ಥರ್ಮಾಕೋಲ್ ಅನ್ನು ಇಲ್ಲೇ ಕರಗಿಸಿ ಗಟ್ಟಿ ಪದಾರ್ಥವಾಗಿಸಿ ದೆಹಲಿಗೆ ಕಳುಹಿಸಲಾಗುತ್ತದೆ. ಅಲ್ಲಿ ಇವುಗಳಿಂದ ಫೋಟೋ ಫ್ರೇಮ್ಗಳನ್ನು ತಯಾರಿಸಲಾಗುತ್ತದೆ. ಇದರೊಂದಿಗೆ ನಿರುಪಯುಕ್ತ ಹಳೆಯ ಹಾಸಿಗೆಗಳಿಂದ ನಾರನ್ನು ಬೇರ್ಪಡಿಸಿ ಮರುಬಳಕೆ ಮಾಡಲಾಗುತ್ತಿದೆ.
ಪ್ರಾಯೋಗಿಕ ತರಬೇತಿ ಮತ್ತು ಶಿಕ್ಷಣ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು, ಅಪಾರ್ಟ್ಮೆಂಟ್ ನಿವಾಸಿಗಳು, ವಾಣಿಜ್ಯ ಸಂಸ್ಥೆಗಳ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಇಲ್ಲಿ ಕಸ ವಿಂಗಡಣೆಯ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಇದಕ್ಕೆ ಆರ್ವಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಕೈಜೋಡಿಸಿವೆ.
ಮನೆ ಬಾಗಿಲಲ್ಲೇ ಬೃಹತ್ ತ್ಯಾಜ್ಯ ಸಂಗ್ರಹಣೆ ಆರಂಭ:
ಇದೇ ಸಂದರ್ಭದಲ್ಲಿ ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗರಿಕರಿಗಾಗಿ ವಿಶೇಷ ಸೌಲಭ್ಯವನ್ನು ಜಾರಿಗೆ ತರಲಾಯಿತು. ಸಾರ್ವಜನಿಕರು ತಮಗೆ ಬೇಡವಾದ ಹಳೆಯ ಸೋಫಾ, ಮಂಚ, ಮೇಜು ಮುಂತಾದ ಭಾರೀ ಗಾತ್ರದ (ಬಲ್ಕ್) ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು, ನಾಗರಿಕರ ಮನೆ ಬಾಗಿಲಿನಿಂದಲೇ ನೇರವಾಗಿ ಇಂತಹ ಬೃಹತ್ ಕಸವನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು.
ಈ ಮಹತ್ವದ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ. ಎನ್. ರಮೇಶ್, ಬಿಎಸ್ಡಬ್ಲ್ಯೂಎಂಎಲ್ ಸಿಇಒ ಕರೀಗೌಡ, ಶಶಿಕಲಾ, ಮಾಜಿ ಪಾಲಿಕೆ ಸದಸ್ಯರಾದ ಚಂದ್ರಪ್ಪ, ಗೋವರ್ಧನ ರೆಡ್ಡಿ, ಪದ್ಮಶ್ರೀ ಬಲರಾಮ್ ಸೇರಿದಂತೆ ಹಿರಿಯ ಅಧಿಕಾರಿಗಳು, ಸ್ಥಳೀಯ ಪ್ರಮುಖ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.


Comments (0)